ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

‘ಅಂತರಂಗದ ಅಣ್ಣ’ ಪುಸ್ತಕದ ವಿರುದ್ಧ ಕೃತಿ ಚೌರ್ಯದ ಆರೋಪ

ಪೋಸ್ಟ್ ಶೇರ್ ಮಾಡಿ
'ಅಂತರಂಗದ ಅಣ್ಣ' ಪುಸ್ತಕದ ವಿರುದ್ಧ ಕೃತಿ ಚೌರ್ಯದ ಆರೋಪ

2021ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಕಾಶ್‌ ರಾಜ್‌ ಅವರ ‘ಅಂತರಂಗದ ಅಣ್ಣ’ ಕೃತಿಯ ವಿರುದ್ಧ ಕೃತಿ ಚೌರ್ಯದ ಆರೋಪ ಕೇಳಿಬಂದಿದೆ. ಹಿರಿಯ ಪತ್ರಕರ್ತ ಹಾಗೂ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ ಕೃತಿಯ ಲೇಖಕರಾದ ಎನ್‌.ರುಕ್ಕೋಜಿರಾವ್‌ ಅವರು ಕೃತಿಚೌರ್ಯದ ಆರೋಪ ಮಾಡಿದ್ದಾರೆ.

ಪ್ರಕಾಶ್‌ ರಾಜ್‌ (ಮೇಹು) ಅವರ ‘ಅಂತರಂಗದ ಅಣ್ಣ’, 2021ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಕೃತಿ. ಈ ಕೃತಿಯಲ್ಲಿ ತಮ್ಮ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ಯಲ್ಲಿನ ಮಾಹಿತಿ ಮತ್ತು ಫೋಟೊಗಳು ಯಥಾವತ್ತಾಗಿ ಬಳಕೆಯಾಗಿವೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಎನ್‌.ರುಕ್ಕೋಜಿರಾವ್‌ ಅವರು ಆರೋಪಿಸಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಕ್ತ ದಾಖಲೆಗಳೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ರುಕ್ಕೋಜಿಯವರು ಆಯುಕ್ತರಿಗೆ ಬರೆದಿರುವ ಪತ್ರದ ಒಕ್ಕಣಿ ಹೀಗಿದೆ –
‘ಅಂತರಂಗದ ಅಣ್ಣ ಪುಸ್ತಕದ 200 ಪುಟಗಳಲ್ಲಿ 60 ಚಿತ್ರಗಳನ್ನು ನಾನು 2015ರಲ್ಲಿ ಹೊರತಂದ ಬೃಹತ್‌ ಕೃತಿ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ಯಿಂದ ಕದ್ದು ಪ್ರಕಟಿಸಿದ್ದಾಗಿದೆ. ಈ ಲೆಕ್ಕದಲ್ಲಿ 40 ಪುಟ ನನ್ನ ಕೃತಿಯದ್ದು. ನಾನು ಈ ಎರಡು ಸಂಪುಟಗಳನ್ನು ನನ್ನ ಬದುಕಿನ 15 ವರ್ಷಗಳನ್ನು ತೆತ್ತು ಅತ್ಯಂತ ಶ್ರಮಪಟ್ಟು ರೂಪಿಸಿದ್ದೆ. ದೊಡ್ಡ ಗಾತ್ರ, ವಿನ್ಯಾಸದ 2048 ಪುಟಗಳಲ್ಲಿ 8730 ಚಿತ್ರಗಳನ್ನು ಬಳಸಿದ್ದೇನೆ. ಕೃತಿಕಾರ ಪ್ರಕಾಶ್‌ ರಾಜ್‌ (ಮೇಹು) ಅವರು ನನ್ನ ಕೃತಿಯಿಂದ 60ಕ್ಕೂ ಹೆಚ್ಚು ಚಿತ್ರಗಳನ್ನು ಅನಾಮತ್ತಾಗಿ ಕದ್ದಿರುವುದಲ್ಲದೆ ನನ್ನ ಬರಹವನ್ನು ಕೂಡ ಒಂದು ಅಕ್ಷರವನ್ನೂ ಬದಲಾಯಿಸದೆ, ಅದನ್ನು ತಾನೇ ಬರೆದಂತೆ ಯಥಾವತ್ತು ತಮ್ಮ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಭಾರತದ ಹಕ್ಕುಸ್ವಾಮ್ಯ ಕಾಯ್ದೆಯಡಿ ನನ್ನ ಕೃತಿ ನೋಂದಾಯಿತವಾಗಿದೆ. ನಾನು ನ್ಯಾಯಾಲಯದಲ್ಲಿ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇನೆ. ತಾವು ಪೀತದೃಷ್ಟಿಯ ಪುಸ್ತಕಕ್ಕೆ ಪ್ರಕಟಿಸಿರುವ ರಾಜ್ಯ ಪ್ರಶಸ್ತಿಯನ್ನು ರದ್ದು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡುತ್ತಿದ್ದೇನೆ’

ರುಕ್ಕೋಜಿಯವರು ರಚಿಸಿರುವ ಎರಡು ಸಂಪುಟಗಳ ‘ಡಾ.ರಾಜಕುಮಾರ್‌ ಸಮಗ್ರ ಚರಿತ್ರೆ’ ಬೃಹತ್‌ ಕೃತಿ 28/10/2015ರಂದು ಲೋಕಾರ್ಪಣೆಗೊಂಡಿತ್ತು. ಈ ಮಹತ್ವದ ಕೃತಿಗೆ ರಾಷ್ಟ್ರದ ಅತ್ಯುನ್ನತ ಚಲನಚಿತ್ರ ಪುರಸ್ಕಾರವಾದ ಸ್ವರ್ಣಕಮಲ ಲಭಿಸಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ, ರಾಜ್ಯ ಸರ್ಕಾರದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ರಾಜಕುಮಾರ್‌ ದತ್ತಿ ಪ್ರಶಸ್ತಿ ಸಂದಿವೆ. ನಾಡಿನ ವಿವಿಧ ಕ್ಷೇತ್ರಗಳ 80ಕ್ಕೂ ಹೆಚ್ಚು ದಿಗ್ಗಜರು, ‘ಇಂತಹ ಪ್ರಯತ್ನ ದೇಶದಲ್ಲೇ ಪ್ರಥಮ’ ಎಂದು ಅನುಮೋದಿಸಿದ್ದಾರೆ.

ಈ ಬರಹಗಳನ್ನೂ ಓದಿ