ಆರ್.ಕೆ. ಅವರು ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ‘ನಾಗುಗೆ ವಧು ಬೇಕಾಗಿದೆ’ ಸಿನಿಮಾದ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಿದೆ. ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರು ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಪ್ರಸ್ತುತ ಹಳ್ಳಿಯಲ್ಲಾಗಲಿ ಅಥವಾ ನಗರಪ್ರದೇಶಗಳಲ್ಲಾಗಲಿ ಬಹುತೇಕ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸುಲಭವಾಗಿ ಸಿಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು. ಇಂತಹ ಪ್ರಸ್ತುತ ಪರಿಸ್ಥಿತಿಯನ್ನಿಟ್ಟುಕೊಂಡು ನಿರ್ದೇಶಕ ಆರ್ ಕೆ “ನಾಗೂಗೆ ವಧು ಬೇಕಾಗಿದೆ” ಎನ್ನುವ ಸಿನಿಮಾ ಮಾಡಿದ್ದಾರೆ. ಆರ್ ಕೆ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಶ್ರೀಗುರು ರಾಘವೇಂದ್ರ ಕನ್ನಡ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ, ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಟ್ರೇಲರ್ ಹಾಗೂ ಹಾಡುಗಳನ್ನು ಅನಾವರಣ ಮಾಡಿದರು. ನಿರ್ದೇಶಕ ‘ಬಹದ್ದೂರ್’ ಚೇತನ್ ಕುಮಾರ್ ಶೀರ್ಷಿಕೆ ಅನಾವರಣ ಮಾಡಿದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
‘ಟ್ರೇಲರ್ ಹಾಗೂ ಹಾಡುಗಳನ್ನು ನೋಡುತ್ತಿದ್ದಾಗ ಈ ಚಿತ್ರದಲ್ಲಿರುವ ತಾಯಿ – ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಯಿತು. ಪ್ರಸಕ್ತ ಬಹುತೇಕ ಗಂಡುಮಕ್ಕಳು ಎದುರುಸುತ್ತಿರುವ ಸಮಸ್ಯೆಗಳನ್ನು ನಿರ್ದೇಶಕರು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ’ ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಹಾರೈಸಿದರು.
‘ನಗರ ಪ್ರದೇಶಗಳಲ್ಲಾಗಲಿ ಹಾಗೂ ಹಳ್ಳಿಗಳಲ್ಲಾಗಲಿ ಹುಡುಗರಿಗೆ ಮದುವೆ ಆಗುತ್ತಿಲ್ಲ. ಹುಡುಗನಿಗೆ ಗೌರಮೆಂಟ್ ಕೆಲ್ಸಾನೆ ಬೇಕು. ಹೆಣ್ಣು ಕೊಡ್ಬೇಕು ಅಂದ್ರೆ ಅತ್ತೆ ಮಾವ ಇರಬಾರದು. ಬೆಂಗಳೂರು ಅಲ್ಲಿ ಸೈಟ್ ಮನೆ ಇರಬೇಕು. ಈಗಿನ ಕಾಲದ ಹೆಚ್ಚಿನ ಹುಡುಗಿಯರು ಈ ರೀತಿಯ ಬೇಡಿಕೆಗಳನ್ನಿಡುತ್ತಾರೆ. ಈ ಅಂಶಗಳನ್ನಿಟ್ಟುಕೊಂಡು ಹಾಗೂ ಹತ್ತಿರದಿಂದ ಕಂಡ ಕೆಲವು ಸನ್ನಿವೇಶಗಳಿಂದ ಪ್ರೇರಿತನಾಗಿ ಈ ಚಿತ್ರದ ಕಥೆ ಬರೆದಿದ್ದೇನೆ. ಇದೊಂದು ನೈಜಘಟನೆ ಆಧಾರಿತ ಚಿತ್ರ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಆರ್.ಕೆ.
‘ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯಿತು. ನಾನು ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಾಗು ನನ್ನ ಪಾತ್ರದ ಹೆಸರು’ ಎಂದು ನಾಯಕ ದತ್ತು ಪೂಜಾರಿ ಹೇಳಿದರು. ಚಿತ್ರದಲ್ಲಿ ನಟಿಸಿರುವ ರೇಖಾದಾಸ್, ಅಪೂರ್ವಶ್ರೀ, ಸೋನಿಕಾ ಸೋಮಣ್ಣ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ಶ್ರೀಸುರೇಶ್ ಹಾಗೂ ಛಾಯಾಗ್ರಾಹಕ ನಾಗರಾಜ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.








