ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ರಾಮನಾಗಿ ರಣಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ‘ರಾಮಾಯಣ: ಭಾಗ 1’ ಚಿತ್ರವು 2026ರ ದೀಪಾವಳಿ ಹಬ್ಬದಂದು ಜಾಗತಿಕವಾಗಿ ತೆರೆಕಾಣಲಿದೆ.
ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಎರಡು ಭಾಗಗಳ ಸಿನಿಮೀಯ ಸರಣಿ ‘ರಾಮಾಯಣ’ ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು ‘ರಾಮ’ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾದ ‘ರಾಮಾಯಣ’ ಚಿತ್ರದ ಮೊದಲ ಟೀಸರ್, 5,000 ವರ್ಷಗಳಿಂದಲೂ ಜನಮಾನಸದಲ್ಲಿರುವ ಅದ್ಭುತ ವ್ಯಕ್ತಿತ್ವವನ್ನು ಕೇಂದ್ರೀಕರಿಸಿದೆ. ಈ ಕಥೆಯೊಂದಿಗೆ ಬೆಳೆದವರಿಗೆ ಇದು ಹೊಸ ದೃಷ್ಟಿಕೋನವನ್ನು ನೀಡಿದರೆ, ಇತರರಿಗೆ ಈ ಬೃಹತ್ ಮಹಾಕಥೆಯನ್ನು ಮೊದಲ ಬಾರಿಗೆ ಅನುಭವಿಸುವ ಅವಕಾಶವನ್ನು ಕಲ್ಪಿಸಿದೆ.
ನಿರ್ದೇಶಕ ನಿತೇಶ್ ತಿವಾರಿ ಮಾತು | “ರಾಮಾಯಣದ ಹಿರಿಮೆ ಇರುವುದು ಅದರ ಭಾವನಾತ್ಮಕ ಸಮೃದ್ಧಿಯಲ್ಲಿ. ಇದರ ತಿರುಳು ಕೇವಲ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟವಲ್ಲ, ಬದಲಾಗಿ ಇದು ನಾವು ಮಾಡುವ ಆಯ್ಕೆಗಳು, ಅದರ ಪರಿಣಾಮಗಳು ಮತ್ತು ಸರಿ ದಾರಿಯಲ್ಲಿ ನಡೆಯುವ ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ರಾಮನ ಪಯಣವು ಆಳವಾದ ಮಾನವೀಯತೆಯಿಂದ ಕೂಡಿದೆ ಮತ್ತು ಅದಕ್ಕೇ ನಾವು ನಿಷ್ಠರಾಗಿರಲು ಪ್ರಯತ್ನಿಸಿದ್ದೇವೆ”
ರಾಮನ ಪಾತ್ರದ ಬಗ್ಗೆ ರಣಬೀರ್ ಕಪೂರ್ | “ನಾನು ಇಲ್ಲಿ ರಾಮನನ್ನು ಪ್ರತಿನಿಧಿಸಲು ಬಂದಿಲ್ಲ, ಬದಲಾಗಿ ಅವರಿಂದ ಕಲಿಯಲು ಬಂದಿದ್ದೇನೆ. ರಾಮನ ಸರಳತೆ ಮತ್ತು ಶುದ್ಧತೆ ಅತಿ ಅಪರೂಪದ್ದು. ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನನಗೆ ಸಿಕ್ಕ ಅತ್ಯಂತ ವಿನಮ್ರವಾದ ಅನುಭವವಾಗಿದೆ”
ನಿರ್ಮಾಪಕ ನಮಿತ್ ಮಲ್ಹೋತ್ರಾ ಅನಿಸಿಕೆ | “ರಾಮನ ಕಥೆಯ ಶಕ್ತಿ ಆತ ಏನನ್ನು ಗೆದ್ದನು ಎಂಬುದರಲ್ಲಿಲ್ಲ, ಬದಲಾಗಿ ಆತ ಏನನ್ನು ಬಿಟ್ಟುಕೊಟ್ಟನು ಎಂಬುದರಲ್ಲಿದೆ. ಆತ ಸುಲಭವಾದದ್ದನ್ನು ಆರಿಸಲಿಲ್ಲ, ಬದಲಾಗಿ ಅಗತ್ಯವಿರುವುದನ್ನು ಆರಿಸಿದನು. ಆಸೆಗಿಂತ ಕರ್ತವ್ಯಕ್ಕೆ, ಸುಖಕ್ಕಿಂತ ಸತ್ಯಕ್ಕೆ ಮತ್ತು ಸ್ವಾರ್ಥಕ್ಕಿಂತ ತ್ಯಾಗಕ್ಕೆ ಆತ ಮೊದಲ ಆದ್ಯತೆ ನೀಡಿದನು. ಅದಕ್ಕಾಗಿಯೇ ಈ ಕಥೆ ಸಾವಿರಾರು ವರ್ಷಗಳಿಂದ ಉಳಿದುಬಂದಿದೆ”
ಪಾತ್ರವರ್ಗ ಮತ್ತು ಕಥೆಯ ತಿರುಳು | ಬ್ರಹ್ಮ, ವಿಷ್ಣು ಮತ್ತು ಶಿವ – ಈ ತ್ರಿಮೂರ್ತಿಗಳು ಜಗತ್ತನ್ನು ಆಳುವ ಕಾಲದಲ್ಲಿ, ಭೂಮಿಯ ಮೇಲೆ ಅರಾಜಕತೆ ತಾಂಡವವಾಡಿದಾಗ, ಸಮತೋಲನವನ್ನು ಕಾಯ್ದುಕೊಳ್ಳಲು ವಿಷ್ಣು ‘ರಾಮ’ನಾಗಿ (ರಣಬೀರ್ ಕಪೂರ್) ಮಾನವ ರೂಪದಲ್ಲಿ ಅವತರಿಸುತ್ತಾನೆ. ರಾಮನ ವಿರುದ್ಧವಾಗಿ ನಿಲ್ಲುವವನೇ ಅಜೇಯ ಮತ್ತು ಅಮರ ರಾಕ್ಷಸ ರಾವಣ (ಯಶ್). ರಾವಣನು ಹೆಮ್ಮೆ ಮತ್ತು ಪ್ರತೀಕಾರದ ಕಿಚ್ಚಿನಿಂದ ಜಗತ್ತನ್ನೇ ನಡುಗಿಸುವ ಶಕ್ತಿ ಹೊಂದಿದ್ದಾನೆ. ತನ್ನ ಪರಮ ಉದ್ದೇಶದ ಅರಿವಿಲ್ಲದ ರಾಮ, ಅಯೋಧ್ಯೆಯ ನೆಚ್ಚಿನ ರಾಜಕುಮಾರನಾಗಿರುತ್ತಾನೆ. ತನ್ನ ಪ್ರೀತಿಯ ಪತ್ನಿ ಸೀತೆ (ಸಾಯಿ ಪಲ್ಲವಿ) ಮತ್ತು ನಿಷ್ಠಾವಂತ ಸಹೋದರ ಲಕ್ಷ್ಮಣನ (ರವಿ ದುಬೆ) ಜೊತೆ ಗೌರವಾನ್ವಿತ ಜೀವನ ನಡೆಸಲು ಬಯಸುವ ರಾಮನನ್ನು ವಿಧಿಯ ಆಟವು ವನವಾಸಕ್ಕೆ ತಳ್ಳುತ್ತದೆ. ಇದು ಮುಂದೆ ರಾವಣನೊಂದಿಗಿನ ಭೀಕರ ಯುದ್ಧಕ್ಕೆ ನಾಂದಿ ಹಾಡುತ್ತದೆ.
ದಿಗ್ಗಜರ ಸಂಗಮ | ಭಾರತೀಯ ಚಿತ್ರರಂಗದ ಇಬ್ಬರು ಪ್ರಭಾವಶಾಲಿ ನಟರಾದ ರಣಬೀರ್ ಕಪೂರ್ ಮತ್ತು ಯಶ್ ಅವರು ಪರಸ್ಪರ ಎದುರಾಳಿ ಪಾತ್ರಗಳಲ್ಲಿ ನಟಿಸುತ್ತಿರುವುದು ಈ ಚಿತ್ರದ ಕೇಂದ್ರ ಬಿಂದು. ಇವರೊಂದಿಗೆ ಸಾಯಿ ಪಲ್ಲವಿ (ಸೀತೆ), ಸನ್ನಿ ಡಿಯೋಲ್ (ಹನುಮಂತ) ಮತ್ತು ರವಿ ದುಬೆ (ಲಕ್ಷ್ಮಣ) ನಟಿಸುತ್ತಿದ್ದಾರೆ. ಆಸ್ಕರ್ ವಿಜೇತ ಸಂಗೀತಗಾರರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರ ‘ರಾಮಾಯಣ: ಭಾಗ 1’ ಚಿತ್ರವು 2026ರ ದೀಪಾವಳಿ ಹಬ್ಬದಂದು ಜಾಗತಿಕವಾಗಿ ತೆರೆಕಾಣಲಿದೆ. ಎರಡನೇ ಭಾಗವು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ಅಂದಹಾಗೆ, ಈ ಚಿತ್ರದ ಕಥೆ ವಾಲ್ಮೀಕಿ ಮಹರ್ಷಿಗಳ ಪವಿತ್ರ ಬರಹಗಳನ್ನು ಆಧರಿಸಿದೆ.







