ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಉಪೇಂದ್ರ ಅಭಿನಯದ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಚಾಲನೆ

ಪೋಸ್ಟ್ ಶೇರ್ ಮಾಡಿ
ಉಪೇಂದ್ರ ಅಭಿನಯದ 'ನೆಕ್ಟ್ಸ್ ಲೆವೆಲ್' ಚಿತ್ರಕ್ಕೆ ಚಾಲನೆ

ಉಪೇಂದ್ರ ನಟನೆಯ ಕನ್ನಡ – ತೆಲುಗು ದ್ವಿಭಾಷಾ ಸಿನಿಮಾ ‘ನೆಕ್ಸ್ಟ್‌ ಲೆವೆಲ್‌’ ಮುಹೂರ್ತ ನೆರವೇರಿದೆ. ತರುಣ್‌ ಶಿವಪ್ಪ ನಿರ್ಮಾಣದ ಚಿತ್ರವನ್ನು ಅರವಿಂದ್‌ ಕೌಶಿಕ್‌ ನಿರ್ದೇಶಿಸುತ್ತಿದ್ದಾರೆ.

ಉಪೇಂದ್ರ ಅಭಿನಯದ, ಕನ್ನಡ – ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ. ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಈ ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ನೆರವೇರಿತು. ಉಪೇಂದ್ರ ಅವರ ಪುತ್ರ ಆಯುಷ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದರು. ಈ ಮುಹೂರ್ತ ಸಮಾರಂಭದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಹಿರಿಯ ನಟಿ ಮಾಲಾಶ್ರೀ ಸೇರಿದಂತೆ ಹಲವು ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಉಪ್ಪಿಗೆ ಜೋಡಿಯಾದ ‘ಕಾಟೇರ’ ನಟಿ ಆರಾಧನಾ ರಾಮ್! | ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಜೋಡಿಯಾಗಿದ್ದಾರೆ. ಬ್ಲಾಕ್‌ಬಸ್ಟರ್ ‘ಕಾಟೇರ’ ಚಿತ್ರದ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿದ್ದ ಆರಾಧನಾ ಅವರಿಗೆ ಇದು ಎರಡನೇ ಸಿನಿಮಾವಾಗಿದೆ. ವಿಶೇಷವೆಂದರೆ, ‘ಕಾಟೇರ’ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ಆರಾಧನಾ, ಈ ಚಿತ್ರದಲ್ಲಿ ತೀರಾ ಭಿನ್ನವಾದ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿಕ್ಕಪ್ಪ ಉಪ್ಪಿ ಜೊತೆ ರಂಗಕ್ಕಿಳಿದ ನಿರಂಜನ್! | ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆಯಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಅವರ ಸಹೋದರನ ಮಗ, ನಟ ನಿರಂಜನ್ ಸುಧೀಂದ್ರ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದೇ ಸಿನಿಮಾದಲ್ಲಿ ಚಿಕ್ಕಪ್ಪ-ಮಗನ ಜುಗಲ್‌ಬಂದಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

‘A’, ‘ಉಪೇಂದ್ರ’ ಶೈಲಿಯ ಸಬ್ಜೆಕ್ಟ್ | ‘ವಿಕ್ಟರಿ-2’ ಮತ್ತು ‘ಛೂ ಮಂತರ್’ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ತರುಣ್ ಶಿವಪ್ಪ, ತಮ್ಮದೇ ‘ತರುಣ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಅತ್ಯಂತ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಉಪೇಂದ್ರ ಅವರ ಹಳೆಯ ಕ್ಲಾಸಿಕ್ ಹಿಟ್‌ಗಳಾದ ‘ಎ’, ‘ಉಪೇಂದ್ರ’ ಮತ್ತು ‘ರಕ್ತಕಣ್ಣೀರು’ ಶೈಲಿಯ ಸಿನಿಮಾವಾಗಿದ್ದು, ಇವತ್ತಿನ ಜನರೇಶನ್‌ಗೆ ತಕ್ಕಂತೆ ಉಪ್ಪಿ ಅವರ ವಿಶಿಷ್ಟ ಶೈಲಿಯ ಪಾತ್ರವನ್ನು ರೂಪಿಸಲಾಗಿದೆಯಂತೆ. ವೈವಿಧ್ಯಮಯ ಕಥಾಹಂದರ ಹಾಗೂ ತಾರಾಗಣವನ್ನು ಹೊಂದಿರುವ ‘ನೆಕ್ಟ್ಸ್ ಲೆವೆಲ್’ ಸಿನಿಮಾ, ಮೂಹೂರ್ತದ ಹಂತದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಈ ಬರಹಗಳನ್ನೂ ಓದಿ