ಎಪ್ಪತ್ತರ ದಶಕದ ಕನ್ನಡ ಚಿತ್ರನಿರ್ಮಾಪಕ ಮತ್ತು ನಿರ್ದೇಶಕ ಎ.ಎಂ.ಸಮೀವುಲ್ಲಾ. ಮಂಡ್ಯದಲ್ಲಿ ಜನಿಸಿದ ಅವರು ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲಿ. ಪೆಟ್ರೋಲ್ ಬಂಕ್‌ಗಳ ವ್ಯವಹಾರ ನಡೆಸುತ್ತಿದ್ದ ಅವರಿಗೆ ಸಿನಿಮಾರಂಗದೆಡೆ ಆಸಕ್ತಿ, ನಟನಾಗಬೇಕೆನ್ನುವ ಇರಾದೆಯಿತ್ತು. ‘ಸಂಗಂ’ ಸಿನಿಮಾ ಥಿಯೇಟರ್ ಮಾಲೀಕರು ಹಾಗೂ ಚಿತ್ರವಿತರಕರೂ ಆದ ಆರ್.ಎನ್.ಮಾಂಡ್ರೆ ಅವರು ಸಮೀವುಲ್ಲಾರನ್ನು ಚಿತ್ರರಂಗಕ್ಕೆ ಕರೆತಂದರು. ಮಾಂಡ್ರೆ ಅವರ ಒತ್ತಾಯದ ಮೇರೆಗೆ ಸಮೀವುಲ್ಲಾ ‘ಸಂಗೀತಾ ಪಿಕ್ಚರ್ಸ್’ ಹಂಚಿಕಾ ಸಂಸ್ಥೆ ಸ್ಥಾಪಿಸಿದರು. ತಮ್ಮ ಸಂಸ್ಥೆಯಡಿ ಅವರು ಹಂಚಿಕೆ ಮಾಡಿದ ಮೊದಲ ಸಿನಿಮಾ ‘ತೂಗುದೀಪ’. ಚಿತ್ರರಂಗ ಪ್ರವೇಶಿಸಿದ ಎರಡೇ ವರ್ಷದಲ್ಲಿ ‘ಸ್ವರ್ಣಭೂಮಿ’ ಚಿತ್ರದೊಂದಿಗೆ ಅವರು ನಿರ್ದೇಶಕರೂ ಆದರು.
ಓದುವ ಹವ್ಯಾಸವಿದ್ದ ಅವರಿಗೆ ಬೆಳ್ಳಿತೆರೆಗೆ ಒಪ್ಪುವಂತಹ ಕತೆಗಳ ಬಗ್ಗೆ ಅರಿವಿತ್ತು. ಒಟ್ಟು 30 ಚಿತ್ರಗಳನ್ನು ನಿರ್ಮಿಸಿ (ಬಾವಾ ಮೂವೀಟೋನ್ ಬ್ಯಾನರ್‌ನ ಅಡಿ), 7 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಠಕ್ಕ ಬಿಟ್ರೆ ಸಿಕ್ಕ, ಒಂದೇ ರೂಪ ಎರಡು ಗುಣ, ಸಂಶಯ ಫಲ ಅವರ ನಿರ್ದೇಶನದ ಪ್ರಮುಖ ಚಿತ್ರಗಳು. ‘ಸಂಶಯ ಫಲ’ ಚಿತ್ರದೊಂದಿಗೆ ಹಿಂದಿ ಚಿತ್ರಂಗದ ಖ್ಯಾತ ಸಂಗೀತ ಸಂಯೋಜಕ ಸಲೀಲ್ ಚೌಧರಿ ಅವರನ್ನು ಕನ್ನಡಕ್ಕೆ ಕರೆತಂದರು. ತಮ್ಮ ನಿರ್ದೇಶನದ ಸಿನಿಮಾಗಳ ಕತೆ, ಚಿತ್ರಕಥೆಯ ಜವಾಬ್ದಾರಿಯೂ ಇವರದೇ ಎನ್ನುವುದು ವಿಶೇಷ. ನಟನಾಗುವ ಆಸೆಯಿದ್ದ ಅವರು ‘ಲಗ್ನಪತ್ರಿಕೆ’ ಚಿತ್ರದ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡರಷ್ಟೆ. ಅವರ ನಿರ್ಮಾಣ, ನಿರ್ದೇಶನದ ಹಲವು ಚಿತ್ರಗಳು ತೆಲುಗಿಗೆ ಡಬ್ ಮತ್ತು ರೀಮೇಕಾಗಿವೆ. ಇಂದು ಸಮೀವುಲ್ಲಾ ಅವರ ಜನ್ಮದಿನ (1931, ಜುಲೈ 2).
(ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)