ಹೆಚ್ಚಿನ ಸಂಖ್ಯೆಯ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಲ್ಲದ ಆಗಿನ ಕಾಲದಲ್ಲಿ ಸಿನಿಮಾ ಪ್ರಚಾರಕ್ಕೆ ವಿವಿಧ ತಂತ್ರಗಳ ಮೊರೆಹೋಗಬೇಕಿತ್ತು. ಇಂತಹ ಹಾಡಿನ ಪುಸ್ತಕಗಳು ಕೂಡ ಸಿನಿಮಾದ ಪ್ರಚಾರಕ್ಕೆ ತಕ್ಕಮಟ್ಟಿಗೆ ನೆರವಾಗುತ್ತಿದ್ದವು. ಚಿತ್ರದ ನಿರ್ದೇಶಕರ ಸಲಹೆ-ಸೂಚನೆಗಳೊಂದಿಗೆ ವಿತರಕರು ಈ ಪುಸ್ತಕಗಳನ್ನು ಪ್ರಿಂಟ್ ಹಾಕಿಸುತ್ತಿದ್ದರು. ಪುಟಾಣಿ ಪುಸ್ತಕದಲ್ಲಿ ಚಿತ್ರದ ಹಾಡುಗಳು, ಪಾತ್ರವರ್ಗ ಮತ್ತು ತಂತ್ರಜ್ಞರ ಕುರಿತಾದ ಮಾಹಿತಿ, ಕಥಾಸಾರಾಂಶವೂ ಇರುತ್ತಿತ್ತು.
ಆಕರ್ಷಕ ಕಲರ್ ಮುಖಪುಟದ ಏಳೆಂಟು ಪುಟಗಳ ಪುಸ್ತಕದ ಬೆಲೆ ಆಗ ಇಪ್ಪತ್ತೈದರಿಂದ ಐವತ್ತು ಪೈಸೆ. ಬೆಂಗಳೂರು ಸೇರಿದಂತೆ ವಿವಿದೆಡೆ ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್‍ನ ಗೇಟ್ ಕೀಪರ್‍ಗಳೇ ಈ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರಂತೆ. ಪ್ರಮುಖವಾಗಿ ಗಾಂಧಿನಗರದ ವೆಂಕೋಬರಾವ್‍ರ ಚಿತ್ರ ಪ್ರಿಂಟರ್ಸ್ ಹಾಗೂ ಮಾಮೂಲ್ ಪೇಟೆಯಲ್ಲಿನ ಸುಬ್ಬರಾವ್‍ರ ಚೇತನಾ ಪ್ರಿಂಟರ್ಸ್‍ನಲ್ಲಿ ಪುಸ್ತಕಗಳು ಪ್ರಿಂಟ್ ಆಗುತ್ತಿದ್ದವು. ತೊಂಬತ್ತರ ದಶಕದ ಕೊನೆಯವರೆಗೂ ಕಾಣಿಸಿಕೊಂಡ ಹಾಡಿನ ಪುಸ್ತಕಗಳು ನಂತರದ ದಿನಗಳಲ್ಲಿ ಕ್ರಮೇಣ ಕಣ್ಮರೆಯಾದವು.