ತಮ್ಮ ಕ್ಯಾಮರಾಗಳ ಮೂಲಕ ಎಲ್ಲರ ನೆನಪುಗಳನ್ನು ಹಿಡಿದಿಡುವ ಛಾಯಾಗ್ರಾಹಕರು ತಮಗಾಗಿ ಫೋಟೋ ತೆಗೆದಿಟ್ಟುಕೊಳ್ಳುವುದು ತೀರಾ ಅಪರೂಪ. ಅದರಲ್ಲೂ ಅಂದಿನ ದುಬಾರಿ ಕಾಲದಲ್ಲಿ ಆ ರೀತಿ ಯೋಚಿಸುತ್ತಲೂ ಇರಲಿಲ್ಲ. ‘ವಿನಾಃಕಾರಣ ಒಂದು ನೆಗೆಟಿವ್ ವೇಸ್ಟ್ ಆಗುತ್ತೆ’ ಎಂದು ಸ್ಥಿರಚಿತ್ರ ಛಾಯಾಗ್ರಾಹಕರು ಲೆಕ್ಕಾಚಾರ ಹಾಕುತ್ತಿದ್ದರು. ಇದಕ್ಕೆ ಹೊರತಾದ ಒಂದು ನೆನಪನ್ನು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರು ಹಂಚಿಕೊಳ್ಳುವುದು ಹೀಗೆ…
“ಚಿಕ್ಕಮಗಳೂರು ಜಿಲ್ಲೆಯ ಕಳಸ ಸುತ್ತಮುತ್ತ ನದಿ ತೀರದಲ್ಲಿ ‘ರಂಗನಾಯಕಿ’ ಚಿತ್ರದ ಶೂಟಿಂಗ್ ನಡೆಯಿತು (1980). ಚಿತ್ರೀಕರಣದ ಕೊನೆಯ ದಿನ ಚಿತ್ರತಂಡದ ಸದಸ್ಯರೆಲ್ಲರ ಒಂದು ಗ್ರೂಪ್ ಫೋಟೋ ಸೆರೆಹಿಡಿದೆ. ಆಗ ನಟಿ ಆರತಿ ಅವರು, ‘ಅಶ್ವತ್ಥ್, ಎಲ್ಲರ ಫೋಟೊಗಳನ್ನು ತೆಗೆದುಕೊಡುವ ನೀವು ನಿಮ್ಮನ್ನೇ ಮರೆತುಬಿಡುತ್ತೀರಿ. ಚಿತ್ರೀಕರಣದ ನೆನಪಿಗೆ ಜ್ಞಾಪಕವಾಗಿ ಒಂದಾದರೂ ಫೋಟೋ ಬೇಕೆಂದು ನಿಮಗೆ ಅನಿಸುವುದಿಲ್ಲವೇ? ಬನ್ನಿ, ನೀವು ಕುಳಿತುಕೊಳ್ಳಿ. ಫ್ರೇಮ್ ಅಡ್ಜೆಸ್ಟ್ ಮಾಡಿಕೊಡಿ, ನಾನು ಕ್ಲಿಕ್ ಮಾಡುತ್ತೇನೆ’ ಎಂದರು. ನಾನು ಕ್ಯಾಮರಾ ಅಡ್ಜೆಸ್ಟ್ ಮಾಡಿಕೊಟ್ಟೆ. ಈ ಫೋಟೋ ಸೆರೆಯಾಯ್ತು.”
