ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಚಿತ್ರದ ‘ರಾಧಾ ರಾಧಾ’ ಹಾಡು ಬಿಡುಗಡೆ

ಪೋಸ್ಟ್ ಶೇರ್ ಮಾಡಿ
ಗಣೇಶ್ ಅಭಿನಯದ 'ಬೃಂದಾವಿಹಾರಿ' ಚಿತ್ರದ 'ರಾಧಾ ರಾಧಾ' ಹಾಡು ಬಿಡುಗಡೆ

ಶ್ರೀನಿವಾಸ ರಾಜು ನಿರ್ದೇಶನದಲ್ಲಿ ಗಣೇಶ್‌ ನಟಿಸಿರುವ ‘ಬೃಂದಾವಿಹಾರಿ’ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. ಸಮೃದ್ಧಿ ಮಂಜುನಾಥ್‌ ನಿರ್ಮಾಣದ ಈ ಚಿತ್ರದ ನಾಯಕಿಯಾಗಿ ದೇವಿಕಾ ಭಟ್‌ ಅಭಿನಯಿಸಿದ್ದಾರೆ.

ನಾಯಕನಾಗಿ ಎರಡು ದಶಕಗಳನ್ನು ಪೂರೈಸಿರುವ ನಟ ಗಣೇಶ್ ನಾಯಕರಾಗಿ ನಟಿಸಿರುವ ‘ಬೃಂದಾ ವಿಹಾರಿ’ ಚಿತ್ರದ ಎರಡನೇ ಹಾಡು ‘ರಾಧಾ ರಾಧಾ’ ತುಮಕೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರೇ ‘ರಾಧಾ ರಾಧಾ’ ಹಾಡನ್ನು ಸಹಸ್ರಾರು ಜನರ ಸಮ್ಮುಖದಲ್ಲಿ ಅನಾವರಣ ಮಾಡಿದರು. ನಾಗೇಂದ್ರ ಪ್ರಸಾದ್ ಬರೆದಿರುವ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿರುವ, ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಹಾಡಿರುವ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ – ದೇವಿಕಾ ಭಟ್ ಅಭಿನಯಿಸಿರುವ ಈ ಹಾಡು ಅಭಿಮಾನಿಗಳಿಗೆ ಇಷ್ಟವಾಗಿದೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ‘ರಾಧಾ ರಾಧಾ’ ಹಾಡು ಅಧಿಕ‌ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

‘ನನಗೂ ಹಾಗೂ ತುಮಕೂರಿಗೂ ಹತ್ತಿರದ ನಂಟು. ನಾನು ಓದಿದ್ದು ನೆಲಮಂಗಲದಲ್ಲಿ. ಆಗಾಗ ತುಮಕೂರಿಗೆ ಬರುತ್ತಿದ್ದೆ. ಈಗ ನನ್ನ ಅಭಿನಯದ ಚಿತ್ರದ ಹಾಡು ತುಮಕೂರಿನಲ್ಲಿ ಬಿಡುಗಡೆಯಾಗಿದ್ದು ಬಹಳ ಖುಷಿಯಾಗಿದೆ. ಇನ್ನೂ, ನಾನು ನಾಯಕನಾಗಿ ಇಪ್ಪತ್ತು ವರ್ಷಗಳಾಗಿದೆ. ಈ ಸಂದರ್ಭದಲ್ಲಿ ನನ್ನ ಯಶಸ್ಸನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅವರಿಂದಲೇ ಇದು ಸಾಧ್ಯವಾಗಿದ್ದು. ಇದೇ ಸಂದರ್ಭದಲ್ಲಿ ನನ್ನ ಎಲ್ಲಾ ಚಿತ್ರದ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ತಿಳಿಸುತ್ತೇನೆ. ವಿಶೇಷ ಧನ್ಯವಾದವನ್ನು ಉದಯ ಟಿವಿಗೆ ಹೇಳುತ್ತೇನೆ. ಅಲ್ಲಿನ ‘ಕಾಮಿಡಿ ಟೈಮ್’ ಕಾರ್ಯಕ್ರಮವೇ ನನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದು’ಎಂದರು ನಟ ಗಣೇಶ್‌

‘ಬೃಂದಾ ವಿಹಾರಿ ಚಿತ್ರದಲ್ಲಿ ಏಳು ಹಾಡುಗಳಿದೆ. ಇಂದು ಎರಡನೇ ಹಾಡು ಅನಾವರಣವಾಗಿದೆ. ಈ ಸಂದರ್ಭದಲ್ಲಿ ನಾನು ನಿರ್ಮಾಪಕ ಸಮೃದ್ಧಿ ಮಂಜುನಾಥ್, ನಾಯಕ ಗಣೇಶ್ ಹಾಗೂ ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ನವಾಬ್ ಅವರಿಗೆ ಧನ್ಯವಾದ ಹೇಳುತ್ತೇನೆ. ಉಳಿದ ಹಾಡುಗಳು ಸಹ ಸುಮಧುರವಾಗಿದೆ‌‌. ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದರು ನಿರ್ದೇಶಕ ಶ್ರೀನಿವಾಸರಾಜು. ‘ಬೃಂದಾ ವಿಹಾರಿ ನಮ್ಮ ಸಂಸ್ಥೆಯ ನಿರ್ಮಾಣದ ನಾಲ್ಕನೇ ಚಿತ್ರ. ಇಂದು ತುಮಕೂರಿನಲ್ಲಿ ಸಹಸ್ರಾರು ಜನರ ಉಪಸ್ಥಿತಿಯಲ್ಲಿ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ’ ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ತಿಳಿಸಿದರು.

‘ಇದು ನನ್ನ ಮೊದಲ ಚಿತ್ರ. ಗಣೇಶ್ ಅವರ ಜೊತೆಗೆ ನಟಿಸಿದ್ದು ಖುಷಿಯಾಗಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ’ ಎಂದರು ನಾಯಕಿ ದೇವಿಕಾ ಭಟ್. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಚಿತ್ರವನ್ನು ಸಮೃದ್ಧಿ ವಿ ಮಂಜುನಾಥ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸರಾಜು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ಹಾಗೂ ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದಾರೆ.

ಈ ಬರಹಗಳನ್ನೂ ಓದಿ