ಪದ್ಮಶ್ರೀ ಪುರಸ್ಕೃತ ಪ್ರಸೂನ್ ಜೋಶಿ ಅವರ ಲೇಖನಿ, ಶ್ರುತಿ ಶರ್ಮಾ ಅವರ ನಿರ್ದೇಶನ ಹಾಗೂ ಸಚಿನ್-ಜಿಗರ್ ಅವರ ಸಂಗೀತವಿರುವ ‘ರಾಜಾಧಿರಾಜ ಯಾತ್ರೆ’ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಬೆಂಗಳೂರಿನ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನಡೆದ ‘ರಾಜಾಧಿರಾಜ ಯಾತ್ರೆ’ ಮ್ಯೂಸಿಕಲ್ ಡ್ಯಾನ್ಸ್ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಪ್ರದರ್ಶನಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಕೃಷ್ಣನ ಲೀಲೆಗಳನ್ನು ಕಣ್ಣಮುಂದೆ ತರುತ್ತಿರುವ ಈ ಕಲೆಗೆ ಸಿಲಿಕಾನ್ ಸಿಟಿ ಮಾರುಹೋಗಿದೆ. ಬಾಲಕೃಷ್ಣನಿಂದ ಹಿಡಿದು ದ್ವಾರಕಾಧೀಶನವರೆಗಿನ ಶ್ರೀಕೃಷ್ಣನ ದೈವಿಕ ಪಯಣವನ್ನು ಈ ನಾಟಕದಲ್ಲಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಪದ್ಮಶ್ರೀ ಪುರಸ್ಕೃತ ಪ್ರಸೂನ್ ಜೋಶಿ ಅವರ ಲೇಖನಿ, ಶ್ರುತಿ ಶರ್ಮಾ ಅವರ ನಿರ್ದೇಶನ ಹಾಗೂ ಸಚಿನ್-ಜಿಗರ್ ಅವರ ಸಂಗೀತ ಈ ಪ್ರದರ್ಶನದ ಜೀವಾಳ. ಪ್ರಸಿದ್ಧ ವಿನ್ಯಾಸಕಿ ನೀತಾ ಲುಲ್ಲಾ ಅವರ ವಸ್ತ್ರಾಲಂಕಾರ ಮತ್ತು ಭವ್ಯವಾದ ಸೆಟ್ ಸೆಟ್ಟಿಂಗ್‌ಗಳು ಪ್ರೇಕ್ಷಕರನ್ನು ದ್ವಾಪರ ಯುಗಕ್ಕೆ ಕರೆದೊಯ್ಯುತ್ತವೆ. 20ಕ್ಕೂ ಹೆಚ್ಚು ಮೂಲ ಹಾಡುಗಳು ಹಾಗೂ ಮೈನವಿರೇಳಿಸುವ ನೃತ್ಯ ಸಂಯೋಜನೆ ಈ ಶೋನ ಹೈಲೈಟ್.
ಲಾಫಿಂಗ್ ವಾಟರ್ ಪ್ರೊಡಕ್ಷನ್ಸ್, ಹೊಂಬಾಳೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಕಲಾನೇಷನ್ ಜಂಟಿಯಾಗಿ ಈ ಮಹೋನ್ನತ ಕಾರ್ಯಕ್ರಮವನ್ನು ಆಯೋಜಿಸಿವೆ. ಬೆಂಗಳೂರಿನಲ್ಲಿ ಐತಿಹಾಸಿಕ ಯಶಸ್ಸು ಕಂಡಿರುವ ‘ರಾಜಾಧಿರಾಜ ಯಾತ್ರೆ’, ಈಗ ತನ್ನ ಮುಂದಿನ ಪಯಣವನ್ನು ಚೆನ್ನೈನತ್ತ ಬೆಳೆಸುತ್ತಿದೆ. ಮಾರ್ಚ್ 27 ರಿಂದ 29 ರವರೆಗೆ ಚೆನ್ನೈ ಪ್ರೇಕ್ಷಕರನ್ನು ರಂಜಿಸಲು ಈ ತಂಡ ಸಜ್ಜಾಗಿದೆ. ಕೇವಲ ಒಂದು ನಾಟಕವಾಗಿ ಉಳಿಯದೆ, ಭಕ್ತಿ ಮತ್ತು ಕಲೆಯ ಸಂಗಮವಾಗಿರುವ ಈ ‘ರಾಜಾಧಿರಾಜ ಯಾತ್ರೆ’ ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದೆ.








