ಕೇಳಿ ಪ್ರೇಮಿಗಳೇ, ಒಬ್ಬಳು ಸುಂದರಿ ಇದ್ದಳು.. ‘ಯುಗಪುರುಷ’ ಚಿತ್ರದ ಈ ಹಾಡು ಆಗ ಸಿನಿಪ್ರೇಕ್ಷಕರಲ್ಲಿ ಒಂದು ರೀತಿ ಗುಂಗು ಹಿಡಿಸಿತ್ತು. ಏಕತಾನತೆಯ ಸಿನಿಮಾಗಳು ಬರುತ್ತಿದ್ದ ಹೊತ್ತಿನಲ್ಲಿ ‘ಯುಗಪುರುಷ’ (1989) ಸಂಚಲನ ಸೃಷ್ಟಿಸಿತ್ತು. ಹಂಸಲೇಖ ಸಾಹಿತ್ಯ ಮತ್ತು ಸಂಗೀತವಿದ್ದ ಚಿತ್ರಕ್ಕೆ ವಿಶೇಷ ಮೆರುಗು ತಂದದ್ದು ಬಹುಭಾಷೆ ತಾರೆ ಮೂನ್‌ಮೂನ್ ಸೇನ್. ಪುನರ್ಜನ್ಮದ ಕತೆಯ ಚಿತ್ರದಲ್ಲಿ ನೆಗೆಟಿವ್ ಶೇಡ್‌ನ ಪಾತ್ರಕ್ಕೆ ಅವರು ಸೂಕ್ತ ರೀತಿಯಲ್ಲಿ ಹೊಂದಿಕೆಯಾಗಿದ್ದರು. ಒಂದೆಡೆ ರವಿಚಂದ್ರನ್ – ಖುಷ್ಬೂ ಪ್ರೇಮಿಗಳಾಗಿ ಇಷ್ಟವಾದರೆ ಮತ್ತೊಂದೆಡೆ ಮೂನ್ ಮೂನ್ ಸೇನ್ ತಮ್ಮ ಮೋಹಕ ಲುಕ್‌ನಿಂದ ಪ್ರೇಕ್ಷಕರನ್ನು ಸೆಳೆದಿದ್ದರು.

ಸುಭಾಷ್ ಘಾಯ್ ನಿರ್ದೇಶನದಲ್ಲಿ ತೆರೆಕಂಡ ಸೂಪರ್‌ಹಿಟ್ ಸಿನಿಮಾ ‘ಕರ್ಝ್’ ರೀಮೇಕ್ ‘ಯುಗಪುರುಷ’. ಇಲ್ಲಿ ನಿರ್ದೇಶಕ ಡಿ ರಾಜೇಂದ್ರಬಾಬು ಕನ್ನಡದ ನೇಟಿವಿಗೆ ಹೊಂದಿಸಿಕೊಂಡು ಚಿತ್ರ ಮಾಡಿದ್ದರು. ಹಂಸಲೇಖ ಸಾಹಿತ್ಯ-ಸಂಗೀತ ಚಿತ್ರವನ್ನು ಎತ್ತರಕ್ಕೆ ಕೊಂಡೊಯ್ದಿತ್ತು. ಮೂಲ ಹಿಂದಿ ಚಿತ್ರದಲ್ಲಿ ಸಿಮಿ ಗರೇವಾಲ್ ನಟಿಸಿದ್ದ ‘ಕಾಮಿನಿ’ ಪಾತ್ರವನ್ನು ಕನ್ನಡದಲ್ಲಿ ಮೂನ್‌ಮೂನ್ ಸೇನ್ ಪ್ರಭಾವಶಾಲಿಯಾಗಿ ನಿರ್ವಹಿಸಿದ್ದರು. ಈ ಚಿತ್ರದ ಭರ್ಜರಿ ಯಶಸ್ಸಿನೊಂದಿಗೆ ಮೂನ್‌ಮೂನ್ ಸೇನ್ ದಕ್ಷಿಣದ ಇತರೆ ಭಾಷೆಗಳ ಚಿತ್ರಗಳಲ್ಲೂ ನಟಿಸುವಂತಾಯ್ತು. ‘ಯುಗಪುರುಷ’ ಚಿತ್ರದ ನಂತರ ಅವರು ‘ವೈಶಾಖದ ದಿನಗಳು’ ಮತ್ತು ‘ಮಾಂಗಲ್ಯ ಬಂಧನ’ ಚಿತ್ರಗಳಲ್ಲಿ ಅಭಿನಯಿಸಿದರು.

ಖ್ಯಾತ ಬೆಂಗಾಲಿ ನಟಿ ಸುಚಿತ್ರ ಸೇನ್ ಪುತ್ರಿ ಮೂನ್ ಮೂನ್ ಸೇನ್. ಬೆಂಗಾಲಿ, ಹಿಂದಿ, ಕನ್ನಡ, ತಮಿಳು, ತೆಲುಗು ಮಲಯಾಳಂ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂತೆ ಎಂಟು ಭಾಷೆಗಳ ಚಿತ್ರಗಳಲ್ಲಿ ಮೂನ್‌ಮೂನ್ ಸೇನ್ ನಟಿಸಿದ್ದಾರೆ. ನಲವತ್ತಕ್ಕೂ ಹೆಚ್ಚು ಟೀವಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರು ಸದ್ಯ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಖ್ಯಾತ ತೆಲುಗು ನಿರ್ದೇಶಕ ಕೆ ವಿಶ್ವನಾಥ್ ನಿರ್ದೇಶನದ ‘ಶ್ರೀವೆನ್ನಲ’ ತೆಲುಗು ಚಿತ್ರದ ಅಭಿನಯಕ್ಕಾಗಿ ಮೂನ್‌ಮೂನ್ ಸೇನ್ ಅವರಿಗೆ ನಂದಿ ಪುರಸ್ಕಾರ ಲಭಿಸಿದೆ. ಅವರ ಇಬ್ಬರು ಪುತ್ರಿಯರಾದ ರೈಮಾ ಸೇನ್ ಮತ್ತು ರಿಯಾ ಸೇನ್ ಹಿಂದಿ ಮತ್ತು ಬೆಂಗಾಲಿ ಸಿನಿಮಾ ತಾರೆಯರು. ಇಂದು 67ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮೂನ್‌ಮೂನ್ ಸೇನ್ ಕನ್ನಡಿಗರಿಗೆ ‘ಯುಗಪುರುಷ’ ಚಿತ್ರದ ಮರೆಯಲಾಗದ ಪಾತ್ರದಲ್ಲಿ ನೆನಪಾಗುತ್ತಾರೆ.