ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ‘ರಣಬಾಲಿ’ ತೆಲುಗು ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮೈತ್ರಿ ಮೇಕರ್ಸ್ ನಿರ್ಮಾಣದ ಸಿನಿಮಾ ಅಕ್ಟೋಬರ್ 16ರಂದು ತೆರೆಕಾಣಲಿದೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ರಾಹುಲ್ ಸಾಂಕೃತ್ಯನ್ ಕಾಂಬಿನೇಷನ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ಮೂಡಿಬರುತ್ತಿರುವ ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ.
1854ರಿಂದ 1878ರ ನಡುವಿನ ಬ್ರಿಟಿಷ್ ಆಳ್ವಿಕೆಯ ಕಾಲಘಟ್ಟದಲ್ಲಿ ರಾಯಲಸೀಮೆ ಪ್ರಾಂತ್ಯದಲ್ಲಿ ನಡೆದ ರೋಚಕ ನೈಜ ಘಟನೆಗಳನ್ನು ಆಧರಿಸಿ ಈ ಪಿರಿಯಾಡಿಕ್ ಡ್ರಾಮಾವನ್ನು ತೆರೆಗೆ ತರಲಾಗುತ್ತಿದ್ದು, ಚಿತ್ರದಲ್ಲಿ ವಿಜಯ್ ದೇವರಕೊಂಡ ಶಕ್ತಿಶಾಲಿ ಯೋಧನಾಗಿ ಅಬ್ಬರಿಸಿದ್ದಾರೆ. ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿರುವ ಈ ಬೃಹತ್ ಕ್ಯಾನ್ವಾಸ್‌ನ ಸಿನಿಮಾ, ದಸರಾ ಹಬ್ಬದ ವಿಶೇಷ ಕೊಡುಗೆಯಾಗಿ ಅಕ್ಟೋಬರ್ 16ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ.
ಚಿತ್ರದಲ್ಲಿ ವಿಜಯ್ ದೇವರಕೊಂಡ ‘ರಣಬಾಲಿ’ ಎಂಬ ಪರಾಕ್ರಮಿ ಯೋಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಶ್ಮಿಕಾ ಮಂದಣ್ಣ ಅವರ ಪತ್ನಿ ‘ಜಯಮ್ಮ’ನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಇನ್ನು ಹಾಲಿವುಡ್‌ನ ಖ್ಯಾತ ನಟ ಅರ್ನಾಲ್ಡ್ ವೋಸ್ಲೂ ಈ ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿ ಹಾಗೂ ಮುಖ್ಯ ಖಳನಾಯಕನಾಗಿ ಅಖಾಡಕ್ಕಿಳಿದಿರುವುದು ಚಿತ್ರದ ತೂಕವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಚಿತ್ರಗಳಲ್ಲಿ ಜೊತೆಯಾಗಿ ಮಿಂಚಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ವಿಜಯ್ ಮತ್ತು ರಶ್ಮಿಕಾ, ಈ ಚಿತ್ರದ ಮೂಲಕ ಮೂರನೇ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ದಂಪತಿಯಾದ ನಂತರ ಈ ಹಿಟ್ ಜೋಡಿಯಿಂದ ಬರುತ್ತಿರುವ ಮೊದಲ ಸಿನಿಮಾ ಇದಾಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.
ಟೀಸರ್ ಹಂಚಿಕೊಂಡು ಕಥೆಯ ಗಾಂಭೀರ್ಯದ ಬಗ್ಗೆ ತಿಳಿಸಿರುವ ಚಿತ್ರತಂಡ, ‘ಅವರು ಆ ಕಥೆಯನ್ನು ಹೂತುಹಾಕಿದರು… ಅವರು ಆ ಹೆಸರನ್ನು ಅಳಿಸಿಹಾಕಿದರು. ತಮ್ಮ ಪಾಪಗಳನ್ನು ತೊಡೆದುಹಾಕಲು ಯತ್ನಿಸಿದರು. ಆದರೆ ಆತನ ಎದೆಯಲ್ಲಿದ್ದ ರೌದ್ರಾಗ್ನಿಯನ್ನು ಮಾತ್ರ ಯಾರಿಂದಲೂ ಹೂತುಹಾಕಲು ಸಾಧ್ಯವಾಗಲಿಲ್ಲ. ಜಾನಪದ ಕಥೆಗಳು ಮತ್ತು ಇತಿಹಾಸ ಆತನನ್ನು ಎಂದಿಗೂ ಮರೆಯುವುದಿಲ್ಲ. ಇದು ರಣಬಾಲಿ ಎಂಬ ಯೋಧನ ಪ್ರತಿಜ್ಞೆ’ ಎಂದು ರೋಷಾವೇಷದ ಸಾಲುಗಳನ್ನು ಹಂಚಿಕೊಂಡಿದೆ. ಮತ್ತೊಂದೆಡೆ ನಾಯಕ ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು, ‘ಅತಿಥಿಗಳಾಗಿ ಬಂದು ಕ್ರೂರ ಶೋಷಕರಾಗಿ ಉಳಿದುಬಿಟ್ಟವರನ್ನು ಹಾಗೂ ಅವರ ವಿರುದ್ಧ ರಕ್ತ ಹರಿಸಲು ನಿರ್ಧರಿಸಿದ ನಮ್ಮ ಹಳ್ಳಿಗಳ ಸ್ವಾಭಿಮಾನಿ ಜನರನ್ನು ಎಂದಿಗೂ ಮರೆಯಬೇಡಿ’ ಎಂದು ಬರೆದುಕೊಂಡು ಕಥೆಯ ಕ್ರಾಂತಿಕಾರಿ ಹಿನ್ನೆಲೆಯನ್ನು ಅನಾವರಣಗೊಳಿಸಿದ್ದಾರೆ.
ಟಿ-ಸೀರೀಸ್ ಅರ್ಪಣೆಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಮೆಗಾ ಪ್ರಾಜೆಕ್ಟ್ ಅನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಭಾರತದ ಖ್ಯಾತ ಸಂಗೀತ ಜೋಡಿ ಅಜಯ್-ಅತುಲ್ ಶಕ್ತಿಶಾಲಿ ಹಿನ್ನೆಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದು, ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಅವರ ಅದ್ಭುತ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣವು ಪ್ರಸ್ತುತ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿವೆ. ಐತಿಹಾಸಿಕ ಕಥಾಹಂದರ ಹಾಗೂ ಮೈನವಿರೇಳಿಸುವ ಸಾಹಸ ದೃಶ್ಯಗಳೊಂದಿಗೆ ‘ರಣಬಾಲಿ’ ಇದೇ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.







