`ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ನಟ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ `ಗಂಧರ್ವಗಿರಿ’ (1983) ಮುಹೂರ್ತದ ಸಂದರ್ಭವಿದು. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ ಹೊಯ್ಸಳ ದೇವಾಲಯದಲ್ಲಿ ಆರಂಭವಾದ ಚಿತ್ರಕ್ಕೆ ಆಗ ಸಚಿವರಾಗಿದ್ದ ಎಚ್.ಎಸ್.ಶ್ರೀಕಂಠಯ್ಯ ಕ್ಲ್ಯಾಪ್ ಮಾಡಿದ್ದರು. ಸಾಯಿಸುತೆ ಅವರ ಕೃತಿಯನ್ನು ಆಧರಿಸಿ ಅದೇ ಶೀರ್ಷಿಕೆಯಡಿ ತಯಾರಾದ ಸಿನಿಮಾ `ಗಂಧರ್ವಗಿರಿ’. ವಿಷ್ಣುವರ್ಧನ್ ಹೀರೋ ಆಗಿದ್ದ ಚಿತ್ರದಲ್ಲಿ ಸೋಮಯಾಜುಲು ಅವರು ನಾಯಕನಟಿ ಆರತಿ ತಂದೆಯಾಗಿ ಅಭಿನಯಿಸಿದ್ದಾರೆ. ಆರತಿ ಸಹೋದರರಾದ ಮುಕುಂದ ಮತ್ತು ಧನಂಜಯ ಚಿತ್ರದ ನಿರ್ಮಾಪಕರು. ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ದತ್ತು (ಧನಂಜಯ) `ಗಂಧರ್ವಗಿರಿ’ ನಿರ್ದೇಶಕ.
ಕೆ.ವಿಶ್ವನಾಥ್ ನಿರ್ದೇಶನದ `ಶಂಕರಾಭರಣಂ’ (1980) ತೆಲುಗು ಚಿತ್ರರಂಗದಲ್ಲಿ ಮೈಲುಗಲ್ಲು ಎನಿಸಿಕೊಂಡ ಸಿನಿಮಾ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಗೀತ (ಕೆ.ವಿ.ಮಹದೇವನ್), ಅತ್ಯುತ್ತಮ ಗಾಯಕ (ಎಸ್‍ಪಿಬಿ), ಅತ್ಯುತ್ತಮ ಗಾಯಕಿ (ವಾಣಿ ಜಯರಾಂ) ರಾಷ್ಟ್ರಪ್ರಶಸ್ತಿಗಳಿಗೆ ಚಿತ್ರ ಭಾಜನವಾಗಿತ್ತು. ಅತ್ಯುತ್ತಮ ಪಾತ್ರಪೋಷಣೆಗಾಗಿ ಸೋಮಯಾಜುಲು ಅವರಿಗೆ ಫಿಲ್ಮ್‍ಫೇರ್ ಪ್ರಶಸ್ತಿ ಸಂದಿತ್ತು.
