ಅದು ಪತ್ರಗಳ ಕಾಲ. ಇ-ಮೇಲ್, ಫೇಸ್‍ಬುಕ್, ಟ್ವಿಟರ್ ಇಲ್ಲದ ದಿನಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗೆ ಪತ್ರ ಬರೆದು ತಮ್ಮ ಪ್ರೀತಿ ತೋರಿಸುತ್ತಿದ್ದರು. ನಟ-ನಟಿಯರು ಕೂಡ ತಮಗೆ ಬಂದ ಅಭಿಮಾನಿಗಳ ಪತ್ರಗಳಿಗೆ ಪ್ರತಿಕ್ರಿಯೆ ರೂಪವಾಗಿ ತಮ್ಮ ಫೋಟೋಗಳನ್ನು ಕಳುಹಿಸಿಕೊಡುತ್ತಿದ್ದರಂತೆ. ಅದಕ್ಕೆಂದೇ ಸ್ಟುಡಿಯೋಗಳಲ್ಲಿ ಅಂಗೈ ಅಗಲದ ಇಂತಹ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಹಲವು ಬಾರಿ ಇದಕ್ಕೆ ಸಿನಿಮಾಗಳ ವಿವಿಧ ಭಾವ-ಬಂಗಿಗಳ ಫೋಟೋಗಳೂ ಬಳಕೆಯಾಗುತ್ತಿದ್ದವು.
ಕಲಾವಿದರು ಮತ್ತು ಅಭಿಮಾನಿಗಳ ಮಧ್ಯೆ ವಿಶ್ವಾಸ ವೃದ್ಧಿಯಾಗಲು ಈ ನಡೆ ಸಹಕಾರಿಯಾಗುತ್ತಿತ್ತು. ನಟ ಮುರಳಿ ಅವರ ಅಂತಹ ಫೋಟೋಗಳಿವು. ಇಲ್ಲಿನ ಫೋಟೋವೊಂದರ ಮೇಲೆ ಮುರಳಿ ಆಟೋಗ್ರಾಫ್ (ಎಸ್.ಡಿ.ಮುರಳಿ) ಇದೆ. ಇನ್ಶಿಯಲ್‍ನಲ್ಲಿನ `ಎಸ್’ ಅಂದರೆ ತಂದೆ, ಚಿತ್ರನಿರ್ದೇಶಕ ಸಿದ್ದಲಿಂಗಯ್ಯ. `ಡಿ’ ಅಂದರೆ ತಾಯಿ ಧನಲಕ್ಷ್ಮೀ. `ಪ್ರೇಮಪರ್ವ’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಮುರಳಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡರು. ಕಿರಿಯ ವಯಸ್ಸಿನಲ್ಲೇ (2010, 46 ವರ್ಷ) ಅವರು ನಮ್ಮನ್ನಗಲಿದ್ದು ಖೇದದ ಸಂಗತಿ.