1933ರ ಇದೇ ದಿನ ಜೂನ್ 6ರಂದು ನ್ಯೂಜೆರ್ಸಿಯ ಕ್ಯಾಮ್‌ಡೆನ್ ನಗರದಲ್ಲಿ ಡ್ರೈವ್-ಇನ್ ಥಿಯೇಟರ್ ಶುರುವಾಗಿತ್ತು. ಎಕರೆಗಟ್ಟಲೆ ಜಾಗ, ಅಲ್ಲೊಂದು ಬೃಹತ್ ಬಿಳಿಯ ಪರದೆ, ಸಿನಿಮಾ ಪ್ರೊಜೆಕ್ಷನ್ ವ್ಯವಸ್ಥೆ. ದೊಡ್ಡ ಮೈದಾನದಲ್ಲಿ ಕಾರುಗಳನ್ನು ನಿಲ್ಲಿಸಿಕೊಂಡು ಸಿನಿಮಾ ನೋಡುವ ಸಂಪ್ರದಾಯವೇ ಡ್ರೈವ್-ಇನ್ ಥಿಯೇಟರ್. ನ್ಯೂಜೆರ್ಸಿಯಲ್ಲಿನ ಮೊದಲ ಪ್ರಯೋಗಕ್ಕೆ ‘ಪಾರ್ಕ್-ಇನ್ ಥಿಯೇಟರ್’ ಎಂದು ಕರೆಯಲಾಗಿತ್ತು. ಕ್ರಮೇಣ ಇದು ಡ್ರೈವ್-ಇನ್ ಥಿಯೇಟರ್ ಎಂದು ಹೆಸರಾಯಿತು.
ರಿಚರ್ಡ್ ಹಾಲಿಂಗ್‌ಶೆಡ್ ಅವರ ಕನಸಿನ ಕೂಸು ಡ್ರೈವ್-ಇನ್ ಥಿಯೇಟರ್. ತಂದೆಯ ಒಡೆತನದ ವಿಝ್ ಆಟೋ ಪ್ರಾಡಕ್ಟ್ಸ್ ಸಂಸ್ಥೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿದ್ದವರು ರಿಚರ್ಡ್. ಮಹಾ ಸಿನಿಮಾಪ್ರೇಮಿ. ಒಮ್ಮೆ ಅವರು ತಾಯಿಯೊಂದಿಗೆ ಅವರು ಸಿನಿಮಾ ನೋಡಲೆಂದು ಥಿಯೇಟರ್‌ಗೆ ಹೋಗಿರುತ್ತಾರೆ. ಅಲ್ಲಿನ ಸೀಟಿನ ವ್ಯವಸ್ಥೆಯಿಂದ ತಾಯಿಗೆ ಆರಾಮವಾಗಿ ಕುಳಿತು ಸಿನಿಮಾ ನೋಡಲಾಗುವುದಿಲ್ಲ. ಈ ಸಂದರ್ಭ ರಿಚರ್ಡ್‌ಗೆ ಡ್ರೈವ್-ಇನ್ ಥಿಯೇಟರ್ ಬಗ್ಗೆ ಆಲೋಚಿಸಲು ಕಾರಣವಾಗುತ್ತದೆ.

ಮೊದಲು ರಿಚರ್ಡ್ ತನ್ನ ಮನೆ ಮತ್ತು ಮನೆಯ ಸುತ್ತಲಿದ್ದ ಜಾಗವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಳ್ಳುತ್ತಾರೆ. ಕೈಗೆಟುಕುವ ಟೆಕ್ನಾಲಜಿಯೊಂದಿಗೆ ಡ್ರೈವ್-ಇನ್ ಥಿಯೇಟರ್ ಯೋಜನೆಯ ಇತಿ-ಮಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಸಂಪೂರ್ಣ ವಿಶ್ವಾಸ ಮೂಡಿದ ನಂತರ ಮೂವತ್ತು ಸಾವಿರ ಡಾಲರ್ ಬಂಡವಾಳದೊಂದಿಗೆ ಅವರ ಕನಸಿನ ಥಿಯೇಟರ್ ಶುರು ಮಾಡುತ್ತಾರೆ. 1933ರ ಇದೇ ದಿನ ಜೂನ್ 6ರಂದು ನ್ಯೂಜೆರ್ಸಿಯ ಕ್ಯಾಮ್‌ಡೆನ್ ನಗರದಲ್ಲಿ ಮೊದಲ ಶೋ ನಡೆಯುತ್ತದೆ. ಕಾರಿಗೆ 25 ಸೆಂಟ್ ಮತ್ತು ಒಬ್ಬ ವ್ಯಕ್ತಿಗೆ 25 ಸೆಂಟ್ ದರ ನಿಗಧಿಪಡಿಸುತ್ತಾರೆ. ಈ ಹೊಸ ಆಲೋಚನೆಗೆ ದೊಡ್ಡ ಬೆಂಬಲ ವ್ಯಕ್ತವಾಗಿ ಜನರು ದೊಡ್ಡ ಸಂಖ್ಯೆಯಲ್ಲಿ ಕಾರುಗಳಲ್ಲಿ ಬಂದು, ಕಾರಿನೊಳಗೇ ಕುಳಿತು ಸಿನಿಮಾ ನೋಡುವ ಸಂಪ್ರದಾಯ ಜನಪ್ರಿಯತೆ ಗಳಿಸುತ್ತದೆ.
ರಿಚರ್ಡ್ ತಮ್ಮ ಯೋಜನೆಗೆ ಪೇಟೆಂಟ್ ಮಾಡಿಸುತ್ತಾರೆ. ಅವರ ಪೇಟೆಂಟ್ ಅವಧಿ ಮುಗಿದ ನಂತರ ಹಲವು ದೇಶಗಳಲ್ಲಿ ಡ್ರೈವ್-ಇನ್ ಥಿಯೇಟರ್ಗಳು ಶುರುವಾಗುತ್ತವೆ. ನ್ಯೂಯಾರ್ಕ್‌ನ ಕಾಪಿಗ್ಯೂನಲ್ಲಿ 28 ಎಕರೆಗಳ ವಿಸ್ತಾರದಲ್ಲಿ 2500ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಿ ಸಿನಿಮಾ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಇದು ಅತಿ ದೊಡ್ಡ ಡ್ರೈವ್-ಇನ್ ಥಿಯೇಟರ್ ಎನ್ನುವ ದಾಖಲೆಗೆ ಪಾತ್ರವಾಗಿತ್ತು.

ಬೆಂಗಳೂರಿನಲ್ಲೂ ಇತ್ತು ಡ್ರೈವ್-ಇನ್ ಥಿಯೇಟರ್
70ರ ದಶಕದ ಮಧ್ಯಭಾಗದಲ್ಲಿ ಬೆಂಗಳೂರಿನ ಬನ್ನೇರಘಟ್ಟದಲ್ಲಿ ಡ್ರೈವ್-ಇನ್ ಥಿಯೇಟರ್ ಚಾಲ್ತಿಯಲ್ಲಿತ್ತು. ಸುಮಾರು ಎಪ್ಪತ್ತು ಕಾರುಗಳನ್ನು ನಿಲ್ಲಿಸಬಹುದಾಗಿದ್ದ ಜಾಗ. ಗೀತಪ್ರಿಯ ನಿರ್ದೇಶನದ ‘ಪ್ರೇಮಾಯಣ’ (1978) ಚಿತ್ರದ ಹಾಡೊಂದನ್ನು ಅಲ್ಲಿ ಚಿತ್ರಿಸಲಾಗಿತ್ತು. ಬೆಂಗಳೂರಿನ ಡ್ರೈವ್-ಇನ್ ಥಿಯೇಟರ್ ಯಶಸ್ವಿಯಾಗಲಿಲ್ಲ. ಐದು ವರ್ಷಗಳ ಕಾಲ ಕುಂಟುತ್ತಾ ನಡೆದ ಡ್ರೈವ್ ಇನ್ ಥಿಯೇಟರ್ ಅದೊಂದು ದಿನ ಮುಚ್ಚಿಹೋಯ್ತು. (ಮಾಹಿತಿ – ಫೋಟೊ ಕೃಪೆ: ವೆಂಕಟೇಶ್ ನಾರಾಯಣಸ್ವಾಮಿ)
