
ಸ್ಥಿರಚಿತ್ರ ಛಾಯಾಗ್ರಾಹಕ
ಸ್ಟುಡಿಯೋ ಆವರಣದಲ್ಲಿ ಸಿಗರೇಟು ಸೇದಿದ ಕ್ಯಾಮರಾಮನ್ ಸಿಗರೇಟಿನ ತುಂಡು ಅಲ್ಲೇ ಎಸೆದರು. ‘ರೀ ಮಿಸ್ಟರ್ ಅದನ್ನು ತೆಗೆಯಿರಿ’ ಎಂದರು ಮಾಲೀಕ ರಾಮುಲುನಾಯ್ಡು. – ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಚಾಮುಂಡೇಶ್ವರಿ ಸ್ಟುಡಿಯೋ ಕುರಿತ ನೆನಪು.
ಕರ್ನಾಟಕದಲ್ಲಿನ ಸಿನಿಮಾ ಸ್ಟುಡಿಯೋಗಳಲ್ಲಿ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋಗೆ ವಿಶಿಷ್ಟ ಸ್ಥಾನವಿದೆ. ಶಿಸ್ತು, ನೈರ್ಮಲ್ಯ, ಶೂಟಿಂಗ್ ಮಾಡಲು ಪೂರಕವಾದ ವಾತಾವರಣಗಳಿಗೆ ಹೆಸರುವಾಸಿಯಾಗಿದ್ದ ಸ್ಟುಡಿಯೋ. ಇದರ ಮೊದಲ ಮಾಲಿಕರು ಶ್ರೀ ರಾಮಲು ನಾಯ್ಡು ಅವರು ಕೊಯಮತ್ತೂರಿನಲ್ಲಿ ಪಕ್ಷಿರಾಜ ಸ್ಟುಡಿಯೋ ನಡೆಸುತ್ತಿದ್ದರು. 70ರ ದಶಕದಲ್ಲಿ ಕರ್ನಾಟಕದ ಚಿತ್ರೋದ್ಯಮದ ಬೆಳೆವಣಿಗೆ ಕಂಡು ತಮ್ಮ ಸ್ಟುಡಿಯೋಗೆ ‘ಚಾಮುಂಡೇಶ್ವರಿ ಸ್ಟುಡಿಯೋ’ ಎಂದು ಮರುನಾಮಕರಣ ಮಾಡಿ ಬೆಂಗಳೂರಿಗೆ ಸ್ಟುಡಿಯೋ ಸ್ಥಳಾಂತರ ಮಾಡಿದರು.

ಮೊದಲು ಸ್ಟುಡಿಯೋದಲ್ಲಿ ಒಂದು ಪ್ಲೋರ್ ಇತ್ತು. ನಂತರ ಮೂರು ಫ್ಲೋರ್ ಮಾಡಿದರು. ಚಿತ್ರನಿರ್ಮಾಣಕ್ಕೆ ಬೇಕಾಗಿದ್ದ ಎಲ್ಲಾ ಸೌಲಭ್ಯಗಳು ಅಲ್ಲಿದ್ದವು. ಲ್ಯಾಬ್, ಹಾಡುಗಳ ಧ್ವನಿಮುದ್ರಣ, ಎಡಿಟಿಂಗ್, ಡಬಿಂಗ್ ವ್ಯವಸ್ಥೆ, ಹೀಗೆ ಎಲ್ಲವೂ. ಮತ್ತೊಂದು ಅನೂಕೂಲಕರ ವಿಷಯವೆಂದರೆ ನಗರದ ಮದ್ಯಬಾಗದಲ್ಲಿದ್ದುದು. ಇತರೆ ಯಾವುದೇ ಸ್ಟುಡಿಯೋನಲ್ಲಿ ಇಲ್ಲದ ಶಿಸ್ತು ಅಲ್ಲಿತ್ತು. ಶೂಟಿಂಗ್ ಸೆಟ್‌ನಲ್ಲಿ ಯಾರೂ ಸಿಗರೇಟು ಸೇದುವಂತೆ ಇರಲಿಲ್ಲ. ನಂತರದ ದಿನಗಳಲ್ಲಿ ವಿನಾಯಿತಿ ದೊರೆತು Ashtray ಬಳಸಬೇಕಾಗಿತ್ತು.
ಒಮ್ಮೆ ಒಬ್ಬ ಕ್ಯಾಮೆರಾಮನ್ ಸ್ಟುಡಿಯೋ ಆವರಣದಲ್ಲಿ ಸಿಗರೇಟ್ ತುಂಡನ್ನು ನೆಲದ ಮೇಲೆ ಹಾಕಿ ಮುಂದೆ ಹೋಗುತ್ತಿದ್ದರು. ಹಿಂದೆ ಮಾಲೀಕ ಶ್ರೀ ರಾಮಲು ನಾಯ್ಡು ಅವರು ಇದ್ದುದನ್ನು ಆತ ನೋಡಿರಲಿಲ್ಲ. ಕೋಪಗೊಂಡ ಮಾಲೀಕರು ‘ರೀ ಮಿಸ್ಟರ್ ಅದನ್ನು ತೆಗೆಯಿರಿ’ ಎಂದರು. ಅಲ್ಲಿನ ಶಿಸ್ತು ಗೊತ್ತಿದ್ದ ಕ್ಯಾಮರಾಮನ್ ಏನೂ ಮಾತನಾಡದೆ ಸಿಗರೇಟ್ ತುಂಡನ್ನು ತೆಗೆದು ಪಕ್ಕದಲ್ಲಿದ್ದ ಕಸದ ತೊಟ್ಟಿಗೆ ಹಾಕಿದರು. ಪಕ್ಕದಲ್ಲೇ ಮತ್ತೊಂದು ಸಿಗರೇಟ್ ತುಂಡು ಇತ್ತು. ‘ಅದನ್ನೂ ತೆಗೆದುಹಾಕಿ. ಅದನ್ನೂ ನೀವೇ ಹಾಕಿರಬಹುದು’ ಎಂದು ಹೇಳಿದರು. ಕ್ಯಾಮರಾಮನ್ ಮರುಮಾತನಾಡದೆ ಆ ತುಂಡನ್ನು ಕಸದಬುಟ್ಟಿಯಲ್ಲಿ ಹಾಕಿ ಮುಂದೆ ನಡೆದರು. ನನ್ನ ಕಣ್ಣಮುಂದೆ ನಡೆದ ಘಟನೆಯಿದು. ಶಿಸ್ತಿನ ಪಾಠ, ಶಿಕ್ಷೆ ಎರಡೂ ಒಟ್ಟಿಗೆ! ಪ್ರಸ್ತುತ ಈಗ ಸ್ಟುಡಿಯೋದಲ್ಲಿ ಶೂಟಿಂಗ್ ಫ್ಲೋರ್‌ಗಳು ಇಲ್ಲ. ಕೆಲವು ವಿಭಾಗಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
