ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ನಮಿತ್‌ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾದ ಟ್ರೇಲರ್‌ ಜುಲೈ 24ರಂದು

ಪೋಸ್ಟ್ ಶೇರ್ ಮಾಡಿ
ನಮಿತ್‌ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಸಿನಿಮಾದ ಟ್ರೇಲರ್‌ ಜುಲೈ 24ರಂದು

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್‌ ಇದೇ ಜುಲೈ 24ರಂದು ಬಿಡುಗಡೆಯಾಗುತ್ತಿದೆ. ರಣಬೀರ್ ಕಪೂರ್‌, ಯಶ್‌, ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಹತ್ವದ ಚಿತ್ರವಿದು.

ನವದೆಹಲಿಯಲ್ಲಿ ಜುಲೈ 18 ರಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ಭಾರತದ ಅಪ್ರತಿಮ ಸಾಂಸ್ಕೃತಿಕ ಪರಂಪರೆಯಾದ ರಾಮಾಯಣವನ್ನು ಜಾಗತಿಕ ವೇದಿಕೆಗೆ ಪರಿಚಯಿಸುವ ಐತಿಹಾಸಿಕ ಪ್ರಯಾಣಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗಿದೆ. ಈ ಪಯಣದ ಆರಂಭವನ್ನು ‘ಪ್ರಥಮ ಸಂಕಲ್ಪ’ ಎಂದು ಕರೆಯಲಾಗಿದ್ದು, ಇದು ಭಾರತೀಯ ಸಂಪ್ರದಾಯದಂತೆ ಮಹತ್ಕಾರ್ಯವೊಂದಕ್ಕೆ ಕೈಹಾಕುವ ಮುನ್ನ ಕೈಗೊಳ್ಳುವ ದೃಢ ನಿರ್ಧಾರವಾಗಿದೆ. ಜುಲೈ 24 ರಂದು ನಡೆಯಲಿರುವ ಈ ಚಿತ್ರದ ಜಾಗತಿಕ ಟ್ರೇಲರ್ ಬಿಡುಗಡೆಗೂ ಮುನ್ನ, ರಾಜಧಾನಿ ದೆಹಲಿಯಲ್ಲಿ ನಡೆದ ವಿಶೇಷ ಪ್ರದರ್ಶನವು ರಾಮಾಯಣದ ಭವ್ಯತೆಗೆ ಸಾಕ್ಷಿಯಾಯಿತು. ಈ ಮೂಲಕ ಜಗತ್ತಿನಾದ್ಯಂತ ಭಾರತದ ಮೌಲ್ಯಗಳನ್ನು ಮತ್ತು ಕಥೆಯನ್ನು ಅತಿಥಿಗಳ ಮುಂದೆ ಅತ್ಯಂತ ಗೌರವದಿಂದ ಪ್ರಸ್ತುತಪಡಿಸಲಾಯಿತು.

ನೂರಾರು ಶಾಲೆಗಳನ್ನು ತಲುಪಿದ ರಾಮಾಯಣ | ರಾಮಾಯಣದ ಈ ಪಯಣವು ಕೇವಲ ದೆಹಲಿಗೆ ಸೀಮಿತವಾಗದೆ, ದೇಶದಾದ್ಯಂತ ಹರಡಿದೆ ಎಂಬುದು ವಿಶೇಷ ಸಂಗತಿಯಾಗಿದೆ. ‘Ramayana Schools Programme’ ಮೂಲಕ ಸುಮಾರು 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳು ಈ ಮಹಾಕಾವ್ಯದ ಮೌಲ್ಯಗಳನ್ನು ಕ್ರಿಯಾತ್ಮಕವಾಗಿ ಅರಿತುಕೊಂಡಿದ್ದಾರೆ. ಇವರಲ್ಲಿ ಆಯ್ಕೆಯಾದ ಪ್ರತಿಭಾವಂತ ವಿಜೇತ ವಿದ್ಯಾರ್ಥಿಗಳು ಈ ಸಂಕಲ್ಪ ಸಮಾರಂಭದಲ್ಲಿ ಭಾಗವಹಿಸಿರುವುದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿದೆ. ಅಲ್ಲದೆ, ದೇಶದ 20 ಪ್ರಮುಖ ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಮತ್ತು ಕ್ರಿಯೇಟರ್‌ಗಳು ಚಿತ್ರದ ಟ್ರೇಲರ್‌ನ ವಿಶೇಷ ಮುನ್ನೋಟವನ್ನು ವೀಕ್ಷಿಸಲಿದ್ದಾರೆ. ಇದು ಕೇವಲ ಒಂದು ಚಿತ್ರದ ಆರಂಭವಲ್ಲ, ಬದಲಾಗಿ ಭಾರತದ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯವನ್ನು ವಿಶ್ವಕ್ಕೆ ಹಂಚುವ ಒಂದು ಮಹಾನ್ ಪ್ರಯತ್ನವಾಗಿದೆ.

ಆಕರ್ಷಕ ತಾರಾಬಳಗ | ಈ ಕಾರ್ಯಕ್ರಮವು ಭಾರತೀಯ ಚಿತ್ರರಂಗದ ವಿವಿಧ ತಲೆಮಾರಿನ ನಟರು ಮತ್ತು ತಂತ್ರಜ್ಞರ ಸುಂದರ ಸಂಗಮವಾಗಿತ್ತು. ನಿರ್ದೇಶಕ ನಿತೇಶ್ ತಿವಾರಿ ಅವರು ತಮ್ಮ ಕಥೆಯ ಮೂಲಕ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯ ಹೊಂದಿದ್ದು, ಈ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತಾ ಮಾತೆ) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾವಣ) ಅವರ ಉಪಸ್ಥಿತಿಯು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್, ರಕುಲ್ ಪ್ರೀತ್ ಸಿಂಗ್ ಮತ್ತು ರವಿ ದುಬೆ ಅವರಂತಹ ಅನುಭವಿ ನಟರ ಸಮೂಹವೇ ಈ ಚಿತ್ರದಲ್ಲಿದೆ. ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿತ್ತು.

ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳುವುದೇನು? | ರಾಮಾಯಣವು ಕೇವಲ ಒಂದು ಪುರಾಣವಲ್ಲ, ಅದು ನಮ್ಮ ದೈನಂದಿನ ಜೀವನದ ಭಾಗವಾಗಿದೆ ಮತ್ತು ತಲೆಮಾರುಗಳಿಂದ ನಾವು ಪಾಲಿಸಿಕೊಂಡು ಬಂದಿರುವ ಮೌಲ್ಯವಾಗಿದೆ ಎಂದು ಅವರು ಸ್ಮರಿಸಿದರು. ಇಂದು ನಮ್ಮ ಬಳಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕಲಾತ್ಮಕ ಸಾಮರ್ಥ್ಯವಿರುವುದರಿಂದ, ಈ ಮಹಾಕಾವ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಲು ಸಾಧ್ಯವಾಗಿದೆ’ ಎಂದರು. ಇದು ಭಾರತದ ಹೆಮ್ಮೆಯನ್ನು ಜಗತ್ತಿನ ಅತಿದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸುವ ಒಂದು ಸುವರ್ಣಾವಕಾಶವಾಗಿದೆ.

ನಿರ್ದೇಶಕ ನಿತೇಶ್ ತಿವಾರಿ ಮಾತು | ಈ ಚಿತ್ರದ ಮೌಲ್ಯಗಳು ಸಾರ್ವತ್ರಿಕವಾಗಿರುವುದರಿಂದ, ಪ್ರತಿಯೊಂದು ದೃಶ್ಯವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಗೌರವದಿಂದ ಚಿತ್ರಿಸಲಾಗಿದೆ ಎಂದು ತಿಳಿಸಿದರು. ತಂತ್ರಜ್ಞಾನದ ಬಳಕೆಯೊಂದಿಗೆ ಈ ಮಹಾಕಾವ್ಯದ ಭಾವನಾತ್ಮಕ ಆಳವನ್ನು ಪ್ರೇಕ್ಷಕರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು. ತಮ್ಮ ತಂಡದ ಪರಿಶ್ರಮ ಮತ್ತು ಕಲಾವಿದರ ಶ್ರೇಷ್ಠ ಅಭಿನಯವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್‌ ಒಡೆತನದ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.

ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರು ಸಂಗೀತ ನೀಡುತ್ತಿರುವುದು ಚಿತ್ರದ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಜುಲೈ 24 ರಂದು ಚಿತ್ರದ ಅಧಿಕೃತ ಟ್ರೇಲರ್ ಜಗತ್ತಿನಾದ್ಯಂತ ಬಿಡುಗಡೆಯಾಗಲಿದ್ದು, ಇದು ಮುಂಬರುವ ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ. ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ಸಂಸ್ಥಾಪಕರಾದ ನಮಿತ್ ಮಲ್ಹೋತ್ರಾ ಅವರು ಜಾಗತಿಕ ಮಟ್ಟದ ವೀಕ್ಷಕರಿಗೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಲು ಬದ್ಧರಾಗಿದ್ದಾರೆ. ಅಂತೆಯೇ ರಾಕಿಂಗ್ ಸ್ಟಾರ್ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್, ವಿಭಿನ್ನ ಮತ್ತು ಸೃಜನಾತ್ಮಕ ವಿಷಯಗಳನ್ನು ಪ್ರೇಕ್ಷಕರಿಗೆ ಒದಗಿಸುವ ಮೂಲಕ ರಾಮಾಯಣ ಚಿತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ.

ಈ ಬರಹಗಳನ್ನೂ ಓದಿ