
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು
ಆಗ ಮಲೆಯಾಳಂ ಚಿತ್ರಗಳು ಅತ್ಯಂತ ಮಿತವ್ಯಯ ಬಜೆಟ್‌ನಲ್ಲಿ ತಯಾರಾಗುತ್ತಿದ್ದವು. ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಮಯ ಬೆಳಿಗ್ಗೆ 7 ರಿಂದ ಮದ್ಯಾಹ್ನ 1, ಇಲ್ಲ 2 ರಿಂದ 9, ಅಥವಾ ರಾತ್ರಿ 10 ರಿಂದ 2 ಘಂಟೆ, ಈ ರೀತಿಯ ಕಾಲ್‌ಶೀಟ್‌ನಲ್ಲಿ ಕೆಲಸ ಮಾಡಿ ಕಲಾವಿದರ, ಹಾಗೂ ತಂತ್ರಜ್ಞರ ಊಟದ ಖರ್ಚು ಮಿಗಿಸುವ ಉದ್ದೇಶವಿರುತ್ತಿತ್ತು.
1965 ರಿಂದ1970 ರವರಿಗೆ ನಾನು ಮದರಾಸಿನಲ್ಲಿ ಸುಮಾರು 15 ಮಲೆಯಾಳಂ ಭಾಷೆಯ ಚಿತ್ರಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸ ಮಾಡಿರುವೆ. ಆ ಚಿತ್ರಗಳ ಹೆಸರು ಮರೆತಿರುವೆ. ನೆನಪು ಇರುವ ಮೂರು ಚಿತ್ರಗಳಲ್ಲಿ ಒಂದು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ ‘ಮೇಯರ್ ನಾಯರ್’, ಮತ್ತೆರಡು ‘ಅಗ್ನಿ ಪುತ್ರಿ’ ಹಾಗೂ ‘ಕದೀಜ’. ಆಗ ಮಲೆಯಾಳಂ ಚಿತ್ರಗಳು ಅತ್ಯಂತ ಮಿತವ್ಯಯ ಬಜೆಟ್‌ನಲ್ಲಿ ತಯಾರಾಗುತ್ತಿದ್ದವು. ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಮಯ ಬೆಳಿಗ್ಗೆ 7 ರಿಂದ ಮದ್ಯಾಹ್ನ 1, ಇಲ್ಲ 2 ರಿಂದ 9, ಅಥವಾ ರಾತ್ರಿ 10 ರಿಂದ 2 ಘಂಟೆ, ಈ ರೀತಿಯ ಕಾಲ್‌ಶೀಟ್‌ನಲ್ಲಿ ಕೆಲಸ ಮಾಡಿ ಕಲಾವಿದರ, ಹಾಗೂ ತಂತ್ರಜ್ಞರ ಊಟದ ಖರ್ಚು ಮಿಗಿಸುವ ಉದ್ದೇಶವಿರುತ್ತಿತ್ತು. ಆಗ ಮಲಯಾಳಂ ಚಿತ್ರಗಳ ಮಾರುಕಟ್ಟೆ ತುಂಬಾ ಚಿಕ್ಕದಾಗಿತ್ತು. ಆದರೆ ಅವರ ಚಿತ್ರಗಳ ಕಥೆಗಳು ಬಹಳ ಚೆನ್ನಾಗಿರುತ್ತಿದ್ದವು. ಸಿನಿಮಾಗಳನ್ನು 20 ರಿಂದ 30 ದಿನಗಳಲ್ಲಿ ಮುಗಿಸಿಬಿಡುತ್ತಿದ್ದರು.
ಒಮ್ಮೆ ಹೊರಾಂಗಣ ಚಿತ್ರೀಕರಣಕ್ಕೆ ಎರ್ಕಾಡ್‌ಗೆ ಹೋಗಿದ್ದವು. ಶೂಟಿಂಗ್ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿತ್ತು. ಮಧ್ಯಾಹ್ನದ ಊಟದ ಸಮಯದಲ್ಲಿ ತಂಡದ ಮ್ಯಾನೇಜರ್ ಕಲಾವಿದರಿಂದ ಹಿಡಿದು ಪ್ರತಿಯೊಬ್ಬರಿಗೂ ಒಂದೊಂದು ತಿಂಡಿ ಪೊಟ್ಟಣ ಕೊಟ್ಟ. ನಾನು, ‘ಇದು ಏನು?’ ಎಂದು ಕೇಳಿದೆ. ‘ಮಟನ್ ಬಿರಿಯಾನಿ’ ಎಂದು ಹೇಳಿದ. ಬೆಳಗ್ಗೆಯೇ, ‘ನಾನು ಸಸ್ಯಹಾರಿ. ನನಗೆ ಯಾವುದೇ ಸಸ್ಯಹಾರಿ ತಿಂಡಿಯಾದರು ಸರಿ’ ಎಂದು ತಿಳಿಸಿದ್ದೆ. ತಂಡದಲ್ಲಿ ನಾನೊಬ್ಬನೆ ಸಸ್ಯಹಾರಿಯಾಗಿದ್ದೆ. ಮರೆತ ಮ್ಯಾನೇಜರ್, ‘ಸರಿ, ಬಿರಿಯಾನಿಯಲ್ಲಿರುವ ಮಟನ್ ಪೀಸ್ ಎಲ್ಲಾ ಅರಿಸಿ ತೆಗೆದುಬಿಡುತ್ತೇನೆ. ಮಿಕ್ಕಿದ್ದನ್ನು ತಿಂದು ಬಿಡಿ’ ಎಂದು ಹೇಳಿದ. ‘ಇಲ್ಲ ನನಗೆ ಆಗುವುದಿಲ್ಲ, ನಾನು ತಿನ್ನುವುದಿಲ್ಲ ನಾಳೆಯಾದರು ಸಸ್ಯಹಾರ ತಂದುಕೊಡಿ’ ಎಂದು ಹೇಳಿದೆ. ಅಂದಿನಿಂದ ನಾನು ಶೂಟಿಂಗ್ ಹೊರಡುವ ಮುಂಚೆ ಬಿಸ್ಕತ್ತು, ಬಾಳೆಹಣ್ಣು ನನ್ನ ಕ್ಯಾಮರಾ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ.