(ಬರಹ: ಮೋಹನ್ ಬಾಬು ಬಿ.ಕೆ.)
ತೆಲುಗು ಚಿತ್ರರಂಗದ ಇತಿಹಾಸದಲ್ಲಿ ‘ಮಹಾನಟಿ’ ಎಂದೇ ಕರೆಸಿಕೊಂಡಿದದ ತಾರೆ ಸಾವಿತ್ರಿಯವರದ್ದೇ ಒಂದು ಮಹಾ ಅಧ್ಯಾಯ. ಆಕೆಯ ಕಲಾಸೇವೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಅಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ನೀಲಂ ಸಂಜೀವರೆಡ್ಡಿಯವರು ಆಕೆಯನ್ನು ಅಭಿನಂದಿಸಲು ಹೈದರಾಬಾದ್‌ನ ರವೀಂದ್ರ ಭಾರತಿ ಕಲಾಮಂದಿರದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಿದ್ದರು.
ಅಭಿಮಾನಿಗಳು ಸಾವಿತ್ರಿ ಅವರನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿಕೊಂಡು ಬಂದಿದ್ದರು. ಮುಖ್ಯಮಂತ್ರಿಯವರು ಅವರನ್ನು ಕಲಾಮಂದಿರದ ಹತ್ತಿರದಿಂದ ತಾವೂ ಸಹ ಆ ಮೆರವಣಿಗೆಯಲ್ಲಿ ಬಂದು ಅವರನ್ನು ಆಹ್ವಾನಿಸಿದ್ದರಂತೆ. ಇದು ಭಾರತೀಯ ಚಿತ್ರರಂಗದಲ್ಲಿ ಒಬ್ಬ ನಟಿಗೆ ಸಿಕ್ಕ ಅತ್ಯುನ್ನತ ಗೌರವ ಎಂದರೆ ಅತಿಶಯೋಕ್ತಿಯಾಗದು.
ಒಡವೆ ನೀಡಿದರು…
ಅದು 1965ನೇಯ ಇಸವಿಯಲ್ಲಿ ನಡೆದ ಘಟನೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಯುದ್ಧದ ಸಮಯ. ಅಂದು ಮಧ್ಯಾಹ್ನ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಅಂದಿನ ಪ್ರಧಾನಿಗಳಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಇದ್ದರು. ಆಗ ಅಧಿಕಾರಿಯೊಬ್ಬರು ಬಂದು ತಮ್ಮನ್ನು ಕಾಣಲು ಚಿತ್ರನಟಿಯೊಬ್ಬರು ಬಂದಿದ್ದಾರೆ ಎಂದಾಗ, ಅವರನ್ನು ಒಳಗೆ ಬಿಡಲು ತಿಳಿಸುತ್ತಾರೆ.
ಸಾವಿತ್ರಿಯವರನ್ನು ಬಹಳ ಗೌರವವಾಗಿ ಮಾತನಾಡಿಸಿದ ಪ್ರಧಾನಿಯರು ಬಂದ ವಿಷಯ ಕೇಳುತ್ತಾರೆ. ಯುದ್ಧದ ಸಮಯವಾದ್ದರಿಂದ ದೇಶದ ಸೈನ್ಯಕ್ಕೆ ಆಗಲಿ, ಜನಗಳಿಗೆ ಒಳ್ಳೆಯದಾಗಲಿ ಎಂಬ ಕಾರಣದಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಣ ಸ೦ಗ್ರಹ ನಡೆಯುತ್ತಿರುತ್ತದೆ. ಮಾತುಕಥೆಯೆಲ್ಲಾ ಮುಗಿದು ಹೊರಡುವ ಸಮಯದಲ್ಲಿ ಸಾವಿತ್ರಿಯವರು ತಮ್ಮ ಮೈಮೇಲಿನ ಒಡೆವೆಯನ್ನು ತೆಗೆದು, “ಪ್ರಧಾನ ಮಂತ್ರಿಗಳ ಪರಿಹಾರನಿಧಿಗಾಗಿ ವಿನಿಯೋಗಿಸಿಕೊಳ್ಳಿ” ಎನ್ನುತ್ತಾರೆ. ಅಂದು ಅವರು ನೀಡಿದ ಒಡವೆಗಳ ಮೊತ್ತ ಬರೋಬ್ಬರಿ 3.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಇಂದು ಅದರ ಮೌಲ್ಯವನ್ನು ಲೆಕ್ಕಹಾಕಿದರೆ ಎಷ್ಟಾಗಬಹುದು?
