ಪಿ.ಆರ್.ಕೌಂಡಿನ್ಯ ನಿರ್ದೇಶನದಲ್ಲಿ ರಾಜಕುಮಾರ್, ಉದಯಕುಮಾರ್, ರಾಜಶ್ರೀ ಅಭಿನಯಿಸಿದ್ದ ‘ಬಾಲನಾಗಮ್ಮ’ ಸಿನಿಮಾ ತೆರೆಕಂಡು ಇಂದಿಗೆ 55 ವರ್ಷ. ವಿಕ್ರಂ ಶ್ರೀನಿವಾಸ್ ನಿರ್ಮಾಣದ ಸಿನಿಮಾ 1966ರ ಮಾರ್ಚ್ 18ರಂದು ತೆರೆಗೆ ಬಂದಿತ್ತು. ಜಾನಪದ ಕತೆಗಳನ್ನು ಜನರು ಹೆಚ್ಚು ಇಷ್ಟಪಟ್ಟು ನೋಡತೊಡಗಿದ್ದ ಆ ಕಾಲದಲ್ಲಿ ‘ಬಾಲನಾಗಮ್ಮ’ ಸಿನಿಮಾ ಗೆಲುವು ದಾಖಲಿಸಿತು. ಮದರಾಸಿನ ವಿಕ್ರಂ ಸ್ಟುಡಿಯೋದಲ್ಲಿ ಬಹುಪಾಲು ಚಿತ್ರೀಕರಣ ನಡೆದರೆ ನಗರದ ಹೊರವಲಯದಲ್ಲಿನ ವಿರುಗುಂಬಾಕಂ ಅರಣ್ಯಪ್ರದೇಶದಲ್ಲಿ ಹೊರಾಂಗಣ ಚಿತ್ರೀಕರಣ ನಡೆದಿತ್ತು.
ಆಗಷ್ಟೇ ಚಿತ್ರಸಾಹಿತ್ಯಕ್ಕೆ ತೆರೆದುಕೊಂಡಿದ್ದ ಚಿ.ಉದಯಶಂಕರ್ ಈ ಸಿನಿಮಾಗೆ ಸಂಭಾಷಣೆ ಬರೆದು ಗೀತೆಗಳನ್ನು ರಚಿಸಿದ್ದರು. ಅವರ ತಂದೆ ಚಿ.ಸದಾಶಿವಯ್ಯನವರು ಕೂಡ ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದರು ಎನ್ನುವುದು ವಿಶೇಷ. ರಾಜಕುಮಾರ್ ಜೋಡಿಯಾಗಿ ನಟಿಸಿದ್ದ ರಾಜಶ್ರೀ ಅವರಿಗೆ ಈ ಸಿನಿಮಾ ಹೆಸರು ತಂದುಕೊಟ್ಟಿತು. ಬಾಲಕೃಷ್ಣ, ನರಸಿಂಹರಾಜು, ಪಂಢರಿಬಾಯಿ, ರಮಾದೇವಿ, ಪಾಪಮ್ಮ, ನಾಗಯ್ಯ ಮತ್ತಿತರರು ಅಭಿನಯಿಸಿದ್ದರು. ಕುಣಿಗಲ್ ನಾಗಭೂಷಣ್ ಅವರು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. (ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)
