1995ರಲ್ಲಿ ಡಾ.ರಾಜಕುಮಾರ್ ಅವರಿಗೆ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಸಂದರ್ಭ. ಕರ್ನಾಟಕ ಚಲನಚಿತ್ರ ಸ್ಥಿರಚಿತ್ರ ಛಾಯಾಗ್ರಾಹಕರ ಸಂಘದ ವತಿಯಿಂದ ವರನಟನಿಗೆ ಅವರ ಮನೆಯಲ್ಲೇ ಸನ್ಮಾನಿಸಲು ತೀರ್ಮಾನಿಸಲಾಯಿತು. ಆಗ ಪ್ರಗತಿ ಅಶ್ವತ್ಥ ನಾರಾಯಣ ಅವರು ಸಂಘದ ಅಧ್ಯಕ್ಷರಾಗಿದ್ದರು. ಸದಾಶಿವನಗರದ ಮನೆಗೆ ಹೋದಾಗ ರಾಜ್ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಸನ್ಮಾನದ ವಿಷಯ ಕೇಳಿ ಅವರಿಗೆ ಮುಜುಗರವಾಯ್ತಂತೆ.
ಆ ಸಂದರ್ಭಕ್ಕೆ ಸಾಕ್ಷಿಯಾದ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರು ಹೇಳುವುದು ಹೀಗೆ – “ರಾಜಕುಮಾರ್ ತುಂಬಾ ಭಾವುಕರಾದರು. ನೀವೆಲ್ಲರೂ ನನ್ನ ಸಹೋದ್ಯೋಗಿಗಳು. ಇದು ನಿಮ್ಮೆಲ್ಲರಿಗೂ ಸಲ್ಲಬೇಕಾದ ಗೌರವ. ನೀವು ನನಗೆ ಸನ್ಮಾನ ಮಾಡಬೇಕೆ? ನನ್ನ ಈ ಬೆಳವಣಿಗೆಯಲ್ಲಿ ನಿಮ್ಮೆಲ್ಲರ ಕಾಣ್ಕೆ ಇದೆ ಎಂದರು. ಆನಂತರ ಆಗಷ್ಟೇ ಕಣ್ಣು ತೆರೆಯುತ್ತಿದ್ದ ಡಿಜಿಟಲ್ ಫೋಟೋಗ್ರಫಿ, ಹಿಂದಿನ ಛಾಯಾಗ್ರಾಹಕರು ಪಡುತ್ತಿದ್ದ ಕಷ್ಟಗಳನ್ನು ನೆನಪು ಮಾಡಿಕೂಂಡರು. ಈ ಮಾತುಕತೆ ಎಲ್ಲವನ್ನೂ ನಾವು ವೀಡಿಯೋ ಮಾಡಿಕೊಂಡೆವು. ಚರ್ಚೆ ಬಹಳ ಸ್ವಾರಸ್ಯಕರವಾಗಿತ್ತು. ನಂತರ ಸದಸ್ಯರೆಲ್ಲರೂ ಪ್ರತ್ಯೇಕವಾಗಿ ಅವರೊಂದಿಗೆ ಪೋಟೋ ತೆಗೆದುಕೊಂಡು ಮತ್ತೊಮ್ಮೆ ಅಭಿನಂದನೆ ತಿಳಿಸಿ ವಾಪಸಾದೆವು”