1975, ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ‘ಶೋಲೆ’ ಹಿಂದಿ ಸಿನಿಮಾ ಬಿಡುಗಡೆಯಾಗಿತ್ತು. ಮೊದಲ ಎರಡು ವಾರ ಜನರು ಥಿಯೇಟರ್‌ಗೆ ಬರಲಿಲ್ಲ. ಸಿನಿ ವಿಮರ್ಶಕರು ಕೂಡ ಚಿತ್ರವನ್ನು ಟೀಕಿಸಿ ಬರೆದಿದ್ದರು. ಆದರೆ ಮೂರನೇ ವಾರದಲ್ಲಿ ಚಿತ್ರಣ ಸಂಪೂರ್ಣ ಬದಲಾಯ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬರತೊಡಗಿದರು. ಪ್ರೇಕ್ಷಕರ ಮೆಚ್ಚುಗೆಯ ಮಾತುಗಳೇ ಪ್ರಚಾರದ ಸರಕಾಯ್ತು. ಮುಂದಿನದ್ದು ಇತಿಹಾಸ!
ಆರಂಭದಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಾಗ ನಿರ್ಮಾಪಕ ರಮೇಶ್ ಸಿಪ್ಪಿ, ನಿರ್ದೇಶಕ ಜಿ.ಪಿ.ಸಿಪ್ಪಿ ಚಿತ್ರದಲ್ಲಿ ಕೆಲವು ಬದಲಾವಣೆ ಮಾಡಲು ಯೋಜಿಸಿದ್ದರು. ಚಿತ್ರದಲ್ಲಿ ಅಮಿತಾಭ್ ಪಾತ್ರ (ಜೈ) ಕೊನೆಯುಸಿರೆಳೆಯುತ್ತದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿರಲಿಕ್ಕಿಲ್ಲ ಎಂದು ಚಿತ್ರದ ತಂತ್ರಜ್ಞರು ಭಾವಿಸಿದ್ದರು. ಕೆಲವು ಸನ್ನಿವೇಶಗಳನ್ನು ಮತ್ತೆ ಚಿತ್ರಿಸಿ ಸಿನಿಮಾಗೆ ಸೇರಿಸಲು ಯೋಜಿಸಿದ್ದರು. ಅಷ್ಟರಲ್ಲಿ ಚಿತ್ರಣ ಬದಲಾಗಿತ್ತು. ಥಿಯೇಟರ್‌ಗಳು ಭರ್ತಿಯಾಗತೊಡಗಿದಾಗ ನಿರ್ಮಾಪಕರು ನಿಟ್ಟುಸಿರುಬಿಟ್ಟರು.
ದೇಶದ ಎಲ್ಲಾ ನಗರಗಳಲ್ಲಿ ಸಿನಿಮಾಗೆ ಭರ್ಜರಿ ಯಶಸ್ಸು ಸಿಕ್ಕಿತು. ದೇಶದ 60 ಥಿಯೇಟರ್‌ಗಳಲ್ಲಿ ಸಿನಿಮಾ ಸ್ವರ್ಣ ಮಹೋತ್ಸವ (ನಿರಂತರ 50 ವಾರಗಳು) ಆಚರಿಸಿಕೊಂಡಿತು. ಇದು ಇಂದಿಗೂ ದಾಖಲೆಯಾಗಿ ಉಳಿದಿದೆ. ದೇಶದ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬೆಳ್ಳಿ ಮಹೋತ್ಸವ (ನಿರಂತರ 25 ವಾರಗಳು) ಆಚರಿಸಿಕೊಂಡಿತು. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದು ದಾಖಲೆಯ ಪ್ರದರ್ಶನ.
ಮುಂಬಯಿಯ ಮಿನರ್ವ ಥಿಯೇಟರ್‌ನಲ್ಲಿ ‘ಶೋಲೆ’ ಐದು ವರ್ಷಗಳ ಕಾಲ ಪ್ರದರ್ಶನಗೊಂಡಿತು. ‘ದಿಲ್‌ವಾಲೇ ದುಲ್ಹಾನಿಯಾ ಲೇ ಜಾಯೇಂಗೆ’ ಸಿನಿಮಾ ಸದ್ದು ಮಾಡುವವರೆಗೂ ಈ ದಾಖಲೆ ‘ಶೋಲೆ’ ಹೆಸರಿನಲ್ಲಿತ್ತು. 2001ರಲ್ಲಿ ‘ದಿಲ್‌ವಾಲೇ..’ ಈ ದಾಖಲೆ ಸರಿಗಟ್ಟಿ ಮುಂದುವರೆಯಿತು. ಸುಮಾರು 2 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಮೊದಲ ರಿಲೀಸ್‌ನಲ್ಲಿ 15 ಕೋಟಿ ರೂಪಾಯಿ ಗಳಿಸಿತು ಎನ್ನುವುದು ಅಂದಾಜು. ಮುಂದಿನ ಹತ್ತೊಂಬತ್ತು ವರ್ಷಗಳವರೆಗೆ ಈ ದಾಖಲೆ ‘ಶೋಲೆ’ ಹೆಸರಿನಲ್ಲಿತ್ತು. ಆರಂಭದ ಗಳಿಕೆ ಮತ್ತು ಮುಂದಿನ ಮೂವತ್ತು ವರ್ಷಗಳ ಗಳಿಕೆಯನ್ನೂ ಗಣನೆಗೆ ತೆಗೆದುಕೊಳ್ಳುವುದಾದರೆ (ಹಣದುಬ್ಬರ) ಭಾರತೀಯ ಸಿನಿಮಾ ಇತಿಹಾಸದಲ್ಲೇ ‘ಶೋಲೆ’ ಗಳಿಕೆ ಸಾರ್ವಕಾಲಿಕ ದಾಖಲೆ.
(ಫೋಟೊ ಕೃಪೆ: ಮೋಹನ್ ಬಾಬು ಬಿ.ಕೆ.)
