
ನಿರ್ದೇಶಕಿ
ನನ್ನನ್ನು ಪ್ರಭಾವಿಸಿದ ಮೂರು ಸಿನಿಮಾಗಳು
ಗರಂ ಹವಾ (1974, ಹಿಂದಿ) : ಎಂ.ಎಸ್.ಸತ್ಯು ನಿರ್ದೇಶನದ ‘ಗರಂ ಹವಾ’ ಚಿತ್ರವನ್ನು ಜಗತ್ತಿನ ನೂರು ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಹೆಸರಿಸಲಾಗುತ್ತದೆ. ಸ್ವಾತಂತ್ರ್ಯಾ ನಂತರ ಹಿಂದೂ, ಮುಸ್ಲಿಂ ವಿಭಜನೆ ಸಂದರ್ಭದ ಕಥೆಯೊಂದನ್ನು ಅದರಲ್ಲಿ ತೆರೆಗೆ ಅಳವಡಿಸಿದ್ದಾರೆ. ಚಿತ್ರ ಮುಗಿಸಿದ ನಿರ್ದೇಶಕ ಸತ್ಯು ಏನಾದರೂ ತೊಂದರೆಯಾದೀತು ಎಂದು ಸೆನ್ಸಾರ್ ಮಾಡಿಸದೆ ತಿಂಗಳುಗಳ ಕಾಲ ಹಾಗೇ ಇಟ್ಟುಕೊಂಡಿದ್ದರಂತೆ. ನಿಸ್ಸಂಶಯವಾಗಿ ಇದೊಂದು ಮನಮುಟ್ಟುವ, ಈ ಹೊತ್ತಿಗೂ ಪ್ರಸ್ತುತವೆನಿಸುವ ಪಾಥ್ ಬ್ರೇಕಿಂಗ್ ಸಿನಿಮಾ. ಅಭಿಮಾನ್ (1973, ಹಿಂದಿ) : ಹೃಷಿಕೇಶ್ ಮುಖರ್ಜಿ ನಿರ್ದೇಶನದ ಸಿನಿಮಾಗಳನ್ನು ನಾನು ನೋಡಿಕೊಂಡು ಬೆಳೆದವಳು. ಮಾನವೀಯ ಮೌಲ್ಯಗಳನ್ನು ಹಾಸ್ಯದ ಲೇಪದೊಂದಿಗೆ ನಿರೂಪಿಸುವ ತಂತ್ರಜ್ಞ. ಅವರ ಚಿತ್ರಗಳ ಪೈಕಿ ‘ಅಭಿಮಾನ್’ ನನಗೆ ತುಂಬಾ ಕಾಡಿದ ಸಿನಿಮಾ. ಚಿಕ್ಕ ಪಟ್ಟಣವೊಂದರಲ್ಲಿ ಬೆಳೆದ ಬಂದ ನಾಯಕಿಗೆ (ಜಯಬಾಧುರಿ) ಭವಿಷ್ಯ ರೂಪಿಸಿಕೊಳ್ಳುವ ಹುಕಿ. ಈ ಹಂತದಲ್ಲಿ ಗಂಡನ ಇಗೋ ಪ್ರಾಬ್ಲಂಗಳನ್ನು ಆಕೆ ಎದುರಿಸಬೇಕಾಗುತ್ತದೆ. ಮಹಿಳೆಯೊಬ್ಬಳು ಸ್ವತಂತ್ರ್ಯವಾಗಿ ಏನಾದರೂ ಸಾಧನೆ ಮಾಡಬೇಕೆಂದರೆ ಪುರುಷರ ಇಗೋವನ್ನು ಸಹಿಸಿಕೊಳ್ಳುತ್ತಾ, ಸಮಾಧಾನ ಮಾಡುತ್ತಲೇ ಬೆಳೆಯಬೇಕಿದೆ. ಹೃಷಿಕೇಷ್ ಮುಖರ್ಜಿ ಈ ಚಿತ್ರದೊಂದಿಗೆ ಇಂತಹ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದರು. ಪಲ್ಲವಿ ಅನುಪಲ್ಲವಿ (1983, ಕನ್ನಡ) : ಮಣಿರತ್ನಂ ಅವರನ್ನು ಎಲ್ಲರೂ ‘ನಾಯಗನ್’ ‘ಬಾಂಬೆ’, ‘ರೋಜಾ’ ಹಾಗೂ ಆ ನಂತರದ ಚಿತ್ರಗಳಲ್ಲಿ ಇಷ್ಟಪಡುತ್ತಾರೆ. ಆದರೆ ನನಗೆ ಅವರ ಚೊಚ್ಚಲ ಸಿನಿಮಾ ‘ಪಲ್ಲವಿ ಅನುಪಲ್ಲವಿ’ ಫೇವರೆಟ್. ಅದು ತುಂಬಾ ಇನ್ನೋಸೆಂಟ್, ಬ್ಯೂಟಿಫುಲ್ ಮತ್ತು ಎಮೋಷನಲ್. ಅದರಲ್ಲೂ ಮಹಿಳೆಯೊಬ್ಬಳು ತನಗಿಂತ ಚಿಕ್ಕ ಯುವಕನ ಪ್ರೀತಿಯಲ್ಲಿ ಬೀಳುವುದು, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಬಗೆಗಿನ ಆಕೆಯ ತಳಮಳಗಳನ್ನು ಮಣಿರತ್ನಂ ಮನಮುಟ್ಟುವಂತೆ ಚಿತ್ರಿಸಿದ್ದಾರೆ.