
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ
ಚಿತ್ರದ ಒಂದು ಸನ್ನಿವೇಶದಲ್ಲಿ ಪಾತ್ರಧಾರಿಯ ಸಾವಿನ ದೃಶ್ಯ ಬರುತ್ತದೆ. ಹಾಗೆ ಆ ದೃಶ್ಯ ಚಿತ್ರೀಕರಿಸಿದ ನಂತರ ಆ ಪಾತ್ರಧಾರಿ ಸಾವಿನ ಭಂಗಿಯಿಂದ ಏಳುವ ದೃಶ್ಯವನ್ನು ಸಹ ಚಿತ್ರೀಕರಿಸಲಾಗುತ್ತಿತ್ತು!
ಎಲ್ಲಾ ಕಡೆ ಇರುವಂತೆ ನಮ್ಮ ಚಿತ್ರರಂಗದಲ್ಲೂ ಕೆಲವು ನಂಬಿಕೆ, ಆಚರಣೆಗಳು ನಡೆದುಕೊಂಡು ಬಂದಿವೆ. ಹೊಸ ಚಿತ್ರದ ಚಿತ್ರೀಕರಣವನ್ನು ಆರಂಭಿಸುವ ಮುನ್ನ ಒಳ್ಳೆಯ ಮುಹೂರ್ತ, ದಿನ, ಕಾಲ ನೋಡುವುದು ವಾಡಿಕೆ. ನಿರ್ಮಾಪಕರು ಪ್ರಥಮ ದೃಶ್ಯವನ್ನು ಚಿತ್ರೀಕರಿಸಲು ಅದೃಷ್ಟವಂತರು ಎಂದು ತಾವು ನಂಬಿರುವ ವ್ಯಕ್ತಿಗಳಿಂದ ಕ್ಲ್ಯಾಪ್ ಹಾಗೂ ಕ್ಯಾಮೆರಾ ಸ್ವಿಚ್‌ಆನ್ ಮಾಡಿಸುತ್ತಾರೆ.
ಇದಲ್ಲದೆ ಪ್ರತಿದಿನವೂ ಕ್ಯಾಮರಾ, ಸೌಂಡ್, ಮತ್ತು ಇತರೆ ಪರಿಕರಗಳಿಗೆ ಪೂಜೆ ಸಲ್ಲಿಸಿದ ನಂತರವೇ ಅಂದಿನ ಚಿತ್ರೀಕರಣ ಶುರುವಾಗುವುದು. ಯಾವುದೋ ಕಲಾವಿದ ಮೇಕಪ್ ಮಾಡಿಕೊಂಡು ತನ್ನ ದೃಶ್ಯಗಳಿಗಾಗಿ ಕಾಯುತ್ತಿರುತ್ತಾರೆ, ಆದರೆ ಕಾರಣನಾಂತರದಿಂದ ಅಂದು ಅ ಕಲಾವಿದರ ದೃಶ್ಯ ಚಿತ್ರೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮೇಕಪ್ ತೆಗೆಯಬೇಕಾಗುತ್ತದೆ. ಹಾಗೆ ಒಂದೂ ಶಾಟ್ ಚಿತ್ರೀಕರಣವಿಲ್ಲದೆ ಮೇಕಪ್ ತೆಗೆಯುವುದು ಆ ಕಲಾವಿದರ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲವೆಂಬ ನಂಬಿಕೆ. ಅದಕ್ಕೆ ಪರಿಹಾರವಾಗಿ ನಿರ್ದೇಶಕರು ಒಂದು ಪೋಟೋ ತೆಗೆಸಿಕೊಂಡು ಮೇಕಪ್ ತೆಗೆಯುತ್ತಿದ್ದರು!
ಚಿತ್ರದ ಒಂದು ಸನ್ನಿವೇಶದಲ್ಲಿ ಪಾತ್ರಧಾರಿಯ ಸಾವಿನ ದೃಶ್ಯ ಬರುತ್ತದೆ. ಹಾಗೆ ಆ ದೃಶ್ಯ ಚಿತ್ರೀಕರಿಸಿದ ನಂತರ ಆ ಪಾತ್ರಧಾರಿ ಸಾವಿನ ಭಂಗಿಯಿಂದ ಏಳುವ ದೃಶ್ಯವನ್ನು ಸಹ ಚಿತ್ರೀಕರಿಸಲಾಗುತ್ತಿತ್ತು. ಅದರೆ ಆ ತುಣುಕುಗಳು ಚಿತ್ರದಲ್ಲಿ ಇರುತ್ತಿರಲಿಲ್ಲ. ಇನ್ನು ಚಿತ್ರೀಕರಣ ಪೂರ್ಣ ಮುಗಿದು ಕೊನೆಯ ಶಾಟ್ ತೆಗೆದ ನಂತರ ಎಲ್ಲರಿಗೂ ಸಿಹಿ ಹಂಚಿ, ಕುಂಬಳಕಾಯಿ ತಂದು ಎಲ್ಲಾ ಶೂಟಿಂಗ್ ಪರಿಕರಗಳಿಗೂ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆದರೆ ಚಿತ್ರೀಕರಣ ಮುಕ್ತಾಯವಾದಂತೆ. ಹೀಗೆ, ಇಂತಹ ಇನ್ನೂ ಹತ್ತಾರು ವಿಶಿಷ್ಟ ಆಚರಣೆ, ನಂಬಿಕೆಗಳು ಆಗ ಜಾರಿಯಲ್ಲಿದ್ದವು. ಈಗ ಹೇಗಿದೆಯೋ!?
ಸರೋಜಾದೇವಿ ಅಭಿನಯದ ‘ಗೃಹಿಣಿ’ ಚಿತ್ರದ ಮೊದಲ ದೃಶ್ಯಕ್ಕೆ ಡಾ.ರಾಜಕುಮಾರ್ ಕ್ಲ್ಯಾಪ್ ಮಾಡುತ್ತಿದ್ದಾರೆ. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅತಿಥಿಯಾಗಿ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ‘ಮಿಥಿಲೆಯ ಸೀತೆಯರು’ ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವೀರಾಸ್ವಾಮಿ ಅವರಿಂದ ಕ್ಲ್ಯಾಪ್. ನಟಿಯರಾದ ಬಿ.ವಿ.ರಾಧಾ, ಗೀತಾ ಇದ್ದಾರೆ. ಸಂಕಲನ ಕಾರ್ಯಕ್ಕೆ ಚಾಲನೆ ನೀಡುವ ‘ನೆಗೆಟಿವ್ ಕಟಿಂಗ್’ ಕೂಡ ಗಣ್ಯರ ಉಪಸ್ಥಿತಿಯಲ್ಲಿ ಆರಂಭವಾಗುತ್ತಿತ್ತು. ‘ನಾರದ ವಿಜಯ’ ಮುಹೂರ್ತದ ಪೂಜೆಯಲ್ಲಿ ನಿರ್ಮಾಪಕ ವೀರಾಸ್ವಾಮಿ, ರವಿಚಂದ್ರನ್, ಸಹಾಯಕ ನಿರ್ದೇಶಕ ಗುರುರಾಜ್ ‘ಪ್ರೊಫೆಸರ್ ಹುಚ್ಚೂರಾಯ’ ಚಿತ್ರದ ದ್ವಾರಕೀಶ್ ನಟನೆಯ ಮೊದಲ ದೃಶ್ಯಕ್ಕೆ ನಿರ್ಮಾಪಕ ಕೆ.ಸಿ.ಎನ್.ಗೌಡರಿಂದ ಕ್ಲ್ಯಾಪ್ ‘ಮಾಂಗಲ್ಯ’ ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರಿಂದ ಕ್ಯಾಮರಾ ಚಾಲನೆ. ಸುಬ್ಬರಾವ್, ಶಿವರಾಜಕುಮಾರ್ ಇದ್ದಾರೆ. ‘ಋಣಮುಕ್ತಳು’ ಚಿತ್ರದ ಮುಹೂರ್ತ. ಚಿತ್ರಸಾಹಿತಿ ಕುಣಿಗಲ್ ನಾಗಭೂಷಣ್, ಛಾಯಾಗ್ರಾಹಕ ಮಾರುತಿ ರಾವ್, ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಟಿ ಜಯಮಾಲಾ, ಕೃಷ್ಣಕಾಂತ ದೇಸಾಯಿ