(ಬರಹ: ವೆಂಕಟೇಶ್ ನಾರಾಯಣಸ್ವಾಮಿ)
ದಕ್ಷಿಣ ಭಾರತದ ಪ್ರಥಮ ಸಾಮಾಜಿಕ ಚಲನಚಿತ್ರ ‘ಮೇನಕಾ’ (ತಮಿಳು) ಬಿಡುಗಡೆಯಾದ ದಿನವಿದು (06/04/1935). ವಡುವೂರ್ ದುರೈಸ್ವಾಮಿ ಐಯ್ಯಂಗಾರ್ ಅವರ ಕಾದಂಬರಿಯಾಧಾರಿತ ‘ಮೇನಕಾ’ ನಾಟಕ ತಮಿಳುನಾಡಿನ ಮದುರೈ, ಕೊಯಂಬತ್ತೂರ್ ಕಡೆಗಳಲ್ಲೆಲಾ ಬಹು ಜನಪ್ರಿಯತೆಯೊಂದಿಗೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿತ್ತು. ಈ ನಾಟಕ ವೀಕ್ಷಿಸಿದ ಉದ್ಯಮಿಯೊಬ್ಬರು ಸಮಾನಮನಸ್ಕ ಸ್ನೇಹಿತರೊಡಗೂಡಿ ಈ ಕತೆಯನ್ನು ಬೆಳ್ಳಿತೆರೆಗೆ ಅಳವಡಿಸಲು ಇಚ್ಛಿಸಿದರು.
ಹದಿನಾರು ಸಾವಿರ ರೂಪಾಯಿಗಳಿಗೆ ಅವರು ಈ ಕತೆಯ ಹಕ್ಕನ್ನು ಪಡೆದದ್ದು ಆ ಕಾಲಕ್ಕೆ ಬಹು ದುಬಾರಿ ಮೊತ್ತ. ಕಂದಸ್ವಾಮಿ ಮೊದಲಿಯಾರ್ ಅವರಿಂದ ಚಿತ್ರಕಥೆ ಮಾಡಿಸಿದರು. ಟಿ.ಕೆ.ಎಸ್.ಬ್ರದರ್ಸ್, ಕಲೈವಾಣರ್ ಎನ್.ಎಸ್.ಕೃಷ್ಣನ್ (ಮೊದಲ ಚಿತ್ರ) ಸೇರಿದಂತೆ ಮೂಲ ನಾಟಕದಲ್ಲಿ ಅಭಿನಯಿಸಿದ್ದ ಕಲಾವಿದರನ್ನೇ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ರಾಜಾಸ್ಯಾಂಡೋ ಚಿತ್ರದ ನಿರ್ದೇಶಕರು.

‘ಮೇನಕಾ’ ಕಾದಂಬರಿ, ನಾಟಕ, ಚಿತ್ರಕಥೆಯಲ್ಲಿಲ್ಲದ ಕೆಲವೊಂದು ದೃಶ್ಯಗಳನ್ನು ನಿರ್ದೇಶಕ ರಾಜಾಸ್ಯಾಂಡೋ ಚಿತ್ರಕಥೆಗೆ ಪೂರಕವಾಗಿರುವಂತೆ ಚಿತ್ರೀಕರಿಸಿದ್ದನ್ನು ‘ಚಿತ್ರಕಥಾ ಲೇಖಕ’ ಕಂದಸ್ವಾಮಿ ಮೊದಲಿಯಾರ್ ಸೇರಿದಂತೆ ಚಿತ್ರತಂಡದ ಹಲವರು ವಿರೋಧಿಸಿದ್ದರು. ಮೇನಕಾಳ ಸೆರಗನ್ನೆಳೆದು ಆಕೆಯನ್ನು ಮಂಚದ ಮೇಲೆ ತಳ್ಳುವ ದೃಶ್ಯದ ಬಗ್ಗೆ ಚಿತ್ರಕಥಾ ಲೇಖಕರು ಚಕಾರವೆತ್ತಿದ್ದರು. ನಿರ್ದೇಶಕರು ಇದಕ್ಕೆ ಸೂಕ್ತ ಸಮಜಾಯಿಷಿ ನೀಡಿದ್ದರು. “ದೃಶ್ಯಮಾಧ್ಯಮ ಸಿನಿಮಾದಲ್ಲಿ ಪ್ರತಿ ದೃಶ್ಯಗಳೂ ಸ್ವಾಭಾವಿಕವಾಗಿರಬೇಕು. ಹಾಗಿಲ್ಲದಿದ್ದಲ್ಲಿ ಅದು ಚಿತ್ರೀಕರಿಸಿದ ನಾಟಕದಂತಿರುತ್ತದೆ” ಎನ್ನುವುದು ನಿರ್ದೇಶಕರ ವಾದ. ಹೀಗೆ, ಆಗಿನ ಕಾಲಕ್ಕೆ ಭಿನ್ನವಾಗಿ ಆಲೋಚಿಸಿ ಚಿತ್ರವನ್ನು ತೆರೆಗೆ ತಂದಿದ್ದರು ರಾಜಾಸ್ಯಾಂಡೋ. ಸಾಮಾಜಿಕ ಚಲನಚಿತ್ರ ಪರಂಪರೆಗೆ ದಿಕ್ಸೂಚಿಯಾದ ಚಿತ್ರ ‘ಮೇನಕಾ’ ಎಂದು ಸಿನಿಮಾ ಇತಿಹಾಸಗಾರರು ಗುರುತಿಸುತ್ತಾರೆ.