ನಟರೊಬ್ಬರ ಸಿನಿಮಾ – ವ್ಯಕ್ತಿತ್ವ – ಸಾಧನೆ ಕುರಿತಾಗಿ ಓರ್ವ ಲೇಖಕ ಒಂದೆರೆಡು ಪುಸ್ತಕ ಬರೆಯಬಹುದು. ಮತ್ತೂ ಹೆಚ್ಚೆಂದರೆ ಇನ್ನೂ ಎರಡು ಕೃತಿಗಳನ್ನು ರೂಪಿಸಬಹುದು. ಅಚ್ಚರಿ ಎನ್ನುವಂತೆ ಲೇಖಕ ಜಗನ್ನಾಥರಾವ್ ಬಹುಳೆ ಅವರು ಡಾ.ರಾಜಕುಮಾರ್ ಅವರ ಕುರಿತಾಗಿ ಇಲ್ಲಿಯವರೆಗೆ ಹನ್ನೊಂದು ಪುಸ್ತಕಗಳನ್ನು ರಚಿಸಿದ್ದಾರೆ! ಅವರ ಮತ್ತೆರೆಡು ಕೃತಿಗಳಲ್ಲೂ ರಾಜಕುಮಾರ್ ಅವರ ಕುರಿತಾಗಿಯೇ ಹೆಚ್ಚು ಪ್ರಸ್ತಾಪವಾಗುತ್ತದೆ. ಈ ಎರಡು ಕೃತಿಗಳನ್ನೂ ಪಟ್ಟಿಗೆ ಸೇರಿಸಿದರೆ ರಾಜ್ ಕುರಿತಾಗಿ ಅವರು ಹದಿಮೂರು ಪುಸ್ತಕ ಬರೆದಂತಾಗುತ್ತದೆ! ಬಹುಶಃ ನಟರೊಬ್ಬರ ಬಗ್ಗೆ ಲೇಖಕರೊಬ್ಬರು ಹದಿಮೂರು ಪುಸ್ತಕಗಳನ್ನು ರಚಿಸಿರುವುದು ವಿರಳಾತಿವಿರಳ ಎಂದೇ ಹೇಳಬಹುದು.
ರಾಜ್ ಕುರಿತು ಹದಿಮೂರು ಪುಸ್ತಕಗಳನ್ನು ಬರೆಯುವುದೆಂದರೆ ಅವರಿಗೆ ವರನಟನ ಬಗ್ಗೆ ಅದೆಷ್ಟು ಅಭಿಮಾನವಿರಬೇಕು? “ನಾನು ರಾಜಕುಮಾರರ ದೊಡ್ಡ ಅಭಿಮಾನಿ ಎನ್ನುವುದೇನೋ ಹೌದು. ಅದಕ್ಕಿಂತಲೂ ಹೆಚ್ಚಾಗಿ ನನಗೆ ಕಾಡಿದ್ದು ಬೇರೆಯದ್ದೇ ಅಂಶಗಳು. ಒಬ್ಬ ವ್ಯಕ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಾರೆ ಎಂದರೆ ಅವರದು ಅದೆಂಥ ಅಪರೂಪದ ವ್ಯಕ್ತಿತ್ವವಿರಬಹುದು ಎಂದು ನಾನು ಅಚ್ಚರಿಪಟ್ಟಿದ್ದೆ. ಈ ಹಿನ್ನೆಲೆಯಿಂದ ಬೇರೆ ಬೇರೆ ನೆಲೆಯಲ್ಲಿ ಅವರ ಕುರಿತಾಗಿ ಯೋಚಿಸುತ್ತಾ ಹೋದಾಗ ಪುಸ್ತಕಗಳು ರೂಪುಗೊಂಡವು” ಎನ್ನುತ್ತಾರೆ ಬಹುಳೆ.

ರಾಜಕುಮಾರ್ ಅವರ ಬಗ್ಗೆ ಬಹುಳೆಯವರ ಮೊದಲ ಕೃತಿ ‘ವರನಟ’ ಪ್ರಕಟವಾಗಿದ್ದು 2003ರಲ್ಲಿ. ಆಗ ವರನಟನ 75ನೇ ಹುಟ್ಟುಹಬ್ಬದ ಸಂಭ್ರಮ. ಪುಸ್ತಕದ ಮೊಲದ ಪ್ರತಿಯನ್ನು ರಾಜ್ ಅವರಿಗೆ ಹಸ್ತಾಂತರಿಸಿದ್ದನ್ನು ಬಹುಳೆಯವರು ಸ್ಮರಿಸಿಕೊಳ್ಳುತ್ತಾರೆ. ಸಿನಿಮಾ ಸಾಹಿತ್ಯ ಪ್ರಕಾಶನದಿಂದ ಈ ಕೃತಿ ಪ್ರಕಟವಾಗಿದೆ. ವಿಶೇಷವೆಂದರೆ ಈ ಕೃತಿಗೆ ಪತ್ರಕರ್ತ ರುಕ್ಕೋಜಿಯವರು ಮುನ್ನುಡಿ ಬರೆದಿದ್ದಾರೆ. ವರನಟನ ಸಿನಿಮಾ – ಜೀವನದ ಬಗ್ಗೆ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿ ಎರಡು ಬೃಹತ್ ಕೃತಿಗಳನ್ನು ಹೊರತಂದ ಸಾಹಸಿ ರುಕ್ಕೋಜಿ. “ಶ್ರೇಷ್ಠ ನಟನಾಗಿ, ಗಾಯಕನಾಗಿ, ಆದರ್ಶ ವ್ಯಕ್ತಿಯಾಗಿ, ಸಾಮಾಜಿಕ ಕಾರ್ಯಕರ್ತನಾಗಿ, ನಾಡು – ನುಡಿಯ ಬಗ್ಗೆ ಪ್ರಾಮಾಣಿಕ ಕಳಕಳಿಯ ವ್ಯಕ್ತಿಯಾಗಿ, ಆಧ್ಯಾತ್ಮ ಜೀವಿಯಾಗಿ, ಅಭಿಮಾನಿಗಳನ್ನೇ ದೇವರೆಂದು ಪರಿಭಾವಿಸಿದ ನಟನಾಗಿ… ಹೀಗೆ ರಾಜ್ ಕುರಿತು ಯೋಚಿಸುತ್ತಾ, ಬರೆಯುತ್ತಾ ಬಂದೆ. ವ್ಯಕ್ತಿಯೊಬ್ಬರು ಈ ಪ್ರಮಾಣದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವುದು ನನ್ನ ಪಾಲಿಗೆ ಬಹುದೊಡ್ಡ ಸೋಜಿಗ. ಬಹುಶಃ ಅವರ ಕುರಿತಾಗಿ ಪುಸ್ತಕಗಳನ್ನು ರಚಿಸಲು ಈ ಅಂಶವೇ ನನಗೆ ಪ್ರೇರಣೆಯಾಗಿರಬಹುದು” ಎನ್ನುತ್ತಾರೆ ಬಹುಳೆ.

‘ವರನಟ’ ಪುಸ್ತಕದ ನಂತರ ರಾಜಕುಮಾರ್ ಕುರಿತು ಪ್ರಕಟವಾದ ಅವರ ಪುಸ್ತಕಗಳಿವು – ‘ಡಾ.ರಾಜಕುಮಾರ್ ದಂತಕತೆ’, ‘ರಾಜಾಯಣ’, ‘ಮುತ್ತೂರಾಜರ ಮುತ್ತಿನ ಮಾತುಗಳು’, ‘ರಾಜಾಂತರರಂಗ’, ‘ಅಣ್ಣಾವ್ರ ಅಮರ ಗೀತೆಗಳು’, ‘ರಾಜನೀತಿ’ (ರಾಜ್ ಕ್ಲಾಸಿಕ್ ಡೈಲಾಗ್ಸ್), ‘ಅಮರ ಚೇತನ’, ‘ರಾಜಕುಮಾರ್ ನಡೆದ ಹಾದಿಯಲ್ಲಿ…’, ‘ಡಾ.ರಾಜ್ ವಿಚಾರಧಾರೆ’, ‘ಏಪ್ರಿಲ್ 24’. ಬಹುಳೆಯವರು ರಚಿಸಿರುವ ‘ಕುಮಾರತ್ರಯರು’ ಪುಸ್ತಕದಲ್ಲಿ ಕನ್ನಡ ಚಿತ್ರರಂಗದ ಕುಮಾರತ್ರಯರ ಸಿನಿಮಾ, ಮೂವರ ಮಧ್ಯೆಯ ಒಡನಾಟ – ಬಾಂಧವ್ಯದ ಬಗೆಗಿನ ಉಲ್ಲೇಖವಿದೆ. ಮತ್ತೊಂದು ಕೃತಿ ‘ಸಹಸ್ರಮುಖ ಸಾಧಕಿ ಶ್ರೀಮತಿ ಪಾರ್ವತಮ್ಮ ರಾಜಕುಮಾರ್’ ಪುಸ್ತಕದಲ್ಲಿ ಮುತ್ತೂರಾಜರು ‘ರಾಜಕುಮಾರ’ರಾಗಿ ರೂಪುಗೊಂಡ ಹಾದಿಯ ಚಿತ್ರಣವಿದೆ.
ನಾಡಿನ ಪತ್ರಿಕೆಗಳಾದ ಪ್ರಜಾಮತ, ಮಂಗಳ, ರೂಪತಾರಾ, ಅರಗಿಣಿ ಸೇರಿದಂತೆ ಮತ್ತಿತರೆ ಪತ್ರಿಕೆಗಳಲ್ಲಿ ಬಿಡಿಬಿಡಿಯಾಗಿ ಬರೆದ ರಾಜಕುಮಾರರ ಕುರಿತ ಲೇಖನಗಳೂ ಪುಸ್ತಕಗಳಾಗಿ ಪ್ರಕಟವಾಗಿವೆ. ಆನೇಕಲ್ ಮೂಲದ ಜಗನ್ನಾಥರಾವ್ ಬಹುಳೆ ಅವರು ನಗರಾಭಿವೃದ್ಧಿ ಇಲಾಖೆಯಲ್ಲಿ ಸರ್ಕಾರಿ ನೌಕರರು. ಬೆಂಗಳೂರಿನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕುಮಾರರ ಕುರಿತ ಹದಿಮೂರು ಪುಸ್ತಕಗಳೂ ಸೇರಿದಂತೆ ಇಲ್ಲಿಯವರೆಗೆ ಒಟ್ಟು ಮೂವತ್ತೊಂದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಜಕುಮಾರ್ ಕೃತಿಗಳು ಎರಡು – ಮೂರು ಬಾರಿ ಮುದ್ರಣ ಕಂಡಿವೆ.
ಡಾ.ರಾಜಕುಮಾರರ ಕುರಿತ ಬಹುಳೆ ಅವರ ಕೃತಿಗಳು