ಶ್ರೀನಿವಾಸ್ ಮಂಡ್ಯ ನಿರ್ದೇಶನದ ‘ರೋಲೆಕ್ಸ್’ ಸಿನಿಮಾದ ಶಿರ್ಷಿಕೆಯನ್ನು ‘ರಿಲಾಕ್ಸ್’ ಎಂದು ಬದಲಿಸಾಗಿದೆ. ಕೋಮಲ್ ಕುಮಾರ್ ಮತ್ತು ಸೋನಾಲ್ ಮೊಂತೆರೊ ಜೋಡಿಯ ಈ ಚಿತ್ರದ ವಿಶೇಷ ಪಾತ್ರದಲ್ಲಿ ವಿನೋದ್ ಪ್ರಭಾಕರ್ ನಟಿಸಿದ್ದಾರೆ.
ಕೋಮಲ್ ಕುಮಾರ್ ಅಭಿನಯದ ‘ರೋಲೆಕ್ಸ್’ ಸಿನಿಮಾದ ಶೀರ್ಷಿಕೆ ಈಗ ‘ರಿಲಾಕ್ಸ್’ ಎಂದಾಗಿದೆ. ಮಧು ಫಿಲಂ ಸರ್ಕ್ಯೂಟ್ಸ್ ಬ್ಯಾನರ್‌ನಡಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ ಚಿತ್ರವಿದು. ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿರುವ ಈ ಚಿತ್ರದ ನಾಯಕಿ ಸೋನಾಲ್ ಮೊಂತೆರೊ. ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಿರ್ಮಾಪಕ ಅಂಬಟಿ ಮಧು ಮೋಹನ್ ಈ ಬಗ್ಗೆ ಮಾತನಾಡಿ, ‘ಹೆಸರಾಂತ ಸಂಸ್ಥೆಯೊಂದು ‘ರೋಲೆಕ್ಸ್’ ಶೀರ್ಷಿಕೆಯನ್ನಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಸೌಂಡ್ ಆಗಲಿ ಬಳಸಿಕೊಳ್ಳಬಾರದೆಂದು ನೋಟಿಸ್ ನೀಡಿದೆ. ಆದರೆ ನೋಟಿಸ್ ನೀಡಿರುವ ಸಂಸ್ಥೆಗೆ ಸಂಬಂಧಿಸಿದ ಹಾಗೆ ನಮ್ಮ ಚಿತ್ರದಲ್ಲಿ ಯಾವುದನ್ನು ಬಳಸಿಕೊಂಡಿಲ್ಲ. ಈಗ ಚಿತ್ರ ಬಿಡುಗಡೆಯ ಹಂತದಲ್ಲಿದ್ದು, ಈ ಸಮಯದಲ್ಲಿ ಶೀರ್ಷಿಕೆಗಾಗಿ ಹೋರಾಡಲು ಸಮಯವಿಲ್ಲ. ಚಿತ್ರದ ಕಂಟೆಂಟ್ ಬಹಳ ಚೆನ್ನಾಗಿದೆ. ಕಂಟೆಂಟ್ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ಹಾಗಾಗಿ ಚಿತ್ರದ ಶೀರ್ಷಿಕೆಗಿಂತ ಕಂಟೆಂಟ್ ಮುಖ್ಯ ಎಂದು ಚಿತ್ರತಂಡ ತೀರ್ಮಾನಿಸಿದ್ದು, ಚಿತ್ರದ ಶೀರ್ಷಿಕೆಯನ್ನು ರಿಲಾಕ್ಸ್ ಎಂದು ಬದಲಿಸಿದ್ದೇವೆ’ ಎಂದಿದ್ದಾರೆ.
ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟೀಸರ್ ಗೆ ನಿರೀಕ್ಷೆಗೂ ಮೀರಿ ಪ್ರಶಂಸೆ ವ್ಯಕ್ತವಾಗಿದೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ನಂದು(ಕೆ.ಜಿ.ಎಫ್) ಹಿನ್ನೆಲೆ ಸಂಗೀತ ನೀಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಅವರ ಸಂಕಲನವಿರುವ ಈ ಚಿತ್ರಕ್ಕೆ ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಹಾಗೂ ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.







