ಮಧುಸೂದನ್ ಹವಾಲ್ದಾರ್ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ‘ನಮ್ಮ ರಾಯರು’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ‘ತಂಬೂರಿ ಮೀಟಿದವ’ ಹಾಡಿನ ಚಿತ್ರೀಕರಣದೊಂದಿಗೆ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ.
ನಾಡಿನ ಶ್ರೇಷ್ಠ ಹರಿದಾಸರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸಿದವರು ಮಧುಸೂದನ್ ಹವಾಲ್ದಾರ್. ಅವರ ಮುಂದಿನ ನಿರ್ದೇಶನದ ಚಿತ್ರ ‘ನಮ್ಮ ರಾಯರು’. ಪ್ರಸ್ತುತ ಈ ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಈ ಬಗ್ಗೆ ಮಾತನಾಡುವ ಅವರು, ”ನಮ್ಮ ಮಾತಾಂಬುಜ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಆರನೇ ಚಿತ್ರ ‘ನಮ್ಮ ರಾಯರು’. ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದು ಸಂಗೀತ ಸಂಯೋಜಿಸುವುದರ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದೇನೆ. ಜೆ.ಎಂ.ಪ್ರಹ್ಲಾದ್ ಸಂಭಾಷಣೆ ಬರೆಯುತ್ತಿದ್ದಾರೆ’ ಎಂದಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಪುರಂದರದಾಸರ ‘ತಂಬೂರಿ ಮೀಟಿದವ’ ಹಾಡಿನ ಚಿತ್ರೀಕರಣದೊಂದಿಗೆ ಈ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಖ್ಯಾತ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಈ ಹಾಡನ್ನು ಹಾಡಿದ್ದಾರೆ. ”ನಮ್ಮ ರಾಯರು’ ಈಗಿನ ಕಾಲಘಟ್ಟ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಜೀವನದ ಕಾಲಘಟ್ಟ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ರಾಯರ ಮಹಿಮೆಯನ್ನು ಸಾರುವ ಚಿತ್ರವೂ ಹೌದು. ಈ ಚಿತ್ರದ ದ್ವಿತೀಯಾರ್ಧದ ಕಥೆ ಪೂರ್ತಿ ಮಂತ್ರಾಲಯದಲ್ಲಿ ನಡೆಯಲಿದೆ. ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಸಹ ಈ ಚಿತ್ರದಲ್ಲಿ ರಾಯರ ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿದ್ದಾರೆ” ಎನ್ನುತ್ತಾರೆ ಮಧುಸೂಧನ್ ಹವಾಲ್ದಾರ್.
‘ಜಗನ್ನಾಥದಾಸರು’ ಚಿತ್ರದಲ್ಲಿ ಶ್ರೀದ ವಿಠಲರ ಪಾತ್ರ ನಿರ್ವಹಿಸಿದ್ದ ಪುಷ್ಕರ್ ದೇಶಪಾಂಡೆ ಈ ಚಿತ್ರದ ನಾಯಕನಾಗಿ ಹಾಗೂ ಭರತನಾಟ್ಯ ಕಲಾವಿದೆ ಪ್ರೇರಣ ಕುಂಶಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಎರಡು ಪುರಂದರದಾಸರ ಕೃತಿಗಳನ್ನು ಬಳಸಿಕೊಳ್ಳುತ್ತಿದ್ದು, ಉಳಿದ ಮೂರು ಹಾಡುಗಳನ್ನು ಮಧುಸೂಧನ್ ಹವಾಲ್ದಾರ್ ರಚಿಸಿದ್ದಾರೆ.







