ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ ರಾಜಕುಮಾರ್ ಮತ್ತು ರಾಜ್ ಸಹೋದರ, ನಿರ್ಮಾಪಕ ವರದಪ್ಪ ಇದ್ದಾರೆ. ಪಿಬಿಎಸ್ ಅವರು ‘ಹೆಳವನಕಟ್ಟೆ ಗಿರಿಯಮ್ಮ’ ಕನ್ನಡ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದರು. ಚಿತ್ರದ ಒಂದು ಹಾಡನ್ನು ರಾಜ್ ಹಾಡಲು ಬಂದಿದ್ದಾಗ ಪ್ರಗತಿ ಅಶ್ವತ್ಥರು ಕ್ಲಿಕ್ಕಿಸಿದ ಚಿತ್ರವಿದು.
ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ‘ಹೆಳವನಕಟ್ಟೆ ಗಿರಿಯಮ್ಮ’ ಕನ್ನಡದ ಒಂದು ಅಪೂರ್ವ ಸಿನಿಮಾ ಆಗಬೇಕಿತ್ತು. “ಚಿತ್ರದ ಹನ್ನೆರೆಡು ಹಾಡುಗಳಿಗೆ ಪಿಬಿಎಸ್ ಸಂಗೀತ ಸಂಯೋಜಿಸಿದ್ದರು. ಯೇಸುದಾಸ್, ಎಸ್ಪಿಬಿ, ಎಸ್.ಜಾನಕಿ, ವಾಣಿ ಜಯರಾಂ, ರಾಜಕುಮಾರ್, ಪರ್ವೀನ್ ಸುಲ್ತಾನಾ ಅವರಂತಹ ಮೇರು ಗಾಯಕ-ಗಾಯಕಿಯರು ಹಾಡಿದ್ದರು. ಲತಾ ಮಂಗೇಶ್ಕರ್ ಅವರಿಂದಲೂ ಒಂದು ಗೀತೆ ಹಾಡಿಸಬೇಕೆಂದು ಪಿಬಿಎಸ್ ಯೋಜಿಸಿದ್ದರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಬೇಕಿತ್ತು. ನಾವು ಉತ್ತರ ಕರ್ನಾಟಕದ ಹಲವೆಡೆ ಲೊಕೇಶನ್ ನೋಡಲು ಸಹ ಹೋಗಿದ್ದೆವು. ಕಾರಣಾಂತರಗಳಿಂದ ಚಿತ್ರ ಕೈಗೂಡಲಿಲ್ಲ. ಪಿಬಿಎಸ್ ಸಂಯೋಜನೆಯ ಹಾಡುಗಳು ಕೂಡ ಜನರಿಗೆ ತಲುಪಲಿಲ್ಲ” ಎನ್ನುತ್ತಾರೆ ಪ್ರಗತಿ ಅಶ್ವತ್ಥ ನಾರಾಯಣ.