ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

‘ಯಮರಾಜ’ ಎಂ.ಪಿ.ಶಂಕರ್‌ಗೆ ಹೆದರಿದ ಕೋಣ!

ಪೋಸ್ಟ್ ಶೇರ್ ಮಾಡಿ
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಎಂ.ಪಿ.ಶಂಕರ್ ಹತ್ತಿರ ಬಂದಾಕ್ಷಣ ಕೋಣ ಕೊಸರಿಕೊಂಡು ಓಡಲು ಪ್ರಯತ್ನಿಸುತ್ತಿತ್ತು. ಬೇರೆ ಯಾರೇ ಬಂದರೂ ಸುಮ್ಮನಿರುತ್ತಿದ್ದ ಅದಕ್ಕೆ ಎಂ.ಪಿ.ಶಂಕರ್‌ ಕಂಡರೇಕೆ ಭಯ ಎಂದು ಎಲ್ಲರೂ ತಲೆ ಕೆಡಿಸಿಕೊಂಡರು. – ‘ಭೂಲೋಕದಲ್ಲಿ ಯಮರಾಜ’ ಸಿನಿಮಾದ ಒಂದು ಶೂಟಿಂಗ್ ಸೋಜಿಗ.

ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ 1979ರಲ್ಲಿ ಬಿಡುಗಡೆಯಾದ ‘ಭೂಲೋಕದಲ್ಲಿ ಯಮರಾಜ’ ಒಂದು ಮನೋರಂಜನಾತ್ಮಕ ಚಿತ್ರ. ಪ್ರಮುಖ ಪಾತ್ರದಲ್ಲಿ ಯಮರಾಜನಾಗಿ ಎಂ.ಪಿ.ಶಂಕರ್, ಹಳ್ಳಿ ಹೈದನ ಪಾತ್ರದಲ್ಲಿ ಲೋಕೇಶ್ ನಟಿಸಿದ್ದಾರೆ. ಚಿತ್ರದ ಸನ್ನಿವೇಶವೊಂದರ ಚಿತ್ರೀಕರಣ ಕಂಠೀರವ ಸ್ಟುಡಿಯೋನ ಹೊರಭಾಗದಲ್ಲಿ ರಾತ್ರಿ ವೇಳೆ ನಿಗಧಿಯಾಗಿತ್ತು. ಯಮನ ಪಾತ್ರದಾರಿ ಎಂ.ಪಿ.ಶಂಕರ್ ಹಾಗೂ ಲೋಕೇಶ್ ಒಂದು ಕೋಣನ ಮೇಲೆ ಕೂತು ಭೂಲೋಕ ಸಂಚಾರ ಮಾಡುವ ಸನ್ನಿವೇಶದ ‘ಟ್ರಿಕ್ ಶಾಟ್’ ಶೂಟಿಂಗ್ ಮಾಡಲು ಎಲ್ಲಾ ಸಿದ್ಧತೆ ಮಾಡಿ ಅದಕ್ಕಾಗಿ ಒಂದು ಭಾರಿ ಗಾತ್ರದ, ಸೌಮ್ಯ ಸ್ವಭಾವದ ಕೋಣವೊಂದನ್ನು ತರಲಾಗಿತ್ತು.

ಕೋಣನ ಮೇಲೆ ಎಂ.ಪಿ.ಶಂಕರ್ ಹಾಗೂ ಲೋಕೇಶ್ ಇಬ್ಬರೂ ಕೂರಬೇಕಾಗಿತ್ತು. ನಿರ್ದೇಶಕ ಸಿದ್ದಲಿಂಗಯ್ಯನವರು, “ಇಬ್ಬರ ಭಾರ ಹೊರುವ ಸಾಮರ್ಥ್ಯ ಕೋಣಕ್ಕಿದೆಯೇ!?” ಎಂದು ಕೋಣದ ಮಾಲೀಕನನ್ನು ಕೇಳಿದರು. ಕೋಣನ ಮಾಲೀಕ ತಾನೂ ಅದರ ಮೇಲೆ ಕೂತು, ಮತ್ತೆ ಇಬ್ಬರನ್ನು ಹತ್ತಿಸಿಕೊಂಡು ಟ್ರಯಲ್ ಕೊಟ್ಟ! ಕೋಣ ಮಿಸಕಾಡುತ್ತಿರಲಿಲ್ಲ, ಆರಾಮವಾಗಿ ಇತ್ತು. ಮೊದಲು ಎಂ.ಪಿ.ಶಂಕರ್ ಕೋಣನ ಮೇಲೆ ಕೂರಬೇಕು. ಹಿಂದೆ ಲೋಕೇಶ್ ಕೂರಬೇಕಿತ್ತು. ಎಂ.ಪಿ.ಶಂಕರ್ ಕೋಣದ ಹತ್ತಿರ ಬಂದರು. ಕೂಡಲೇ ಕೋಣ ಓಡಲು ಮುಂದಾಯಿತು. ಮಾಲೀಕ ಮೂಗುದಾರ ಹಿಡಿದು ಹಿಂದಕ್ಕೆ ಕರೆತಂದ. ಎಂ.ಪಿ.ಶಂಕರ್ ಮತ್ತೊಂದು ಪ್ರಯತ್ನ ನಡೆಸಿದರು. ಮತ್ತೆ ಕೋಣ ಕೊಸರಾಡಿತು. ಬೇರೆ ಯಾರು ಬಂದರೂ ಅಲ್ಲಾಡದೆ ಸುಮ್ಮನಿರುತ್ತಿದ್ದ ಅದು ಎಂ.ಪಿ.ಶಂಕರ್ ಹತ್ತಿರ ಬಂದರೆ ಏಕೆ ಹೀಗೆ ಮಾಡುತ್ತಿದೆ ಎಂದು ಕೋಣದ ಮಾಲೀಕ ಸೇರಿದಂತೆ ನಿರ್ದೇಶಕರಾದಿಯಾಗಿ ಎಲ್ಲರೂ ತಲೆ ಕೆಡಿಸಿಕೊಂಡರು.

ಕೊನೆಗೆ ನಟ ಲೋಕೇಶ್ ಸಮಸ್ಯೆ ಬಗೆಹರಿಸಿದರು. ಅವರಿಗೆ ಕೋಣದ ಸಮಸ್ಯೆ ಅರ್ಥವಾಗಿತ್ತು. “ಯಮನ ವಾಹನ ಕೋಣ ಎನ್ನುವುದೇನೋ ಹೌದು. ಆದರೆ ಆ ವಿಷಯ ಈ ಕೋಣಕ್ಕೆ ಹೇಗೆ ಗೊತ್ತಾಗಬೇಕು!? ಅದು ತಾನು ಎಂದೂ ನೋಡಿರದ ಯಮ ವೇಷಧಾರಿಯನ್ನು ನೋಡಿ ಗಾಬರಿಯಾಗುತ್ತಿದೆ. ಕೋಣಕ್ಕೆ ಕಾಣಿಸದಂತೆ ಉಪಾಯವಾಗಿ ಎಂ.ಪಿ.ಶಂಕರ್‌ ಅದರ ಮೇಲೇರಬೇಕು” ಎಂದರು ಲೋಕೇಶ್‌. ನಿರ್ದೇಶಕರು ಈಗ ಕೋಣಕ್ಕೆ ಕಾಣಿಸದಂತೆ ಅಡ್ಡವಾಗಿ ಒಂದಿಬ್ಬರನ್ನು ನಿಲ್ಲಿಸಿದರು. ಎಂ.ಪಿ.ಶಂಕರ್ ಸದ್ದು ಮಾಡದೆ ಬಂದು ಅದರ ಮೇಲೇರಿದರು. ಲೋಕೇಶ್ ಹಿಂದೆ ಕುಳಿತರು. ಕೋಣ ಆರಾಮವಾಗಿ ಯಾವುದೇ ತಕರಿಲ್ಲದೆ ಶೂಟಂಗ್‌ಗೆ ಸಹಕಾರ ನೀಡಿತು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ಟೀ ಕುಡಿಯುತ್ತಿದ್ದ ಆನೆ!

(ಫೋಟೊ – ಬರಹ: ಪ್ರಗತಿ ಅಶ್ವತ್ಥ ನಾರಾಯಣ) ವನ್ಯಜೀವಿಗಳು ಮತ್ತು ಮಾನವನ ಮಧ್ಯೆಯ ಸ್ನೇಹ, ಬಾಂಧವ್ಯದ ಕುರಿತ ಹಲವು ಕತೆಗಳು

‘ಡಮ್ಮಿ’ ಜೊತೆ ನಿಜ ಕಲ್ಲುಗಳನ್ನೂ ಬೀಸಿದರು!

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಕಥಾವಸ್ತುವಿನ ದೃಷ್ಟಿಯಿಂದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ನಟ-ನಟಿಯರ ಜೊತೆ ಸ್ಥಳೀಯರೂ ಪಾತ್ರಧಾರಿಗಳಾಗಿದ್ದಾರೆ.

ಕೋಪ ಮಾಡಿಕೊಂಡ ಉದಯ್‌ಕುಮಾರ್‌

ಐದಾರು ಟೇಕ್‍ಗಳಾದರೂ ಶಾಟ್ ಓಕೆಯಾಗಲಿಲ್ಲ. `ಜಿ.ವಿ.ಅಯ್ಯರ್ ಅವರು ಮಾಡುವಂಥ ಪಾತ್ರವನ್ನು ಈ ಹುಡುಗನಿಗೆ ಕೊಟ್ಟಿದ್ದೀರಿ..’ ಎನ್ನುತ್ತಾ ಉದಯಕುಮಾರ್ ಕೋಪ ಮಾಡಿಕೊಂಡು

Exit mobile version