ಪುಟ್ಟಣ್ಣ ಕಣಗಾಲ್‌ನವರ ಮಹೋನ್ನತ ಚಿತ್ರಗಳಲ್ಲೊಂದಾದ `ನಾಗರಹಾವು’ ಚಿತ್ರಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿಯೂ ಚಿತ್ರೀಕರಣ ನಡೆದಿತ್ತು. ಚಿತ್ರದಲ್ಲಿನ ಪ್ರಿನ್ಸಿಪಾಲ್ ಮನೆಯ ಸನ್ನಿವೇಶಗಳು ಸೇರಿದಂತೆ ಕೆಲವು ಸೀನ್‌ಗಳನ್ನು ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರಿಸಿದ್ದರು. ಆಗ ಸೆಟ್‌ಗೆ ಹೋಗಿದ್ದ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮೆರಾಗೆ ಸೆರೆ ಸಿಕ್ಕ ಚಿತ್ರವಿದು. ಆನ್‌ಸ್ಕ್ರೀನ್‌ನಲ್ಲಿ ರೋಷದಿಂದ ಮುಖಾಮುಖಿಯಾಗುವ ವಿಷ್ಣು – ಲೋಕನಾಥ್ ಅಂಕಲ್ ಇಲ್ಲಿ ನಗುನಗುತ್ತಾ ಪೋಸು ಕೊಟ್ಟಿದ್ದಾರೆ!
ಜಹ್ರೀಲಾ ಇನ್ಸಾನ್:
ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡ `ನಾಗರಹಾವು’ (1972) ವಿಷ್ಣುವರ್ಧನ್‌ಗೆ ಆ್ಯಂಗ್ರಿ ಯಂಗ್‌ಮ್ಯಾನ್ ಇಮೇಜು ದೊರಕಿಸಿಕೊಟ್ಟಿತು. ಅಂಬರೀಶ್‌ರ `ಜಲೀಲ್’ ಪಾತ್ರದ ಡೈಲಾಗನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ನಿರ್ದೇಶಕ ಪುಟ್ಟಣ್ಣ ಮತ್ತು ಛಾಯಾಗ್ರಾಹಕ ಚಿಟ್ಟಿಬಾಬು ಚಿತ್ರದುರ್ಗದ ಕೋಟೆಯನ್ನು ಆಕರ್ಷಕವಾಗಿ ಸೆರೆಹಿಡಿದಿದ್ದರು. `ನಾಗರಹಾವು’ ತೆರೆಕಂಡ ನಂತರ ದುರ್ಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಸುಳ್ಳಲ್ಲ.
ಮುಂದೆ `ನಾಗರಹಾವು’ ಚಿತ್ರವನ್ನು ಪುಟ್ಟಣ್ಣನವರು `ಜಹ್ರೀಲಾ ಇನ್ಸಾನ್’ (1974) ಶೀರ್ಷಿಕೆಯಡಿ ಹಿಂದಿಯಲ್ಲಿ ನಿರ್ದೇಶಿಸಿದರು. ರಿಶಿ ಕಪೂರ್, ಮೌಸಮಿ ಚಟರ್ಜಿ, ನೀತೂ ಸಿಂಗ್ ಮುಖ್ಯಭೂಮಿಕೆಯಲ್ಲಿದ್ದರೆ, ಅಂಬರೀಶ್ ಅಲ್ಲಿಯೂ `ಜಲೀಲ್’ ಆಗಿದ್ದರು. ಹಿಂದಿಯಲ್ಲಿ `ಚಾಮಯ್ಯ ಮೇಷ್ಟ್ರು’ ಪಾತ್ರ ನಿರ್ವಹಿಸಿದ್ದು ನಟ ಪ್ರಾಣ್. ಕನ್ನಡದಲ್ಲಿ ಅಂಕಲ್ ಲೋಕನಾಥ್ ಮಾಡಿದ್ದ ಪಾತ್ರವನ್ನು ಹಿಂದಿ ಅವತರಣಿಕೆಯಲ್ಲಿ ಇಫ್ತೆಕಾರ್ ಖಾನ್ ನಿರ್ವಹಿಸಿದ್ದರು.