ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಕನ್ನಡ – ತೆಲುಗು ದ್ವಿಭಾಷಾ ಕಿರುಚಿತ್ರ ‘ಶ್ರಾವಣಿ’

ಪೋಸ್ಟ್ ಶೇರ್ ಮಾಡಿ
ಕನ್ನಡ - ತೆಲುಗು ದ್ವಿಭಾಷಾ ಕಿರುಚಿತ್ರ 'ಶ್ರಾವಣಿ'

ವಿಕ್ರಮ್‌ ಕುಮಾರ್‌ ನಿರ್ದೇಶನದ ‘ಶ್ರಾವಣಿ’ ಕಿರುಚಿತ್ರ ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿದ್ಧವಾಗಿರುವ ಕಿರುಚಿತ್ರದ ಪ್ರಮುಖ ಪಾತ್ರಗಳಲ್ಲಿ ಹರ್ಷಕಲ್ಯಾಣ್‌ ಮತ್ತು ರಾಣಿ ಎಂ. ಅಂಗಡಿ ನಟಿಸಿದ್ದಾರೆ.

ಬೆಳ್ಳಿತೆರೆಯ ಮೇಲೆ ಮೊದಲ ಚಿತ್ರ ನಿರ್ದೇಶಿಸುವ ಹಂಬಲವಿರುವ ನಿರ್ದೇಶಕರಿಗೆ ಕಿರುಚಿತ್ರ ಸೂಕ್ತ ವೇದಿಕೆ. ಅದೆಷ್ಟೋ ಕಿರುಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಅಂತಹ ಒಂದು ಪ್ರಯತ್ನವನ್ನು ಮುಳಬಾಗಿಲಿನ ವಿಕ್ರಮ್ ಕುಮಾರ್ ಮಾಡಿದ್ದಾರೆ. ಮೂವತ್ತೈದು ನಿಮಿಷಗಳ ‘ಶ್ರಾವಣಿ’ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಕ್ರಮ್ ಅವರು ಹೇಳಿದ ಕಥೆ ಕೇಳಿ ಮೆಚ್ಚಿಕೊಂಡು ಅಶೋಕ್ ಮೋದಿ ಅವರು ಈ ಕಿರುಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹರ್ಷಕಲ್ಯಾಣ್ ಹಾಗೂ ರಾಣಿ ಎಂ ಅಂಗಡಿ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ದೀಪ, ಶ್ರೀವೈಷ್ಣವ್, ರಂಗನಾಥ್ ಮುಂತಾದವರು ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಮೊದಲ ಪ್ರದರ್ಶನ ಬೆಂಗಳೂರಿನ ವಿಕ್ಟರಿ ಸಿನಿಮಾಸ್‌ʼನಲ್ಲಿ ನೆರವೇರಿತು. ಕಿರುಚಿತ್ರವೊಂದು ಹೌಸ್ ಫುಲ್ ಪ್ರದರ್ಶನ ಕಂಡಿದ್ದು ವಿಶೇಷವಾಗಿತ್ತು. ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

‘ನಾನು ಮೂಲತಃ ಮುಳಬಾಗಿಲಿನ ಗುಡಿಪಲ್ಲಿಯವನು. ನಿರ್ದೇಶನಾಗಬೇಕೆಂಬದು ನನ್ನ ಆಸೆ. ಮೊದಲ ಪ್ರಯತ್ನವಾಗಿ “ಶ್ರಾವಣಿ” ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದೇನೆ. ಲವ್ ಹಾಗೂ ಸೆಂಟಿಮೆಂಟ್ ಜಾನರ್ ನ ಈ ಕಿರುಚಿತ್ರ ಕ‌ನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬಂದಿದೆ. ಈ ಕಿರುಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ. ಮೊದಲ ಭಾಗ ಇದೇ 26 ರಂದು ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್ ಓಟಿಟಿಯಲ್ಲಿ ಹಾಗೂ ಟಿ.ಎಂ.ಪಿ ಪಿಕ್ಚರ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ. ನಾನು ಹೇಳಿದ ಕಥೆ ಮೆಚ್ಚಿಕೊಂಡು ಅಶೋಕ್ ಮೋದಿ ಅವರು ಬಂಡವಾಳ ಹಾಕಿದ್ದಾರೆ‌. ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ವಿಜಯ್ ಮೊಂಟೆರಿಯೊ ಛಾಯಾಗ್ರಹಣ ಹಾಗೂ ರೋಹಿತ್ ಪೂಜಾರಿ ಸಂಗೀತ ನಿರ್ದೇಶನ ಕಿರುಚಿತ್ರಕ್ಕಿದೆ. ಒಂದು ಹಾಡು ಸಹ ಈ ಕಿರುಚಿತ್ರದಲ್ಲಿದೆ’ ಎಂದು ನಿರ್ದೇಶಕ ವಿಕ್ರಮ್ ಕುಮಾರ್ ಹೇಳಿದರು.

‘ನಾನು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಟನಾಗಬೇಕೆಂದು ಆಸೆ ಹೊತ್ತು ಬಂದವನು ನಾನು. ಅದು ಈ ಕಿರುಚಿತ್ರದ ಮೂಲಕ ಈಡೇರಿದೆ’ ಎಂದು ನಾಯಕ ಹರ್ಷ ಕಲ್ಯಾಣ್ ತಿಳಿಸಿದರು. ನಾಯಕಿ ರಾಣಿ ಎಂ ಅಂಗಡಿ, ನಟಿ ದೀಪ, ರಂಗನಾಥ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ತಮ್ಮ ತಂಡಕ್ಕೆ ಹಾಗೂ ಪ್ರದರ್ಶನಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ನಿರ್ಮಾಪಕ ಅಶೋಕ್ ಮೋದಿ ಧನ್ಯವಾದ ಹೇಳಿದರು.

ಈ ಬರಹಗಳನ್ನೂ ಓದಿ