ಹಿರಿಯ ನಟ ಅಶ್ವಥ್ ನಾರಾಯಣ ಅವರೀಗ 90 ವರ್ಷಗಳ ಆಸುಪಾಸಿನಲ್ಲಿದ್ದಾರೆ. ಅವರ ಹೆಸರಿನಲ್ಲೊಂದು ವಿಶಿಷ್ಟ ದಾಖಲೆ ಸೃಷ್ಟಿಯಾಗಿರುವುದು ಬಹಳಷ್ಟು ಜನರ ಗಮನಕ್ಕೆ ಬಂದಿರಲಿಕ್ಕಿಲ್ಲ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಡಾ.ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ವಿನಯ್ ರಾಜ್… ಒಂದೇ ಕುಟುಂಬದ ನಾಲ್ಕು ತಲೆಮಾರಿನ ನಾಯಕನಟರೊಂದಿಗೆ ಅವರು ಅಭಿನಯಿಸಿದ್ದಾರೆ. ಬಹುಶಃ ಜಗತ್ತಿನ ಸಿನಿಮಾ ಇತಿಹಾಸದಲ್ಲೇ ಇದೊಂದು ಅಪರೂಪದ ದಾಖಲೆ ಇರಬಹುದು.
ಅಶ್ವಥ್ ನಾರಾಯಣ ವೃತ್ತಿ ರಂಗಭೂಮಿ ಹಿನ್ನೆಲೆಯ ಕಲಾವಿದ. ಗುಬ್ಬಿ ಕಂಪನಿಯಲ್ಲಿ ಬಾಲನಟನಾಗಿ ಅವರು ನಟನೆ ಆರಂಭಿಸಿದ್ದು. ಇದೇ ಕಂಪನಿಯಲ್ಲಿ ಡಾ.ರಾಜ್ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪ್ರಮುಖ ಕಲಾವಿದರಾಗಿದ್ದರು. ಪುಟ್ಟಸ್ವಾಮಯ್ಯನವರು ನಿರ್ವಹಿಸುತ್ತಿದ್ದ `ಕುರುಕ್ಷೇತ್ರ’, `ಭಕ್ತ ಪ್ರಹ್ಲಾದ’ ಮುಂತಾದ ನಾಟಕಗಳಲ್ಲಿ ಅಶ್ವಥರು ಕೃಷ್ಣ, ಬಲರಾಮ, ಪ್ರಹ್ಲಾದನ ಪಾತ್ರಗಳನ್ನು ನಿರ್ವಹಿಸುತ್ತಿದ್ದರಂತೆ. ಮುಂದೆ ಡಾ.ರಾಜಕುಮಾರ್ ಅವರೊಂದಿಗೆ ಅಶ್ವಥ್ ಸಿನಿಮಾಯಾನ ಮುಂದುವರೆಯಿತು. ಡಾ.ರಾಜ್ ಅಭಿನಯದ ಮೂವತ್ತೈದು ಚಿತ್ರಗಳಲ್ಲಿ ಅಶ್ವಥ್ ಅಭಿನಯಿಸಿದ್ದಾರೆ. ಇವುಗಳಲ್ಲಿ ಹದಿನೈದು ಕಪ್ಪು – ಬಿಳುಪು ಮತ್ತು ಇಪ್ಪತ್ತು ವರ್ಣ ಚಿತ್ರಗಳು.

ನಂತರದ ದಿನಗಳಲ್ಲಿ ಡಾ.ರಾಜ್ ಪುತ್ರ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ `ನಂಜುಂಡಿ ಕಲ್ಯಾಣ’, `ಗಜಪತಿ ಗರ್ವಭಂಗ’, `ಸ್ವಸ್ತಿಕ್’ ಮುಂತಾದ ಚಿತ್ರಗಳಲ್ಲಿ ಅಶ್ವಥ್ ಅಭಿನಯಿಸಿದರು. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜ್ ‘ಸಿದ್ದಾರ್ಥ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ‘ಸಿದ್ದಾರ್ಥ’ ಚಿತ್ರದಲ್ಲಿ ನಟಿಸುವ ಮೂಲಕ ಅಶ್ವಥ್ ಅವರು ಪುಟ್ಟಸ್ವಾಮಯ್ಯನವರ ಕುಟುಂಬದ ನಾಲ್ಕನೇ ತಲೆಮಾರಿನ ನಾಯಕನಟನೊಂದಿಗೆ ನಟಿಸಿದಂತಾಯಿತು. ಆ ಮೂಲಕ ಅಶ್ವಥ್ ತಮ್ಮ ಹೆಸರಿಗೆ ವಿಶೇಷ ದಾಖಲೆಯೊಂದನ್ನು ಬರೆದುಕೊಂಡರು.
