ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಶಿವರಾಜಕುಮಾರ್‌ ‘A ಫಾರ್‌ ಆನಂದ್‌’ ಚಿತ್ರದಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್‌

ಪೋಸ್ಟ್ ಶೇರ್ ಮಾಡಿ
ಶಿವರಾಜಕುಮಾರ್‌ 'A ಫಾರ್‌ ಆನಂದ್‌' ಚಿತ್ರದಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್‌

ಎಂ.ಜಿ.ಶ್ರೀನಿವಾಸ್‌ ನಿರ್ದೇಶನದ ‘A ಫಾರ್‌ ಆನಂದ್‌’ ಚಿತ್ರತಂಡಕ್ಕೆ ಬಾಲಿವುಡ್‌ ನಟಿ ರವೀನಾ ಟಂಡನ್‌ ಸೇರ್ಪಡೆಯಾಗಿದ್ದಾರೆ. ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರವಿದು.

ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಟಿ, ಬಾಲಿವುಡ್‌ನ ‘ಮಸ್ತ್ ಮಸ್ತ್’ ಬೆಡಗಿ ರವೀನಾ ಟಂಡನ್ ಮತ್ತೊಮ್ಮೆ ಕನ್ನಡ ಬೆಳ್ಳಿಪರದೆ ಮೇಲೆ ಮಿಂಚಲು ಭರ್ಜರಿಯಾಗಿ ಸಜ್ಜಾಗಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ಪ್ರಧಾನಿ ‘ರಮಿಕಾ ಸೇನ್’ ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ನಿಬ್ಬೆರಗಾಗುವಂತೆ ಅಬ್ಬರಿಸಿದ್ದ ರವೀನಾ, ಇದೀಗ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ ಚಿತ್ರತಂಡವನ್ನು ಪ್ರಮುಖ ಪಾತ್ರದ ಮೂಲಕ ಅಧಿಕೃತವಾಗಿ ಸೇರಿಕೊಂಡಿದ್ದಾರೆ. ಚಂದನವನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶಿವಣ್ಣ ಮತ್ತು ರವೀನಾ ಟಂಡನ್ ಪರದೆ ಹಂಚಿಕೊಳ್ಳುತ್ತಿದ್ದು, ಈ ಇಬ್ಬರು ದಿಗ್ಗಜ ಕಲಾವಿದರ ಹೊಸ ಕಾಂಬಿನೇಷನ್ ಸಿನಿಪ್ರಿಯರಲ್ಲಿ ತೀವ್ರ ರೋಮಾಂಚನ ಮೂಡಿಸಿದೆ.

ಕರುನಾಡು ಮತ್ತು ಕನ್ನಡ ಚಿತ್ರರಂಗದೊಂದಿಗೆ ರವೀನಾ ಟಂಡನ್ ಅವರಿಗೆ ದಶಕಗಳ ಅವಿನಾಭಾವ ಹಾಗೂ ಭಾವನಾತ್ಮಕ ನಂಟಿದೆ. 1999ರಲ್ಲಿ ಬಿಡುಗಡೆಯಾಗಿದ್ದ ‘ಉಪೇಂದ್ರ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ರವೀನಾ, ಕನ್ನಡಿಗರ ಮನಗೆದ್ದಿದ್ದರು. ಆ ಬಳಿಕ ಸುದೀರ್ಘ ಗ್ಯಾಪ್ ನಂತರ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 2’ ಮೂಲಕ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರು. ಇದೀಗ ಮತ್ತೊಮ್ಮೆ ಕನ್ನಡಕ್ಕೆ ಮರಳಿರುವ ಈ ಗ್ಲಾಮರಸ್ ಹಾಗೂ ಪ್ರತಿಭಾವಂತ ತಾರೆ, ಶಿವಣ್ಣನಂತಹ ದಿಗ್ಗಜ ನಟನಿಗೆ ಜೋಡಿಯಾಗಿ ತೆರೆ ಹಂಚಿಕೊಳ್ಳುವ ಮೂಲಕ ‘ಎ ಫಾರ್ ಆನಂದ್’ ಚಿತ್ರದ ತೂಕ ಹಾಗೂ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದ್ದಾರೆ.

ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಈ ಚಿತ್ರದ ಚಿತ್ರೀಕರಣಕ್ಕೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು, ರವೀನಾ ಟಂಡನ್ ಭರ್ಜರಿಯಾಗಿ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾದ ರವೀನಾ ಅವರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿತು. ಈ ವೇಳೆ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ನಿಸಾರ್ ಅಹ್ಮದ್ ಅವರ ಸಮ್ಮುಖದಲ್ಲಿ ರವೀನಾ ಟಂಡನ್ ಅವರಿಗೆ ಸನ್ಮಾನ ಮಾಡಲಾಯಿತು. ಕ್ಯಾಂಪಸ್ ಪರಿಸರದಲ್ಲಿ ರವೀನಾ ಅವರನ್ನೊಳಗೊಂಡ ಮಹತ್ವದ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅವರ ಪಾತ್ರ ಸಿನಿಮಾದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಇರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಈ ಹಿಂದೆ ‘ಘೋಸ್ಟ್’ ಎಂಬ ಥ್ರಿಲ್ಲರ್ ಸಿನಿಮಾ ನೀಡಿದ್ದ ನಿರ್ದೇಶಕ ಎಂ.ಜಿ. ಶ್ರೀನಿವಾಸ್, ಈಗ ‘ಎ ಫಾರ್ ಆನಂದ್’ ಮೂಲಕ ಮತ್ತೊಂದು ವಿಶಿಷ್ಟ ಕಥೆಯೊಂದಿಗೆ ರವೀನಾ ಮತ್ತು ಶಿವಣ್ಣ ಅವರ ಜುಗಲ್‌ಬಂದಿ ಹೆಣೆಯುತ್ತಿದ್ದಾರೆ. ‘ವೇದ’, ‘ಭೈರತಿ ರಣಗಲ್‌’, ‘ಪಬ್ಬಾರ್‌’ ನಂತರ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನವಿರಲಿದೆ.

ಈ ಬರಹಗಳನ್ನೂ ಓದಿ