ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಶಶಿಕಪೂರ್

ನಟ
ಪೋಸ್ಟ್ ಶೇರ್ ಮಾಡಿ

ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವೀರಾಜ್ ಕಪೂರ್ ಅವರ ಮೂರನೇ ಪುತ್ರ ಶಶಿಕಪೂರ್. ಕಪೂರ್ ಸಹೋದರರ ಪೈಕಿ ಚಿಕ್ಕವರು. ಬಾಲನಟ, ನಾಯಕ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಅವರದ್ದು ಅಪರೂಪದ ಸಾಧನೆ. ಹುಟ್ಟಿದ್ದು 1938, ಮಾರ್ಚ್ 18ರಂದು ಕೊಲ್ಕೊತ್ತಾದಲ್ಲಿ. ಹುಟ್ಟು ಹೆಸರು ಬಲ್‍ಬೀರ್ ರಾಜ್. ಶಾಲೆ ವಿದ್ಯಾಭ್ಯಾಸ ನಡೆದದ್ದು ಮುಂಬೈನ ಮಾತುಂಗಾ ಹೈಸ್ಕೂಲ್‍ನಲ್ಲಿ. ತಮ್ಮ 12ನೇ ವಯಸ್ಸಿಗೆ ಶಶಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. `ಆಗ್’ ಚಿತ್ರದಲ್ಲಿ ಶಶಿ, `ಜ್ಯೂನಿಯರ್ ರಾಜ್‍ಕಪೂರ್’ ಆಗಿ ನಟಿಸಿದ್ದರು. ಬಾಲ ಕಲಾವಿದರಾಗಿ `ಭಕ್ತ ದ್ರುವ’ (1947), `ಮುರುಳಿವಾಲಾ’ (1951) ಅವರ ಪ್ರಮುಖ ಸಿನಿಮಾಗಳು.

ಬಾಲನಟನಾಗಿ ಶಶಿ

ಯಶ್ ಚೋಪ್ರಾ ನಿರ್ದೇಶನದ `ಧರ್ಮ್‍ಪುತ್ರ’ (1961) ಚಿತ್ರದೊಂದಿಗೆ ಅವರ ಹೀರೋ ಆದರು. ಇದೇ ವರ್ಷ ಅವರ `ಚಾರ್ ದಿವಾರಿ’ ತೆರೆಕಂಡಿತು. ಮುಂದಿನ ಮೂರ್ನಾಲ್ಕು ವರ್ಷ ತೆರೆಕಂಡ ಶಶಿಕಪೂರ್‍ರ ನಾಲ್ಕೈದು ಚಿತ್ರಗಳು ಗಮನ ಸೆಳೆಯಲಿಲ್ಲ. ಅವರ ಸಿನಿಮಾ ಜೀವನದ ಮೊದಲ ಹಿಟ್ ಚಿತ್ರವೆಂದರೆ `ಜಬ್ ಜಬ್ ಫೂಲ್ ಖಿಲೆ’ (1965).

60,70ರ ದಶಕಗಳಲ್ಲಿ ಶಶಿಕಪೂರ್ ಹಿಂದಿ ಚಿತ್ರರಂಗದ ಪ್ರಮುಖ ಹೀರೋ ಆಗಿ ಗುರುತಿಸಿಕೊಂಡಿದ್ದರು. `ವಕ್ತ್’ (1965), `ಹಸೀನಾ ಮಾನ್ ಜಾಯೇಗಾ’ (1968), `ಕನ್ಯಾದಾನ್’ (1969), `ಆ ಗಲೇ ಲಗ್ ಜಾ’ (1973), `ರೋಟಿ ಕಪಡಾ ಔರ್ ಮಕಾನ್’ (1974), `ಚೋರ್ ಮಚಾಯೇ ಶೋರ್’ (1974), `ದೀವಾರ್’ (1975), `ಕಭೀ ಕಭೀ’ (1976), `ಫಕೀರಾ’ (1976), `ತ್ರಿಶೂಲ್’ (1978), `ಸತ್ಯಂ ಶಿವಂ ಸುಂದರಂ’ (1978), `ಕಾಲಾ ಪತ್ಥರ್’ (1979), `ಸುಹಾಗ್’ (1979), `ಶಾನ್’ (1980), `ಕ್ರಾಂತಿ’ (1981), `ನಮಕ್ ಹಲಾಲ್’ (1982) ಶಶಿಕುಮಾರ್ ನಟಿಸಿದ ಕೆಲವು ಜನಪ್ರಿಯ ಚಿತ್ರಗಳು.

‘ವಕೀಲ್ ಬಾಬು’ ಚಿತ್ರದಲ್ಲಿ ಜೀನತ್ ಅಮಾನ್‌ ಜೊತೆ

70 ಮತ್ತು 80ರ ದಶಕದ ಆರಂಭದ ಹಲವು ಚಿತ್ರಗಳಲ್ಲಿ ಶಶಿಕಪೂರ್, ನಟ ಅಮಿತಾಭ್ ಜೊತೆ ತೆರೆ ಹಂಚಿಕೊಂಡಿದ್ದರು. `ದೀವಾರ್’, `ದೋ ಔರ್ ದೋ ಪಾಂಚ್’, `ಸಿಲ್ಸಿಲಾ’, `ತ್ರಿಶೂಲ್’, `ಕಭೀ ಕಭೀ’, `ಶಾನ್’, `ಸುಹಾಗ್’, `ನಮಕ್ ಹಲಾಲ್’, `ಕಾಲಾ ಪತ್ಥರ್’ ಶಶಿ – ಬಚ್ಚನ್ ಜೊತೆಯಾಗಿ ನಟಿಸಿದ ಸಿನಿಮಾಗಳು. ಯಶ್ ಚೋಪ್ರಾ ನಿರ್ದೇಶನದ `ದೀವಾರ್’, ಶಶಿಗೆ ಫಿಲ್ಮ್‍ಫೇರ್ ಅತ್ಯುತ್ತಮ ಪೋಷಕ ನಟ ಪುರಸ್ಕಾರ ತಂದುಕೊಟ್ಟಿತು. ಈ ಚಿತ್ರದ `ಮೇರೆ ಪಾಸ್ ಮಾ ಹೈ’ ಹಿಂದಿ ಸಿನಿಮಾದ ಅತ್ಯಂತ ಜನಪ್ರಿಯ ಡೈಲಾಗ್‍ಗಳ ಪೈಕಿ ಒಂದೆನಿಸಿದೆ.

‘ಶಾನ್‌’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಜೊತೆ

ಶಶಿಕಪೂರ್ ಕೆಲವು ಬ್ರಿಟಿಷ್ ಮತ್ತು ಅಮೆರಿಕನ್ ಚಿತ್ರಗಳಲ್ಲೂ ನಟಿಸಿದ್ದಾರೆ. `ಶೇಕ್ಸ್‌ಪಿಯರ್‌ ವಲ್ಲಾಹ್’ (1965), `ಬಾಂಬೆ ಟಾಕೀಸ್’ (1970), `ಪ್ರೆಟಿ ಪಾಲಿ’ (1967), `ಸಿದ್ದಾರ್ಥ’ (1972), `ಸ್ಯಾಮಿ ಅಂಡ್ ರೋಸಿ ಗೆಟ್ ಲೈಡ್’ (1987) ಶಶಿಕಪೂರ್ ವಿದೇಶಿ ಚಿತ್ರಗಳು. `ಹೀಟ್ ಅಂಡ್ ಡಸ್ಟ್’ (1982) ಚಿತ್ರದಲ್ಲಿ ಶಶಿ ತಮ್ಮ ಬ್ರಿಟಿಷ್ ಪತ್ನಿ ಜೆನಿಫರ್ ಕೆಂಡಲ್‍ರೊಂದಿಗೆ ನಟಿಸಿದ್ದರು.

‘ಫಕಿರಾ’ ಚಿತ್ರದಲ್ಲಿ ಶಬಾನಾ ಅಜ್ಮಿ ಜೊತೆ

1970ರ ಅಂತ್ಯದಲ್ಲಿ ಶಶಿ ನಟನೆಯಿಂದ ಚಿತ್ರನಿರ್ಮಾಣದತ್ತ ಹೊರಳಿದರು. 1978ರಲ್ಲಿ ಅವರು `ಜುನೂನ್’ ಚಿತ್ರ ನಿರ್ಮಿಸಿದರು. ವಿಮರ್ಶಕರ ಪ್ರಶಂಸೆಗೊಳಗಾದ ಈ ಪ್ರಯೋಗಕ್ಕೆ ರಾಷ್ಟ್ರ ಪ್ರಶಸ್ತಿ ಸಂದಿತು. 1980ರಲ್ಲಿ ಶಶಿ ಚಿತ್ರಸಂಸ್ಥೆ `ಫಿಲ್ಮ್ ವಾಲಾಸ್’ ಆರಂಭಿಸಿದರು. ಈ ಬ್ಯಾನರ್‍ನ ಅಡಿ ಅವರು ನಿರ್ಮಿಸಿದ ` ಕಲಿಯುಗ್’ ವಿಮರ್ಶಕರ ಮೆಚ್ಚುಗೆ ಗಳಿಸಿತು. ಇದೇ ಸಂಸ್ಥೆಯಡಿ ತಯಾರಾದ `3 ಚೌರಿಂಗೀ ಲೇನ್’ (1981) ಚಿತ್ರದಲ್ಲಿ ಶಶಿ ತಮ್ಮ ಪತ್ನಿ ಜೆನಿಫರ್ ಜೊತೆ ನಟಿಸಿದ್ದರು. ಮುಂದೆ `ವಿಜೇತಾ’ ಚಿತ್ರದಲ್ಲಿ ಪುತ್ರ ಕುನಾಲ್‍ರನ್ನು ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯಿಸಿದರು. 1984ರಲ್ಲಿ ಶಶಿ ನಿರ್ಮಿಸಿದ `ಉತ್ಸವ್’ನಲ್ಲಿ ರೇಖಾ ಮತ್ತು ಶೇಖರ್ ಸುಮನ್ ನಟಿಸಿದ್ದರು. ತದನಂತರದ `ನ್ಯೂಡೆಲ್ಲಿ ಟೈಮ್ಸ್’ ಚಿತ್ರಕ್ಕೆ ರಾಷ್ಟ್ರ ಪುರಸ್ಕಾರ ಸಿಕ್ಕಿತು. `ಅಜೂಬಾ’ (1991) ಚಿತ್ರದೊಂದಿಗೆ ಶಶಿ ನಿರ್ದೇಶಕರಾಗಿಯೂ ಅದೃಷ್ಟ ಪರೀಕ್ಷಿಸಿದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ವಿಫಲವಾಯ್ತು.

ತಾರಾ ಪತ್ನಿ ಜೆನಿಫರ್ ಕೆಂಡಿಲ್ ಅವರೊಂದಿಗೆ

ಶಶಿಕಪೂರ್ ಕೊಲ್ಕೊತ್ತಾದಲ್ಲಿ (1956) ಬ್ರಿಟಿಷ್ ನಟಿ ಜೆನಿಫರ್ ಕೆಂಡಲ್‍ರನ್ನು ಭೇಟಿ ಮಾಡಿದರು. ಆಗ ಶಶಿ ಪೃಥ್ವಿ ಥಿಯೇಟರ್‍ನಲ್ಲಿ ನಟ ಮತ್ತು ನಿರ್ಮಾಣ ಸಹಾಯಕರಾಗಿ ಕೆಲಸ ಮಾಡಿತ್ತಿದ್ದರು. ಇಬ್ಬರ ಮಧ್ಯೆ ಪ್ರೀತಿ ಅಂಕುರಿಸಿ 1958ರಲ್ಲಿ ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳು – ಕುನಾಲ್ ಕಪೂರ್, ಕರಣ್ ಕಪೂರ್ ಮತ್ತು ಸಂಜನಾ ಕಪೂರ್. ಇವರೆಲ್ಲರೂ ಸಿನಿಮಾದಲ್ಲಿ ಭವಿಷ್ಯ ಅರಸಿದರಾದರೂ, ಯಶಸ್ವಿಯಾಗಲಿಲ್ಲ. 1984ರಲ್ಲಿ ಜೆನಿಫರ್ ನಿಧನರಾದರು. ಶಶಿಕಪೂರ್‍ಗೆ ಜೀವಮಾನ ಸಾಧನೆಗಾಗಿ ಫಿಲ್ಮ್‍ಫೇರ್ ಪುರಸ್ಕಾರದ ಗೌರವ (2010) ಸಂದಿದೆ. 2017ರ ಡಿಸೆಂಬರ್‌ 4ರಂದು ಶಶಿಕಪೂರ್ ಇಹಲೋಕ ತ್ಯಜಿಸಿದರು.

ರಾಜ್‌ಕಪೂರ್, ಪೃಥ್ವಿರಾಜ್‌ಕಪೂರ್‌, ಶಮ್ಮಿಕಪೂರ್‌, ಶಶಿಕಪೂರ್‌

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಬಹುಭಾಷಾ ತಾರೆ ಚಂದ್ರಕಲಾ

ಚಿತ್ರನಿರ್ಮಾಪಕ, ಹಂಚಿಕೆದಾರರಾಗಿದ್ದ ಎಂ.ಎಸ್.ನಾಯಕ್‌ ಅವರ ಪುತ್ರಿ ನಟಿ ಚಂದ್ರಕಲಾ. ಮಂಗಳೂರು ಮೂಲದ ಅವರ ಮಾತೃಭಾಷೆ ಕೊಂಕಣಿ. ವಾಣಿಜ್ಯೋದ್ಯಮಿಯಾಗಿದ್ದ ನಾಯಕ್‌ ಅವರು

ಸಿನಿಮಾ – ಕ್ಯಾಸೆಟ್ ಲೋಕದಲ್ಲಿ ಮಿಂಚಿದ ಧೀರೇಂದ್ರ ಗೋಪಾಲ್

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು,

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ