ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದ ಎಂ.ಎಸ್.ನಾರಾಯಣ (16/04/1951 – 23/01/2015) ಅವರ ಜನ್ಮದಿನವಿಂದು. ಚಿತ್ರರಂಗ ಪ್ರವೇಶಿಸಿದಾಗ ಅವರಿಗೆ 46 ವರ್ಷ. ಅದಕ್ಕೂ ಮುನ್ನ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು ಮಕ್ಕಳಿಗೆ ಪಾಠ ಹೇಳುತ್ತಾ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ಚಿತ್ರರಂಗಕ್ಕೆ ಪರಿಯಚವಾಗಿದ್ದು ಬರಹಗಾರರಾಗಿ. ‘ಪೆದರಾಯುಡು’ (1995) ತೆಲುಗು ಚಿತ್ರದೊಂದಿಗೆ ನಟನಾಗಿ ಬೆಳ್ಳಿತೆರೆ ಪ್ರವೇಶಿಸಿದ ಅವರು ಅತಿ ಬೇಡಿಕೆಯ ಹಾಸ್ಯನಟರಾದರು.

ತಮ್ಮದೇ ಒಂದು ಶೈಲಿ ರೂಢಿಸಿಕೊಂಡಿದ್ದ ನಾರಾಯಣ ಅವರಿಗೆ ಅದೃಷ್ಟವೂ ಜೊತೆಯಾಯ್ತು. ಬಿಡುವಿಲ್ಲದ ಹಾಸ್ಯನಟರಾದರು. ‘ಸಾಹೇಬ ಸುಬ್ರಹ್ಮಣ್ಯ’ ತೆಲುಗು ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು, “17 ವರ್ಷಗಳಲ್ಲಿ 700 ಚಿತ್ರಗಳಲ್ಲಿ ನಟಿಸಿದ್ದೇನೆ” ಎಂದು ಹೇಳಿಕೊಂಡಿದ್ದರು. ಒಟ್ಟಾರೆ ತಮ್ಮ ವೃತ್ತಿಬದುಕಿನಲ್ಲಿ ಅವರು 730ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2015ರ ಜನವರಿ 23ರಂದು ಅಗಲಿದಾಗ ಅವರಿಗೆ 63 ವರ್ಷ.

ನಾರಾಯಣ ಅವರು ಎಂಟು ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಕೊಡುಕು’ ತೆಲುಗು ಚಿತ್ರ ನಿರ್ದೇಶಿಸಿ ತಮ್ಮ ಪುತ್ರ ವಿಕ್ರಂ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದರು. ‘ಭಜಂತ್ರಿಲು’ ಅವರ ನಿರ್ದೇಶನದ ಮತ್ತೊಂದು ಸಿನಿಮಾ. ಎರಡು ತಲೆಮಾರಿನ ನಾಯಕನಟರೊಂದಿಗೆ ಅಭಿನಯಿಸಿರುವ ಅವರು ಎರಡು ತಮಿಳು ಚಿತ್ರಗಳಲ್ಲಿ ಹಾಸ್ಯನಟನಾಗಿ ಕಾಣಿಸಿಕೊಂಡಿದ್ದಾರೆ. ಉತ್ತಮ ನಟನೆಗೆ ಐದು ಬಾರಿ ನಂದಿ ಪ್ರಶಸ್ತಿಗೆ ಪಾತ್ರರಾಗಿರುವ ನಾರಾಯಣ ‘ದೂಕುಡು’ ಚಿತ್ರದ ಉತ್ತಮ ನಟನೆಗೆ ಫಿಲ್ಮ್‌ಫೇರ್ ಗೌರವ ಪಡೆದಿದ್ದಾರೆ.
