1971 – 72ರವರೆಗೂ ಸಿನಿಮಾಗಳಲ್ಲಿ ಸ್ಪಾಟ್ ರೆಕಾರ್ಡಿಂಗ್ ಇತ್ತು. ಆನಂತರವೇ ವಾಯ್ಸ್ ಡಬ್ಬಿಂಗ್ ಪೂರ್ಣಪ್ರಮಾಣದಲ್ಲಿ ಚಾಲ್ತಿಗೆ ಬಂದಿದ್ದು. ಆಗೆಲ್ಲಾ ಕಲಾವಿದರು ನಟನೆ ಜೊತೆಗೆ ಧ್ವನಿಯ ಏರಿಳಿತಗಳತ್ತಲೂ ಗಮನಹರಿಸಿ ಹಿಡಿತ ಸಾಸಬೇಕಿತ್ತು. ಫಿಲ್ಮ್ ರೀಲ್ ದುಬಾರಿ ಇತ್ತಾದ್ದರಿಂದ ಹೆಚ್ಚು ಟೇಕ್‍ಗಳನ್ನು ತೆಗೆದುಕೊಳ್ಳುವಂತಿರಲಿಲ್ಲ. ಇಲ್ಲಿನ ಫೋಟೋದಲ್ಲಿ ಸ್ಪಾಟ್ ರೆಕಾರ್ಡಿಂಗ್ ನೋಡಬಹುದು. ರಾಮನಾಥನ್ ನಿರ್ದೇಶನದ `ಹೃದಯ ಸಂಗಮ’ ಔಟ್‍ಡೋರ್ ಚಿತ್ರೀಕರಣದ ಸಂದರ್ಭವಿದು. ರಾಜಕುಮಾರ್, ಭಾರತಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಕಲಾವಿದರ ಮೇಲೆ ಚಾಚಿಕೊಂಡಿರುವ ಕೋಲಿನಂತಹ ಒಂದು ವಸ್ತುವಿಗೆ (ಬೂಮ್) ಮೈಕ್ ಜೋಡಿಸಲಾಗಿದೆ. ಮೈಕ್‍ನ ಅಂತರವನ್ನೂ ಮನಸ್ಸಿನಲ್ಲಿಟ್ಟುಕೊಂಡು ಕಲಾವಿದರು ಧ್ವನಿಯ ಏರಿಳಿತ ಸಾಧಿಸುವ ಸವಾಲು! ಇಂತಹ ಹಲವು ಮಿತಿಗಳಲ್ಲೇ ಸಿನಿಮಾಗಳು ತಯಾರಾಗುತ್ತಿದ್ದವು.
