
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ
ಚಿತ್ರೀಕರಣ ಸಂದರ್ಭದಲ್ಲಿ ಬಾಲಚಂದರ್ ಅವರು ನನ್ನೊಂದಿಗೆ ಪುಟ್ಟಣ್ಣನವರ ಕಾರ್ಯವೈಖರಿ ಬಗ್ಗೆ ಅಗಾಗ್ಗೆ ಕೇಳುತ್ತಿದ್ದರು. ಅವರಿಗೆ ಪುಟ್ಟಣ್ಣ ಎಂದರೆ ಅಪಾರ ಗೌರವ. – ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರ ಒಂದು ಅನುಭವ.
ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ಚಿತ್ರನಿರ್ಮಾಪಕರೊಲ್ಲಬ್ಬರು ಚಂದೂಲಾಲ್ ಜೈನ್. ತಮಿಳಿನ ಖ್ಯಾತ ಚಿತ್ರನಿರ್ದೇಶಕ ಕೆ.ಬಾಲಚಂದರ್ ಅವರಿಂದ ಕನ್ನಡದಲ್ಲಿ ಒಂದು ಸಿನಿಮಾ ನಿರ್ದೇಶಿಸಬೇಕು ಎನ್ನುವುದು ಚಂದೂಲಾಲ್ ಅವರ ಆಸೆಯಾಗಿತ್ತು. ಆದರೆ ಪ್ರಯೋಗಶೀಲ ಸಿನಿಮಾಗಳ ಮೂಲಕ ತಮ್ಮದೇ ಒಂದು ಹಾದಿ ಸೃಷ್ಟಿಸಿಕೊಂಡಿದ್ದ ಬಾಲಚಂದರ್ ಅವರನ್ನು ಒಪ್ಪಿಸುವುದು ಸುಲಭವಿರಲಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆದವು. ಕೊನೆಗೆ ಹಲವು ನಿಬಂಧನೆಗಳೊಂದಗೆ ಬಾಲಚಂದರ್ ಕನ್ನಡ ಸಿನಿಮಾ ನಿರ್ದೇಶಿಸಲು ಒಪ್ಪಿದರು. ಅದೇ ‘ಬೆಂಕಿಯಲ್ಲಿ ಅರಳಿದ ಹೂವು’ (1983). ಇದು ಬಾಲಚಂದರ್ ಅವರೇ ನಿರ್ದೇಶಿಸಿದ್ದ ‘ಅವಳ್ ಒರು ತೊಡರ್ ಕಥೈ’ (1974) ತಮಿಳು ಚಿತ್ರದ ಕನ್ನಡ ಅವತರಣಿಕೆ.

ಬಾಲಚಂದರ್ ನಿಬಂಧನೆಗಳ ಪ್ರಕಾರ ತಂತ್ರಜ್ಞರೆಲ್ಲರೂ ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಿದವರೇ ಆಗಿರಬೇಕು, ಅವರೆಲ್ಲರೂ ಮದರಾಸಿನಿಂದಲೇ ಬರುತ್ತಾರೆ ಎನ್ನುವುದಾಗಿತ್ತು. ನಿರ್ಮಾಪಕ ಇದಕ್ಕೆ ಜೈನ್ ಒಪ್ಪಿದ್ದರು. ಅದರೆ ಚಿತ್ರೀಕರಣ ಪ್ರಾರಂಭವಾಗುವ ಸ್ವಲ್ಪ ದಿನಗಳ ಮುನ್ನ ಜೈನ್ ಅವರು ನನ್ನನ್ನು ಬಾಲಚಂದರ್ ಬಳಿಕರೆದುಕೊಂಡು ಹೋದರು. “ಸಾರ್ ಇವರು ಅಶ್ವತ್ಥ ನಾರಾಯಣ, ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕರು. ನಮ್ಮ ಈ ಚಿತ್ರಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದಿದ್ದೇನೆ” ಎಂದು ಹಿಂಜರಿಕೆಯಿಂದಲೇ ವಿನಂತಿಸಿಕೊಂಡರು. ಬಾಲಚಂದರ್ ಸ್ವಲ್ಪ ಸಮಯ ಏನೂ ಮಾತನಾಡಲಿಲ್ಲ. ಆಗ ಜೈನ್ ಅವರು, “ಸರ್, ಇವರು ಪುಟ್ಟಣ್ಣ ಕಣಗಾಲರ ಬಹಳಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ” ಎಂದು ಹೇಳಿದರು. ಆಗ ಬಾಲಚಂದರ್, “ಓ ಹಾಗಾದ್ರೆ ಸರಿ” ಎಂದು ಮರುಮಾತಿಲ್ಲದೆ ಒಪ್ಪಗೆ ಸೂಚಿಸಿದರು. ಅದು ಪುಟ್ಟಣ್ಣ, ಅವರ ಸಿನಿಮಾ, ಅವರ ವೃತ್ತಿಪರತೆ ಬಗ್ಗೆ ಕೆ.ಬಾಲಚಂದರ್ ಅವರಿಗಿದ್ದ ಗೌರವ, ಅಭಿಮಾನ.

ಚಿತ್ರೀಕರಣ ಸಂದರ್ಭದಲ್ಲಿ ಬಾಲಚಂದರ್ ಅವರು ನನ್ನೊಂದಿಗೆ ಪುಟ್ಟಣ್ಣನವರ ಕಾರ್ಯವೈಖರಿ ಬಗ್ಗೆ ಅಗಾಗ್ಗೆ ಕೇಳುತ್ತಿದ್ದರು. ಅವರಿಗೆ ಪುಟ್ಟಣ್ಣ ಎಂದರೆ ಅಪಾರ ಗೌರವ. ಜೈನ್‌ರವರಿಗೆ ನನ್ನನ್ನು ನೇಮಕ ಮಾಡಿಕೊಳ್ಳಲು ಅವರ ಸ್ವಾರ್ಥ ಸಹ ಇತ್ತು. ಮದರಾಸಿನ ಛಾಯಾಗ್ರಾಹಕರನ್ನು ನೇಮಕ ಮಾಡಿಕೊಂಡಿದ್ದರೆ ಫೋಟೋಗಳ ಪ್ರೊಸೆಸಿಂಗ್ ತಡವಾಗಿ ಚಿತ್ರೀಕರಣಕ್ಕೆ ಅಡ್ಡಿಯಾಗುತ್ತಿತ್ತು. ನಾನಾದರೆ ಅವರಿಗೆ ಸುಪರಿಚಿತ ತಂತ್ರಜ್ಞ. ಅಲ್ಲದೆ ಇಲ್ಲೇ ಸ್ಟುಡಿಯೋ ಇದ್ದುದರಿಂದ ಪ್ರೊಸೆಸಿಂಗ್ ಬೇಗ ಆಗಿ ಮಾರನೇ ದಿನವೇ ಫೋಟೋಗಳು ಕೈಗೆ ಸಿಗುತ್ತಿದ್ದವು.
