(ಮಾಹಿತಿ ಸಂಗ್ರಹ – ಅನುವಾದ: ಚಿತ್ರಾ ಸಂತೋಷ್) (ಫೋಟೊ ಕೃಪೆ: ನ್ಯಾಷನಲ್ ಹೆರಾಲ್ಡ್)
“ನಾನು ಗಾಯಕಿ ಆಗಿರದಿದ್ದರೆ… ಬೇರೆ ಏನು ಆಗುತ್ತಿದ್ದೆ…? ಎಂದು ಯೋಚಿಸಿದರೆ ಆ ಉತ್ತರಗಳ ಪಟ್ಟಿಯಲ್ಲಿ ಫೋಟೋಗ್ರಫಿ ಕೂಡ ಇದೆ. ಖಂಡಿತವಾಗಲೂ ಫೋಟೋಗ್ರಫಿ ನನ್ನ ಜೀವನದ ದಾರಿಗಳ ಆಯ್ಕೆಯಲ್ಲಿರುತ್ತಿತ್ತು. ಬಾಲ್ಯದಿಂದಲೂ ಪೋಟೋಗ್ರಫಿಯೆಂದರೆ ಆಸಕ್ತಿ, ಪ್ರೀತಿ ಹೆಚ್ಚು. ನಾನೆಲ್ಲೇ ಹೋದರೂ ಕ್ಯಾಮರಾ ಒಡನಾಡಿಯಾಗುತ್ತಿತ್ತು. ಸ್ಟುಡಿಯೋಗೆ ಹೋಗುವಾಗಲೂ ಕ್ಯಾಮರಾ ಜೊತೆಗಿರುತ್ತಿತ್ತು. ಅಲ್ಲಿ ಸಹೋದ್ಯೋಗಿಗಳ ಫೋಟೋ ತೆಗೆಯುತ್ತಿದ್ದೆ. ಮನೆಯಲ್ಲಿ ಅಮ್ಮ, ನನ್ನ ಸಹೋದರರು, ಸಹೋದರಿಯರ ಫೋಟೋಗಳನ್ನೂ ಸೆರೆಹಿಡಿಯುತ್ತಿದ್ದೆ. ಯುವತಿಯಾಗಿದ್ದಾಗ ನಾನು ತೆಗೆದ ಪೋಟೋಗಳ ಪ್ರದರ್ಶನ ಕೂಡ ನಡೆದಿದ್ದು ಇದೆ!
ಪೋಟೋಗ್ರಫಿ ಆಸಕ್ತಿಯಿಂದಾಗಿ 1946ರಲ್ಲಿ ರೋಲಿಫ್ಲೆಕ್ಸ್ ಕ್ಯಾಮೆರಾ ಖರೀದಿಸಿದ್ದೆ. ಅದರಲ್ಲಿ ಫೋಟೋ ತೆಗೆಯುವ ಮಜಾನೇ ಬೇರೆ. ಈಗ ಫೋಟೋಗ್ರಫಿಯಲ್ಲೂ ಡಿಜಿಟಲ್ ಬಂದಿದೆ. ಈಗಿನವರು ಮೊಬೈಲ್ನಲ್ಲೇ ಫೋಟೋಗ್ರಫಿ ಮಾಡುತ್ತಾರೆ. ಹಳೆಯ ಶೈಲಿಯ ಕ್ಯಾಮೆರಾ ಮಸೂರದ ಮೂಲಕ ಚಿತ್ರಗಳನ್ನು ಸೆರೆಹಿಡಿಯುವ ಖುಷಿ ಈಗ ಎಲ್ಲಿದೆ?” ಎಂದ ಲತಾಜೀ ಮಾತುಗಳನ್ನು 2019ರ ವಿಶ್ವ ಫೋಟೋಗ್ರಫಿ ದಿನ ನ್ಯಾಷನಲ್ ಹೆರಾಲ್ಡ್ ಪ್ರಕಟಿಸಿತ್ತು!

1200 ರೂ. ನೀಡಿ ಲತಾಜೀ ರೋಲಿಫ್ಲೆಕ್ಸ್ ಕ್ಯಾಮೆರಾ ಖರೀದಿಸಿದ್ದರಂತೆ! ಆದರೆ ಯಾವಾಗ ಅವರು ನಟಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡರೋ ತದನಂತರ ಪೋಟೋಗ್ರಫಿ ಅವರ ಮೆಚ್ಚಿನ ಹವ್ಯಾಸಗಳ ಪಟ್ಟಿಯಲ್ಲಷ್ಟೇ ಇತ್ತು. ಲತಾಜೀಗೆ ಜನಪ್ರಿಯ ಫ್ಯಾಶನ್ ಫೋಟೋಗ್ರಫರ್ ಆಗಿದ್ದ ಗೌತಮ್ ರಾಜಾಧ್ಯಕ್ಷ ಅವರು ಫೋಟೋಗ್ರಫಿಗೆ ಸಂಬಂಧಪಟ್ಟಂತೆ ಸಾಕಷ್ಟು ಸಲಹೆಗಳನ್ನು ನೀಡಿದ್ದರು. ಲತಾಜೀ ಹೇಳುವಂತೆ “ಗೌತಮ್ ನಾನು ತೆಗೆದ ಛಾಯಾಚಿತ್ರಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು. ನನ್ನ ಕ್ಯಾಮರಾ ಮತ್ತು ಚಿತ್ರಗಳ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು. ನಾನೊಬ್ಬಳು ಒಳ್ಳೆಯ ಫೋಟೋಗ್ರಾಫರ್ ಆಗಬಲ್ಲೆ ಎಂದು ಪ್ರೇರೇಪಣೆಯ ಮಾತುಗಳನ್ನಾಡುತ್ತಿದ್ದರು” ಎಂದವರು ಹೇಳಿಕೊಂಡಿದ್ದಾರೆ.
ಆದರೆ ಇದೇ ಗೌತಮ್ ರಾಜಾಧ್ಯಕ್ಷರ ಫೋಟೋಗಳನ್ನು ನೋಡಿ “ನನ್ನ ಫೋಟೋಗಳು ಇವುಗಳ ಮುಂದೆ ಏನೂ ಅಲ್ಲ” ಎಂದೆನಿಸಿ ಫೋಟೋಗ್ರಫಿಯೆಂದರೆ ಲತಾ ಅವರೇ ನಿರಾಸಕ್ತಿ ತೋರುತ್ತಾರೆ. ಸುಮಾರು 12 ವರ್ಷಗಳ ಹಿಂದೆ ಔಟ್‌ಲುಕ್ ಮ್ಯಾಗಜಿನ್ ನೊಂದಿಗೆ ಮಾತನಾಡಿದ ಲತಾ ಮಂಗೇಶ್ಕರ್ “ಸಲೀಲ್ ಚೌಧರಿ ಸ್ಟುಡಿಯೋದಲ್ಲಿ ಬಂಗಾಳಿ ಗೀತೆಯೊಂದರ ರೆಕಾರ್ಡಿಂಗ್ ನಡೆಯುತ್ತಿತ್ತು. ಅಲ್ಲಿ ಗೌತಮ್ ಬಂದಿದ್ದರು. ನಾನು ತೆಗೆದ ಚಿತ್ರಗಳನ್ನು ಅವರೂ ನೋಡಿದರು. ನನಗೆ ಖುಷಿಯಾಯಿತು. ಆದರೆ ಯಾವಾಗ ನಾನು ಗೌತಮ್ ಅವರ ಫೋಟೋಗ್ರಫಿಯನ್ನು ನೋಡಿದೆನೋ ನನಗೆ ತುಂಬಾ ನಿರಾಶೆಯಾಯಿತು. ಅವರ ಫೋಟೋಗಳಿಗೆ ಯಾವುದೂ ಸರಿಸಾಟಿ ಇರಲಿಲ್ಲ. ಈ ಘಟನೆಯ ನಂತರ ಫೋಟೋಗ್ರಫಿ ಮಾಡಬಾರದೆಂಬ ನಿರ್ಧಾರಕ್ಕೆ ಬಂದೆ’’ ಎನ್ನುತ್ತಾರೆ. ಆದರೆ ಲತಾಜೀ ಅವರು ತಾನು ಒಳ್ಳೆಯ ಫೋಟೋಗ್ರಫರ್ ಅಲ್ಲವೆಂದು ಹೇಳಿಕೊಂಡರೂ ಗೌತಮ್ ರಾಜ್ಯಾಧ್ಯಕ್ಷ ಒಂದು ಕಡೆ; “ಲತಾಜೀ ಅವರ ಫೋಟೋ ಶೂಟ್ ಮಾಡುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಆಕೆ ಅತ್ಯುತ್ತಮ ಫೋಟೋಗ್ರಾಫರ್ ಆಗಿದ್ದರು. ಮಾತ್ರವಲ್ಲ ಫೋಟೋಗ್ರಫಿಯ ಆಯಾಮಗಳನ್ನು ನುರಿತವರಾಗಿದ್ದರು’’ ಎಂದು ಹೇಳಿಕೊಂಡಿದ್ದಾರೆ!
