ಬಹುಭಾಷಾ ನಟಿ ಖುಷ್ಬೂ ಬೆಳ್ಳಿತೆರೆ ಪ್ರವೇಶಿಸಿದ್ದು ಬಾಲನಟಿಯಾಗಿ. ‘ಬರ್ನಿಂಗ್ ಟ್ರೈನ್’ (1980) ಚಿತ್ರದ ‘ತೇರಿ ಹೈ ಜಮೀನ್ ತೇರಾ ಆಸ್ಮಾನ್’ ಹಾಡಿನಲ್ಲಿ ಅವರು ಮೊದಲ ಬಾರಿ ಕ್ಯಾಮೆರಾ ಎದುರಿಸಿದರು. ಮುಂದಿನ ನಾಲ್ಕೈದು ವರ್ಷ ‘ನಸೀಬ್’, ‘ಲಾವಾರಿಸ್’, ‘ಕಾಲಿಯಾ’, ‘ದರ್ದ್ ಕಾ ರಿಶ್ತಾ’, ‘ಬೆಮಿಸಾಲ್’ ಹಿಂದಿ ಚಿತ್ರಗಳಲ್ಲಿ ಅವರು ಬಾಲನಟಿಯಾಗಿ ನಟಿಸಿದರು. ಅವರು ಕಾಣಿಸಿಕೊಂಡ ‘ದರ್ದ್ ಕಾ ರಿಶ್ತಾ’ (1982) ಚಿತ್ರದ ‘ಮೈ ಪರಿಯೋ ಕಿ ಶೆಹ್‌ಜಾದಿ’ ಹಾಡು ಬಹು ಜನಪ್ರಿಯ. ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಇಂದಿಗೂ ಮಕ್ಕಳು ಈ ಹಾಡಿಗೆ ನೃತ್ಯ ಪ್ರದರ್ಶನ ನೀಡುತ್ತಾರೆ.

‘ಮೇರಿ ಜಂಗ್’ (1985) ಚಿತ್ರದಲ್ಲಿ ಜಾವೆದ್ ಜಾಫ್ರಿ ಜೊತೆ ಖುಷ್ಬೂ ‘ಬೋಲ್ ಬೇಬಿ ಬೋಲ್’ ಹಾಡಿನಲ್ಲಿ ನರ್ತಿಸಿದ್ದರು. ಅದು ಅವರ ಮೊದಲ ಡ್ಯಾನ್ಸಿಂಗ್ ರೋಲ್. ಇದೇ ವರ್ಷ ತೆರೆಕಂಡ ‘ಜಾನೂ’ ಚಿತ್ರದಲ್ಲಿ ಜಾಕಿ ಶ್ರಾಫ್ ಜೋಡಿಯಾಗಿ ಅವರು ನಾಯಕನಟಿಯಾದರು. ಮರುವರ್ಷ ಗೋವಿಂದ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ತನ್ ಬದನ್’ನಲ್ಲಿ ಅವರಿಗೆ ನಾಯಕಿಯ ಪಾತ್ರ ಸಿಕ್ಕಿತು.

ಅಮೀರ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ‘ದೀವಾನಾ ಮುಝ್‌ಸಾ ನಹೀ’ (1990) ಚಿತ್ರದಲ್ಲಿ ಖುಷ್ಬೂಗೆ ಪ್ರಮುಖ ಪಾತ್ರವಿತ್ತು. ಚಿತ್ರದಲ್ಲಿನ ಅವರ ‘ಸಾರೆ ಲಡ್ಕೇ ಕೊ ಕರ್ ದೋ ಶಾದಿ’ ಹಾಡು ಜನಪ್ರಿಯವಾಯ್ತು. ಉತ್ತರ ಭಾರತದ ಮದುವೆ ಸಮಾರಂಭಗಳ ಮೆಹಂದಿ ಕಾರ್ಯಕ್ರಮಗಳಲ್ಲಿ ಇಂದಿಗೂ ಈ ಹಾಡು ಕೇಳಿಸುತ್ತದೆ. ಈ ಹಿಂದಿ ಚಿತ್ರದ ನಂತರ ಖಷ್ಬೂ ದಕ್ಷಿಣ ಭಾರತದತ್ತ ಹೊರಳಿದರು. ತಮಿಳು, ಕನ್ನಡ, ಮಲಯಾಳಂ, ತೆಲುಗಿನಲ್ಲಿ ಖುಷ್ಬೂ ನಟಿಸಿರುವ ಚಿತ್ರಗಳ ಸಂಖ್ಯೆ ಇನ್ನೂರು ದಾಟುತ್ತದೆ.
