ಶಂಕರ್‌ನಾಗ್ ನಿರ್ದೇಶನದ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಕನ್ನಡದ ಅಪರೂಪದ ಸಿನಿಮಾ. ಮೈಸೂರು ಮಠ, ಕಲ್ಲೇಶ್ ನುಗ್ಗೆಹಳ್ಳಿ, ಜಯಾ ಜಹಗೀರ್‌ದಾರ್, ಚೊಟ್ಟೆ… ಹೀಗೆ ಚಿತ್ರದ ಪಾತ್ರಗಳು ಕಣ್ಮುಂದೆ ಹಾದುಹೋಗುತ್ತವೆ. ಮಧ್ಯಮವರ್ಗದ ಕುಟುಂಬವೊಂದರ ಕತೆಯನ್ನು ಸರಳವಾಗಿ, ಆಪ್ತವಾಗಿ ನಿರೂಪಿಸಿದ್ದಾರೆ ಶಂಕರ್. ಚಿತ್ರಸಾಹಿತಿ ಚಿ.ಉದಯಶಂಕರ್ ರಚನೆಯ ಹಾಡುಗಳಿಗೆ ಜಿ.ಕೆ.ವೆಂಕಟೇಶ್ ಸಂಯೋಜಿಸಿದ ಸಂಗೀತ ಚಿತ್ರದ ಅಂದ ಹೆಚ್ಚಿಸಿದೆ.
ಸಿನಿಮಾ ಆಗುವುದಕ್ಕಿಂತ ಮುನ್ನ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಯಶಸ್ವೀ ನಾಟಕವಾಗಿತ್ತು. ಮರಾಠಿ ನಾಟಕವೊಂದನ್ನುಆಧರಿಸಿ ನರಸಿಂಹನ್ ಕನ್ನಡದ ಕತೆ ರಚಿಸಿದ್ದರು. ಶಂಕರ್‌ನಾಗ್ ನಿರ್ದೇಶನ ಮತ್ತು ರಂಗಸಜ್ಜಿಕೆಯಲ್ಲಿ ಇದು ರಂಗಪ್ರಯೋಗವಾಗಿ ಜನಪ್ರಿಯತೆ ಗಳಿಸಿತ್ತು. ಶಂಕರ್‌ನಾಗ್ ಅವರು ಕಟ್ಟಿದ ‘ಸಂಕೇತ್’ ತಂಡದ ಮೂರನೆಯ ನಾಟಕವಿದು. ಇಲ್ಲಿರುವ ಫೋಟೋಗಳು ನಾಟಕದ ನೂರನೇ ಪ್ರಯೋಗದ ನೆನಪುಗಳು!

ನಾಟಕ ಮತ್ತು ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟ ರಮೇಶ್ ಭಟ್ ಅಂದಿನ ದಿನಗಳನ್ನು ನೆನಪು ಮಾಡಿಕೊಳ್ಳುವುದು ಹೀಗೆ – “ಸಂಕೇತ್ ತಂಡದಿಂದ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ಮೊದಲ ಪ್ರಯೋಗ ಆಗಿದ್ದು 1978ರಲ್ಲಿ. ಸರಳ ಕತೆಗೆ ಬೇಕಿದ್ದ ಆಪ್ತ ನಿರೂಪಣೆ ಮತ್ತು ವಿಶಿಷ್ಟ ರಂಗಸಜ್ಜಿಕೆಯಿಂದ ಶಂಕರ್ ಗೆದ್ದಿದ್ದರು. ಬೆಂಗಳೂರು ಅಷ್ಟೇ ಅಲ್ಲದೆ ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಮೈಸೂರು ಸೇರಿದಂತೆ ಹಲವೆಡೆ ಈ ನಾಟಕ ಪ್ರದರ್ಶಿಸಿದ್ದೆವು. 1982ರಲ್ಲಿ ಬೆಂಗಳೂರಿನಲ್ಲಿ 100ನೇ ಪ್ರದರ್ಶನ ಏರ್ಪಾಟಾಗಿತ್ತು. ಆಗ ರವೀಂದ್ರ ಕಲಾಕ್ಷೇತ್ರವನ್ನು ರೆನೋವೇಟ್ ಮಾಡುತ್ತಿದ್ದರು. ಹಾಗಾಗಿ ಈಗ ಕನ್ನಡಭವನ ಇರುವೆಡೆ ತಾತ್ಕಾಲಿಕ ವೇದಿಕೆ ನಿರ್ಮಾಣವಾಗಿತ್ತು. ಆ ಸಂದರ್ಭದ ಫೋಟೋಗಳಿವು”
ಸಿನಿಮಾದಲ್ಲಿ ಮಾಸ್ಟರ್ ಮಂಜುನಾಥ್ ಅವರು ‘ಚೊಟ್ಟೆ’ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಶಂಕರ್‌ನಾಗ್ (ಮೈಸೂರು ಮಠ) ಲೌಕಿಕ ಬದುಕಿನ ಗೊಂದಲ, ಪ್ರಶ್ನೋತ್ತರಗಳನ್ನು ಪುಟಾಣಿ ‘ಚೊಟ್ಟೆ’ ಮೂಲಕ ಪ್ರೇಕ್ಷಕರಿಗೆ ದಾಟಿಸುತ್ತಾರೆ. ನಾಟಕದಲ್ಲಿ ಈ ಪಾತ್ರ ರಂಗದ ಮೇಲೆ ಇರಲಿಲ್ಲ! ಶಂಕರ್ ನಾಗ್ ಅವರ ಪ್ರಶ್ನೆಗಳಿಗೆ ವೇದಿಕೆ ಹಿನ್ನೆಲೆಯಲ್ಲಿ ‘ಚೊಟ್ಟೆ’ ಧ್ವನಿಯಷ್ಟೇ ಕೇಳಿಸುತ್ತಿತ್ತು. ಮುಂದೆ ಸಿನಿಮಾದಲ್ಲಿ ಪಾತ್ರ ರೂಪುಗೊಂಡಿತು. ಯಶಸ್ವೀ ನಾಟಕವನ್ನು ಬೆಳ್ಳಿತೆರೆಗೆ ಅಳವಡಿಸುವಂತೆ ಶಂಕರ್‌ನಾಗ್ ಅವರಿಗೆ ಸಲಹೆ ನೀಡಿದ್ದು ರಮೇಶ್ ಭಟ್. “ಸಿನಿಮಾ ಆದಾಗ ಕತೆ ಕೊಂಚ ವಿಸ್ತಾರವಾಯ್ತು. ಚಿ.ಉದಯಶಂಕರ್ ಸೂಕ್ತ ಸಲಹೆ – ಸೂಚನೆ ಮೇರೆಗೆ ಅನಂತನಾಗ್ ಪಾತ್ರ ಸೃಷ್ಟಿಯಾಯ್ತು. ಖ್ಯಾತ ಹಿಂದೂಸ್ತಾನಿ ಗಾಯಕ ಭೀಮ್‌ಸೇನ್ ಜೋಷಿ ಅವರ ಗಾಯನ ಸಿನಿಮಾದ ತೂಕ ಹೆಚ್ಚಿಸಿತು” ಎನ್ನುತ್ತಾರೆ ರಮೇಶ್ ಭಟ್.
