ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ನಟ ಎಚ್.ಜಿ.ದತ್ತಾತ್ರೇಯ ಎಲ್ಲರಿಗೂ ದತ್ತಣ್ಣ ಎಂದೇ ಪರಿಚಿತರು. ಇಂದು ಅವರು 79ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟೂರು ಚಿತ್ರದುರ್ಗ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಓದಿಕೊಂಡಿರುವ ಕಲಾವಿದರ ಪೈಕಿ ದತ್ತಣ್ಣನವರ ಹೆಸರು ಅಗ್ರಪಂಕ್ತಿಯಲ್ಲಿದೆ. ಅವರ ವಿದ್ಯಾಭ್ಯಾಸ – ಕೆಲಸದ ವಿವರಗಳು ಇಲ್ಲಿವೆ, ಒಮ್ಮೆ ಗಮನಿಸಿ..
ನಟ ದತ್ತಣ್ಣ ಎಸೆಸ್ಸೆಲ್ಸಿಯಲ್ಲಿ ಆಗಿನ ಕಾಲಕ್ಕೇ ಮೊದಲ Rank (1958, ಚಿತ್ರದುರ್ಗ) ಪಡೆದವರು. ಪಿಯೂಸಿಯಲ್ಲಿ ಎರಡನೇ Rank! ಮುಂದೆ ಬೆಂಗಳೂರಿನಲ್ಲಿ ಬಿಇ (ಎಲೆಕ್ಟ್ರಿಕಲ್) ಪದವಿ ಪಡೆದರು. ನಂತರ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಎಂಇ ಪದವಿ ಪಡೆದು ಭಾರತೀಯ ವಾಯ ಸೇನೆಯ 20 ವರ್ಷಗಳ ಸರ್ವೀಸ್‌ನಲ್ಲಿ ವಿಂಗ್ ಕಮಾಂಡರ್ ಹುದ್ದೆಗೇರಿದರು. ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜ್‌ನಿಂದ ಮ್ಯಾನೇಜ್ಮೆಂಟ್ ಮತ್ತು ಅಡ್ವಾನ್ಸ್ಡ್ ಟೆಕ್ನಾಲಜೀಸ್ ವಿಷಯದಲ್ಲಿ ಸರ್ಟಿಫಿಕೇಟ್ ಕೋರ್ಸ್ (1984) ಮಾಡಿದ್ದರು. ವಾಯು ಸೇನೆಯಿಂದ ಎಚ್ಎಎಲ್ ಸ್ಟಾಫ್ ಕಾಲೇಜ್ ಗೆ (ಬೆಂಗಳೂರು) ಬಂದು ಮುಂದೆ ಸುಮಾರು ಆರು ವರ್ಷಗಳ ಕಾಲ ಅಲ್ಲಿ ಪ್ರಾಂಶುಪಾಲರಾಗಿದ್ದರು.
ಓದಿನ ಜೊತೆ ನಟನೆಯ ಬಗ್ಗೆಯೂ ದತ್ತಣ್ಣರಿಗೆ ಚಿಕ್ಕಂದಿನಿಂದಲೇ ಆಸಕ್ತಿಯಿತ್ತು. ದುರ್ಗದಲ್ಲಿ ಕ್ಯಾಂಪ್ ಹಾಕುತ್ತಿದ್ದ ವೃತ್ತಿರಂಗಭೂಮಿ ಕಂಪನಿಗಳು ಅವರನ್ನು ಆಕರ್ಷಿಸಿದ್ದವು. ಶಾಲೆಯಲ್ಲ ಓದುತ್ತಿದ್ದಾಗಲೇ ಸಮಾನಮನಸ್ಕರ ತಂಡ ಕಟ್ಟಿಕೊಂಡು ನಾಟಕಗಳನ್ನು ಮಾಡಿದ್ದಿದೆ. ಮುಂದೆ ವಾಯುಸೇನೆಯಲ್ಲಿ ಕೆಲಸ ಮಾಡುವಾಗ ದೇಶದ ವಿವಿಧೆಡೆ ಸುತ್ತಬೇಕಾಯ್ತು. ಹೋದೆಡೆಯಲ್ಲಿ ಹವ್ಯಾಸಿ ರಂಗತಂಡಗಳೊಂದಿಗೆ ಗುರುತಿಸಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

ವೃತ್ತಿಬದುಕಿನ ಒತ್ತಡದಲ್ಲೂ ಅವರು ನಿರಂತರವಾಗಿ ಹವ್ಯಾಸಿ ರಂಗಭೂಮಿಯಲ್ಲಿ ಸಕ್ತಿಯರಾಗಿದ್ದರು. ಸಿನಿಮಾದಲ್ಲಿ ನಟಿಸುವ ಆಹ್ವಾನವಿದ್ದರೂ ಅವರಿಗೆ ಸಮಯಾವಕಾಶ ಇರಲಿಲ್ಲ. ಹಾಗಾಗಿ ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು ತಡವಾಗಿ. ಟಿ.ಎಸ್.ನಾಗಾಭರಣ ನಿರ್ದೇಶನದ ‘ಆಸ್ಫೋಟ’ (1988) ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಅವರು ಚೊಚ್ಚಲ ಸಿನಿಮಾ ಪಾತ್ರಕ್ಕೇ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಪಡೆದರು. ಮುಂದೆ ಸಾಲು, ಸಾಲು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ದತ್ತಣ್ಣ ನಟಿಸುತ್ತಾ ಬಂದಿದ್ದಾರೆ. ಕಿರುತೆರೆಯಲ್ಲೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಪಿ.ಶೇಷಾದ್ರಿ ನಿರ್ದೇಶನದ ‘ಮುನ್ನುಡಿ’ (2000) ಚಿತ್ರದ ಉತ್ತಮ ನಟನೆಗೆ ಅವರಿಗೆ ಅತ್ಯುತ್ತಮ ಪೋಷಕ ನಟ ರಾಷ್ಟ್ರಪ್ರಶಸ್ತಿ ಸಂದಿದೆ. ಇದೇ ಪಾತ್ರಕ್ಕೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿಗೂ ಅವರು ಪಾತ್ರರಾದರು. ‘ಮೌನಿ’ ಮತ್ತು ‘ಭಾರತ್ ಸ್ಟೋರ್ಸ್’ ಚಿತ್ರಗಳ ಪಾತ್ರಗಳಿಗೆ ವಿಶೇಷ ಜ್ಯೂರಿ ರಾಷ್ಟ್ರಪ್ರಶಸ್ತಿ, ‘ಭಾರತ್ ಸ್ಟೋರ್ಸ್’ ಶ್ರೇಷ್ಠ ನಟನೆಗೆ ಫಿಜಿ ಅಂತಾರಾಷ್ಟ್ರೀಯ ಸಿನಿಮೋತ್ಸವದ ಗೌರವ ಸಂದಿದೆ. ದತ್ತಣ್ಣ ನಟಿಸಿರುವ ಹತ್ತಕ್ಕೂ ಹೆಚ್ಚು ಚಿತ್ರಗಳು ವಿವಿಧ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿಗಳಿಗೆ ಪಾತ್ರವಾಗಿವೆ ಎನ್ನುವುದು ವಿಶೇಷ. ಕನ್ನಡದ ಶ್ರೇಷ್ಠ ಚಿತ್ರನಿರ್ದೇಶಕರೊಂದಿಗೆ ಕೆಲಸ ಮಾಡಿರುವ ದತ್ತಣ್ಣ ಇತ್ತೀಚಿನ ಯುವ ನಿರ್ದೇಶಕರಿಗೂ ಪ್ರೀತಿಪಾತ್ರ ಕಲಾವಿದರು.
