ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಸಾಲಿನಲ್ಲಿ ಮಣಿರತ್ನಂ ಅವರಿಗೂ ಸ್ಥಾನವಿದೆ. ಯಾವುದೇ ವಸ್ತುವನ್ನು ಪ್ರಭಾವಶಾಲಿಯಾಗಿ ಪ್ರೇಕ್ಷಕರಿಗೆ ಮನನ ಮಾಡುವುದು ಮಣಿರತ್ನಂ ಶೈಲಿ. ಮೈಲುಗಲ್ಲು ಸೃಷ್ಟಿಸಿದ ಅವರ ವೃತ್ತಿ ಬದುಕಿನ ಹತ್ತು ಸಿನಿಮಾಗಳ ವಿಡಿಯೋ-ಟಿಪ್ಪಣಿ ಇಲ್ಲಿದೆ
ಭೂಗತ ಜಗತ್ತು, ರೊಮ್ಯಾಂಟಿಕ್ ಥ್ರಿಲ್ಲರ್, ಭಯೋತ್ಪಾದನೆ, ಲವ್‌ಸ್ಟೋರಿ.. ಆಧುನಿಕ ಜಗತ್ತಿನ ಲಿವ್-ಇನ್ ಸಂಬಂಧದ ಕತೆಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸಬಲ್ಲ ನಿರ್ದೇಶಕ ಮಣಿರತ್ನಂ. ತಮ್ಮ ಶೈಲಿಯಿಂದಲೇ ಅವರು ನಿರ್ದೇಶಕನಾಗಿ ಛಾಪು ಮೂಡಿಸಿದ್ದಾರೆ. ಇಂದು ಮಣಿರತ್ನಂ 62ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಬೆಳ್ಳಿತೆರೆಯಲ್ಲಿ ಮೈಲುಗಲ್ಲು ಸೃಷ್ಟಿಸಿದ ಅವರ ಹತ್ತು ಸಿನಿಮಾಗಳ ಬಗೆಗಿನ ವಿಡಿಯೋ-ಚಿತ್ರಣ ಇಲ್ಲಿದೆ.
ನಾಯಗನ್ (1987) | ಮಣಿರತ್ನಂ ಅವರ ‘ನಾಯಗನ್’ ಬಿಡುಗಡೆಯಾದಾಗ ಭಾರತದ ಸಾಂಪ್ರದಾಯಿಕ ಸಿನಿಪ್ರೇಕ್ಷಕರು ಅಚ್ಚರಿಗೊಳಗಾಗಿದ್ದರು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಮೈಲುಗಲ್ಲು ಎಂದು ವಿಶ್ಲೇಷಕರು ಮೆಚ್ಚಿದ್ದು ಹೌದು. ಇದು ಟ್ರೆಂಡ್ ಸೆಟರ್ ‘ಗಾಡ್‌ಫಾದರ್’ಗೆ ಭಾರತದ ಉತ್ತರ ಎಂದು ಸಿನಿಪ್ರೇಮಿಗಳು ಸವಾಲೆಸೆದಿದ್ದರು. ಮುಂಬಯಿ ಭೂಗತ ಪಾತಕಿ ವರದರಾಜ ಮುದಲಿಯಾರ್ ಪ್ರೇರಣೆಯಿಂದ ಮಣಿರತ್ನಂ ನಿರ್ದೇಶಿಸಿದ ಚಿತ್ರ ಟೈಮ್ ಮ್ಯಾಗಜಿನ್‌ನ ಜಗತ್ತಿನ ಸಾರ್ವಕಾಲಿಕ ನೂರು ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ದಳಪತಿ (1991) | ಭಾರತದ ಪುರಾಣಗ್ರಂಥ ‘ಮಹಾಭಾರತ’ದಲ್ಲಿನ ಕರ್ಣ ಮತ್ತು ದುರ್ಯೋಧನರ ಗೆಳೆತನವನ್ನು ಸಿನಿಮ್ಯಾಟಿಕ್ ಅಗಿ ತೆರೆಗೆ ಅಳವಡಿಸಿ ಯಶಸ್ಸು ಕಂಡಿದ್ದರು ಮಣಿರತ್ನಂ. ರಜನೀಕಾಂತ್ ಮತ್ತು ಮುಮ್ಮೂಟಿ ಜೋಡಿಯ ಸಿನಿಮಾ ಕ್ಲಾಸಿಕ್ ಎನಿಸಿಕೊಂಡಿತು. ಇಳಯರಾಜ ಸಂಗೀತ ಸಂಯೋಜನೆ ಹೈಲೈಟ್. ರಜನೀಕಾಂತ್ ವೃತ್ತಿ ಬದುಕಿನ ಅತ್ಯಂತ ಮಹತ್ವದ ಸಿನಿಮಾ.
ರೋಜಾ (1992) | ಮಣಿರತ್ನಂ ಅವರಿಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟ ಸಿನಿಮಾ. ನೈಜ ಘಟನೆಯೊಂದ ಸ್ಫೂರ್ತಿಯಿಂದ ತಯಾರಾದ ಚಿತ್ರದಲ್ಲಿ ಅರವಿಂದ ಸ್ವಾಮಿ ಮತ್ತು ಮಧುಬಾಲಾ ನಟಿಸಿದ್ದರು. ಕಾಶ್ಮೀರಿ ಭಯೋತ್ಪಾದಕರ ಕೈವಶವಾಗುವ ರಿಷಿ (ಅರವಿಂದ ಸ್ವಾಮಿ), ಪತಿಯನ್ನು ಬಿಡಿಸಿಕೊಳ್ಳಲು ರೋಜಾ (ಮಧುಬಾಲಾ) ರಾಜಕೀಯ ವ್ಯವಸ್ಥೆಯೊಂದಿಗೆ ನಡೆಸುವ ಹೋರಾಟದ ದೇಶಭಕ್ತಿ ಕಥಾನಕ. ಚಿತ್ರದ ಉತ್ತಮ ಸಂಗೀತ ಸಂಯೋಜನೆಗೆ ಎ ಆರ್ ರೆಹಮಾನ್ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು.
ಬಾಂಬೆ (1995) | ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ (1992, ಡಿಸೆಂಬರ್ 6) ಪ್ರಕರಣದ ಪ್ರೇರಣೆಯಿಂದ ರೂಪುಗೊಂಡ ಲವ್‌ಸ್ಟೋರಿ. ಅತ್ಯುತ್ತಮ ಪ್ರಾದೇಷಿಕ ಸಿನಿಮಾ ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಸಿನಿಮಾ. ವಿಶ್ಲೇಷಕರ ಅಪಾರ ಮೆಚ್ಚುಗೆ ಗಳಿಸಿದ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಗಳಿಕೆ ಮಾಡಿತು. ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನ ಅತ್ಯುತ್ತಮ ಇಪ್ಪತ್ತು ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಬಾಂಬೆ’ ಸ್ಥಾನ ಪಡೆದಿದೆ.
ದಿಲ್ ಸೆ (1998) | ಮಣಿರತ್ನಂ ನಿರ್ದೇಶನದ ಮೊಲದ ಹಿಂದಿ ಸಿನಿಮಾ. ಎ ಆರ್ ರೆಹಮಾನ್ ನಿರ್ದೇಶನದ ರೊಮ್ಯಾಂಟಿಕ್-ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತು. ಶಾರುಖ್ ಖಾನ್ ಮತ್ತು ಮನೀಶಾ ಕೊಯಿರಾಲಾ ವೃತ್ತಿಬದುಕಿಗೆ ತಿರುವು ನೀಡಿದ ಸಿನಿಮಾ. ‘ರೋಜಾ’, ‘ಬಾಂಬೆ’ ನಂತರದ ಭಯೋತ್ಪಾದಕ ಕಥಾವಸ್ತುವಿನ ಮೂರನೇ ಸರಣಿ (ಟ್ರೈಲಾಜಿ).
ಅಲೈಪಾಯಿದೆ (2000) | ತಮಿಳು ಚಿತ್ರರಂಗದ ಅತ್ಯುತ್ತಮ ಕ್ಲಾಸಿಕ್ ಲವ್‌ಸ್ಟೋರಿ. ಈ ಚಿತ್ರದೊಂದಿಗೆ ನಟ ಆರ್ ಮಾಧವನ್ ಸಿನಿಪ್ರೇಮಿಗಳ ಮೆಚ್ಚಿನ ಲವರ್ ಹೀರೋ ಆದರು. ಮದುವೆ, ಸಂಪ್ರದಾಯದ ಕಟ್ಟುಪಾಡುಗಳ ಕುರಿತ ಪ್ರೇಮಕತೆಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದರ ಹಿಂದಿ ರಿಮೇಕ್ ‘ಸಾಥಿಯಾ’ ಕೂಡ ಕ್ಲಿಕ್ಕಾಯ್ತು.
ಕಣ್ಣತ್ತಿಲ್ ಮುತ್ತಮಿತ್ತಲ್ (2002) | ಎಲ್‌ಟಿಟಿಇ ಕುರಿತು ಚರ್ಚಿಸುವ ವಸ್ತು. ಮಣಿರತ್ನಂ ಅವರ ಶ್ರೇಷ್ಠ ಸಿನಿಮಾ. ತನ್ನ ತಾಯಿ, ಎಲ್‌ಟಿಟಿಇ ಸದಸ್ಯೆ ಶ್ಯಾಮಾಳನ್ನು (ನಂದಿತಾ) ಭೇಟಿ ಮಾಡುವ ಅಮುದಾಳ ಕತೆ. ಮಾಧವನ್ ಮತ್ತು ಸಿಮ್ರಾನ್ ವೃತ್ತಿ ಬದುಕಿನ ಮಹತ್ವದ ಸಿನಿಮಾವನ್ನು ಪ್ರೇಕ್ಷಕರು ಪ್ರೀತಿಯಿಂದ ಒಪ್ಪಿಕೊಂಡರು. ಹತ್ತಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಿತ್ರಕ್ಕೆ ಪ್ರತಿಷ್ಠಿತ ಗೌರವಗಳು ಲಭಿಸಿವೆ.
ಆಯುಥ ಎಝುಥು (2004) | ಇದರ ಹಿಂದಿ ಅವತರಣಿಕೆ ‘ಯುವ’ ಚಿತ್ರ ದೊಡ್ಡ ಯಶಸ್ಸು ಕಂಡಿತು. ರಾಜಕೀಯ ಪ್ರವೇಶಿಸುವ ವಿದ್ಯಾರ್ಥಿಗಳು, ಭಿನ್ನ ಸಾಮಾಜಿಕ ಹಿನ್ನೆಲೆಯ ಮೂವರು ಯುವಕರ ಬದುಕಿನ ಚಿತ್ರಣ. ವಿಶೇಷವಾಗಿ ನಿರೂಪಣೆಯಿಂದಾಗಿ ಸಿನಿಮಾ ಗಮನ ಸೆಳೆಯಿತು. ನಟ ಅಭಿಷೇಕ್ ಬಚ್ಚನ್ ವೃತ್ತಿ ಬದುಕಿನ ಅತ್ಯುತ್ತಮ ನಟನೆಯ ಸಿನಿಮಾ.
ಗುರು (2007) | ಅಭಿಷೇಕ್ ಬಚ್ಚನ್ ವೃತ್ತಿ ಬದುಕಿಗೆ ತಿರುವು ನೀಡಿದ ಸಿನಿಮಾ. ಉದ್ಯಮಿ ಧೀರೂಬಾಯಿ ಅಂಬಾನಿ ಜೀವನದ ಕತೆಯನ್ನು ಆಧರಿಸಿ ತಯಾರಿಸಿದ ಪ್ರಯೋಗ. ಟೆರರ್, ಥ್ರಿಲ್ಲರ್, ಲವ್‌ಸ್ಟೋರಿ ಮಾದರಿಯ ಚಿತ್ರಗಳಲ್ಲಿ ಪ್ರೇಕ್ಷಕರನ್ನು ತಲುಪಿದ್ದ ಮಣಿರತ್ನಂ ಬಯೋಪಿಕ್‌ನಲ್ಲೂ ತಮ್ಮ ಮ್ಯಾಜಿಕ್ ಸಾಬೀತು ಪಡಿಸಿದರು. ಎಂದಿನಂತೆ ಎ.ಆರ್.ರೆಹಮಾನ್ ತಮ್ಮ ಉತ್ತಮ ಸಂಗೀತ ಸಂಯೋಜನೆಯೊಂದಿಗೆ ಮಣಿಗೆ ಸೂಕ್ತ ರೀತಿಯಲ್ಲಿ ನೆರವಾಗಿದ್ದರು.
ಒಕೆ ಕಣ್ಮಣಿ (2015) | ಆಧುನಕ ಜಗತ್ತಿನ ಲಿವ್-ಇನ್ ಸಂಬಂಧದ ಕುರಿತು ಚರ್ಚಿಸುವ ಸಿನಿಮಾದೊಂದಿಗೆ ಮಣಿರತ್ನಂ ಸೋಲಿನ ಸುಳಿಯಿಂದ ಹೊರಬಂದರು. ದುಲ್ಕರ್ ಸಲ್ಮಾನ್ ಮತ್ತು ನಿತ್ಯಾ ಮೆನನ್ ಪ್ರಮುಖ ಭೂಮಿಕೆಯಲ್ಲಿದ್ದ ಚಿತ್ರ ಹಿಂದಿಯಲ್ಲೂ ತಯಾರಾಗಿತ್ತು. ಈ ಚಿತ್ರದ ಯಶಸ್ಸಿನೊಂದಿಗೆ ಮಣಿರತ್ನಂ ಹೊಸ ತಲೆಮಾರಿನ ಪ್ರೇಕ್ಷಕರ ನಾಡಿಮಿಡಿವನ್ನೂ ತಲುಪಿದರು.