ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್.ರಾಜಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು ಸುಧಾರಾಣಿ ಪ್ರಮುಖ ಪಾತ್ರಧಾರಿಗಳು. ಆ ದಿನಗಳಲ್ಲೊಮ್ಮೆ ಡಾ.ರಾಜಕುಮಾರ್ ಬೆಂಗಳೂರಿನಿಂದ ತಮ್ಮ ಹುಟ್ಟೂರು ಗಾಜನೂರಿಗೆ ಹೊರಟಿದ್ದರು. ಮಾರ್ಗಮಧ್ಯೆ ‘ಮನಮೆಚ್ಚಿದ ಹುಡುಗಿ’ ಚಿತ್ರೀಕರಣ ನಡೆಯುತ್ತಿದ್ದ ಮಹದೇವಪುರಕ್ಕೆ ಭೇಟಿ ನೀಡಿದ್ದರು.
ಸನ್ನಿವೇಶವೊಂದನ್ನು ಚಿತ್ರಿಸಲು ಚಿತ್ರದ ಮೇಕಪ್ ಕಲಾವಿದ ಎಂ.ಎಸ್.ಕೇಶವ ಅವರು ಪೈಲ್ವಾನ್ ಪಾತ್ರಧಾರಿ ಎನ್.ಎನ್.ಸಿಂಹ ಅವರಿಗೆ ಮೇಕಪ್ ಮಾಡಿದ್ದರು. ಸಿಂಹ ಅವರು ಖ್ಯಾತ ರಂಗಭೂಮಿ ಕಲಾವಿದರು. ರಾಜಕುಮಾರ್ ಅವರ ಶಿಫಾರಸಿನ ಮೇಲೆ ಚಿತ್ರದಲ್ಲಿ ಅವರಿಗೆ ಪೈಲ್ವಾನ್ ಪಾತ್ರ ಲಭಿಸಿತ್ತು. ರಾಜಕುಮಾರ್ ಅವರಿಗೆ ಪೈಲ್ವಾನ್ ಮೇಕಪ್‌ನಲ್ಲಿ ಕೊಂಚ ಬದಲಾವಣೆ ಬೇಕೆನಿಸಿತು. ಮೇಕಪ್ ಕಲಾವಿದ ಎಂ.ಎಸ್.ಕೇಶವ ಅವರಿಂದ ಕತ್ತರಿ, ಬಾಚಣಿಗೆ ಪಡೆದು ಸ್ವತಃ ತಾವೇ ಮೇಕಪ್‌ಗೆ ನಿಂತರು. “ಪೈಲ್ವಾನ್ ಮೀಸೆ ಹೀಗೆ ಸುರುಳಿಯಾಗಿದ್ದರೆ ಅದರ ಖದರ್ರೇ ಬೇರೆ” ಎನ್ನುತ್ತಾ ಮೀಸೆ ಮೇಲೆ ಕತ್ತರಿಯಾಡಿಸಿ ಸರಿಪಡಿಸಿದರು.
ಆ ಘಟನೆ ಸ್ಮರಿಸುತ್ತಾ ಮೇಕಪ್ ಕಲಾವಿದ ಎಂ.ಎಸ್.ಕೇಶವ ಅವರು ಹೇಳುವುದು ಹೀಗೆ – “ರಾಜಕುಮಾರ್ ಅವರಿಗೆ ನಮ್ಮ ತಂದೆ ಎಂ.ಎಸ್.ಸುಬ್ಬಣ್ಣ ಮೇಕಪ್ ಮಾಡುತ್ತಿದ್ದರು. ಅಣ್ಣಾವ್ರಿಗೆ ನಮ್ಮ ತಂದೆಯವರನ್ನು ಕಂಡರೆ ತುಂಬಾ ಗೌರವ, ಅಭಿಮಾನ. ನಾನು ಚಿಕ್ಕಂದಿನಲ್ಲೇ ತಂದೆಗೆ ಸಹಾಯಕನಾಗಿ ಮೇಕಪ್ ಕಲೆ ಶುರುಮಾಡಿದ್ದು. ಅಪ್ಪ ತೀರಿಕೊಂಡಾಗ ನನಗಿನ್ನೂ ಹದಿನೆಂಟು ವರ್ಷ. ಅವರ ನಂತರ ನಾನೇ ರಾಜಕುಮಾರ್ ಅವರಿಗೆ ಮೇಕಪ್ ಮಾಡಲು ಶುರುಮಾಡಿದೆ. ಅಣ್ಣಾವ್ರ ಪ್ರೋತ್ಸಾಹದಿಂದ ಹದಿನೆಂಟರ ಹರಯದಲ್ಲೇ ಚೀಫ್ ಮೇಕಪ್‌ಮ್ಯಾನ್ ಆದೆ. ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುವಾಗ ರಾಜಕುಮಾರ್ ಸ್ವತಃ ತಾವೇ ಮೇಕಪ್ ಮಾಡಿಕೊಳ್ಳುತ್ತಿದ್ದವರು. ಮುಂದೆ ಸಿನಿಮಾಗಳಲ್ಲಿ ಮೇಕಪ್ ಮಾಡುವಾಗ ನಾನೇನಾದರೂ ತಪ್ಪು ಮಾಡಿದಾಗ ಅವರು ತಿದ್ದುತ್ತಾ ಗುರುವೂ ಆದರು. ಅಪ್ಪ ಕಾಲವಾದ ನಂತರ ಮೇಕಪ್ ಕಲೆಯ ಬಗ್ಗೆ ರಾಜಕುಮಾರ್ ಅವರಲ್ಲಿ ಸಾಕಷ್ಟು ಕಲಿತೆ”
