ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ತಮ್ಮ ‘ಉಯ್ಯಾಲೆ’ ಚಿತ್ರದಲ್ಲಿ ಕತೆಗೆ ಪೂರಕವಾಗಿ ನಾಟಕದ ಸನ್ನಿವೇಶವೊಂದನ್ನು ಸೃಷ್ಟಿಸಿ ಬುದ್ದನನ್ನು ಕಾಣಿಸುತ್ತಾರೆ. ರಾಜ್ ಬುದ್ದನ ಪಾತ್ರದಲ್ಲಿದ್ದು, ಲೀಲಾವತಿ ಕಿಸಾಗೌತಮಿಯಾಗಿ ನಟಿಸಿದ್ದಾರೆ. ಇದು ಬುದ್ದ ಪೂರ್ಣಿಮೆ (ಮೇ 26) ವಿಶೇಷ.
ಎನ್.ಲಕ್ಷ್ಮೀನಾರಾಯಣ್ ನಿರ್ದೇಶನದ ‘ಉಯ್ಯಾಲೆ’ ಕನ್ನಡದ ಗಮನಾರ್ಹ ಚಿತ್ರಗಳಲ್ಲೊಂದು. ಸಾಹಿತಿ ಚದುರಂಗ ಅವರ ಕೃತಿಯನ್ನು ಆಧರಿಸಿದ ಪ್ರಯೋಗವಿದು. ಚಿತ್ರದಲ್ಲಿ ಶೇಷಗಿರಿ (ಅಶ್ವಥ್) ಮತ್ತು ಕೃಷ್ಣೇಗೌಡ (ರಾಜಕುಮಾರ್) ಆತ್ಮೀಯ ಸ್ನೇಹಿತರು. ಶೇಷಗಿರಿ ಪತ್ನಿ ರಾಧಾ. ಶ್ರೀರಂಗಪಟ್ಟಣದಿಂದ ಮೈಸೂರಿಗೆ ಓದಲು ಬಂದ ಕೃಷ್ಣೇಗೌಡನನ್ನು ತನ್ನ ಮನೆಗೇ ಕರೆತರುತ್ತಾನೆ ಶೇಷಗಿರಿ. ಆಕಸ್ಮಿಕವೊಂದರಲ್ಲಿ ಶೇಷಗಿರಿ – ರಾಧಾ ದಂಪತಿಯ ಪುಟ್ಟ ಮಗಳು ಅಸುನೀಗುತ್ತಾಳೆ. ರಾಧಾ ತೀವ್ರ ಸಂಕಟದಿಂದ ಬಳಲುತ್ತಿದ್ದ ಈ ಸಂದರ್ಭದಲ್ಲಿ ನಿರ್ದೇಶಕ ಲಕ್ಷ್ಮೀನಾರಾಯಣ್ ಅವರು ಬುದ್ದನ ನಾಟಕವೊಂದನ್ನು ಚಿತ್ರಕಥೆಯಲ್ಲಿ ಅಳವಡಿಸಿದ್ದಾರೆ. ‘ಜಾತಸ್ಯ ಮರಣಂ ಧ್ರುವಂ’ ಎನ್ನುವ ವಾಸ್ತವದ ಸಂದೇಶ ದಾಟಿಸುವ ಈ ನಾಟಕದ ವೀಡಿಯೋ ಇಲ್ಲಿದೆ.