ಬಹುಭಾಷಾ ನಟಿ ಊರ್ವಶಿ ‘ಬುಲ್ಲಿ’ ಚಿತ್ರದೊಂದಿಗೆ ಕನ್ನಡಕ್ಕೆ ಮರಳಿದ್ದಾರೆ. ಭುವನ್ ಪೊನ್ನಣ್ಣ ಹೀರೋ ಆಗಿ ನಟಿಸುತ್ತಿರುವ ಈ ಕಾಮಿಡಿ ಚಿತ್ರದಲ್ಲಿ ಊರ್ವಶಿ ಅವರ ಮಗಳು ತೇಜಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರ ‘ಬುಲ್ಲಿ’ ಸಿನಿಮಾದ ಚಿತ್ರೀಕರಣದ ಮೊದಲನೆಯ ಶೆಡ್ಯೂಲ್ ಮುಕ್ತಾಯಗೊಂಡಿದೆ. ಈ ಕಾಮೆಡಿ ಚಿತ್ರದಲ್ಲಿ ಬಹುಭಾಷಾ ತಾರೆ ಹಿರಿಯ ನಟಿ ಊರ್ವಶಿ ಅವರು ಭುವನ್’ರೊಂದಿಗೆ ಅಭಿನಯಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಊರ್ವಶಿ ಅವರ ಮಗಳು ತೇಜ ಊರ್ವಶಿ ನಾಯರ್ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಸಮೃದ್ಧ್ ಸ್ಟುಡಿಯೋಸ್ ಹಾಗು ಭುವನಂ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಭರ್ಜರಿಯಾಗಿ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್ ಕುಮಾರ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ನಡೆಯಿತು.
‘ಹತ್ತು ವರ್ಷದ ನಂತರ ನಾನು ಕನ್ನಡ ಚಿತ್ರ ರಂಗಕ್ಕೆ ಮರಳಿದ್ದೇನೆ. ಹಲವಾರು ಕನ್ನಡ ಸಿನಿಮಾಗಳ ಆಫರ್ ಬಂದರೂ ನನಗೆ ಯಾವುದು ಹಿಡಿಸಿರಲಿಲ್ಲ. ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬಿಜಿ ಇದ್ದೆ. ಭುವನ್ ಮತ್ತು ಹರ್ಷಿಕಾ ತಂಡ ಚೆನೈ ಬಂದು ಸಿನಿಮಾದ ಬಗ್ಗೆ ಹಾಗೂ ಅವರ ಐಡಿಯ ಬಗ್ಗೆ ತಿಳಿಸಿದಾಗ ನನಗೆ ತುಂಬಾ ಖುಷಿ ಆಯಿತು. ಈಗ ಸಿನಿಮಾ ಮುಗಿಸಿದ ಮೇಲೆ ನಾನೇನಾದರೂ ಈ ಸಿನಿಮಾ ಮಾಡದಿದ್ದರೆ ಒಂದು ಒಳ್ಳೆಯ ಸಿನಿಮಾ ಮಿಸ್ ಮಾಡಿಕೊಳ್ಳುತ್ತಿದ್ದೆನಲ್ಲ ಎಂದು ಅನಿಸುತ್ತಿದೆ. ತುಂಬಾ ಅಚ್ಚುಕಟ್ಟಾಗಿ ಒಂದು ಔಟ್ & ಔಟ್ ಕಾಮೆಡಿ ಸಿನಿಮಾವನ್ನು ಈ ತಂಡ ಮಾಡುತ್ತಿದೆ. ಭುವನ್ ಜೊತೆ ನಟನೆ ಮಾಡಿ ತುಂಬಾ ಖುಷಿ ಆಯಿತು. ಅವರು ಮುಂದಿನ ದಿನಗಳಲ್ಲಿ ಒಬ್ಬ ಅಧ್ಬುತ ನಾಯಕ ನಟನಾಗಿ ನಿಮ್ಮ ಮುಂದೆ ಬರುತ್ತಾರೆ. ನಂಬರ್ ೧ ಆಗುವ ಎಲ್ಲಾ ಲಕ್ಷಣಗಳು ಅವರ ಪ್ರತಿಬೆಯಲ್ಲಿದೆ. ಅವರಿಗೆ ನನ್ನ ಆಶೀರ್ವಾದ ಸದಾ ಇರುತ್ತೆ’ ಎಂದರು ಹಿರಿಯ ನಟಿ ಊರ್ವಶಿ.
ನಾಯಕ ಭುವನ್ ಪೊನ್ನಣ್ಣ ಮಾತನಾಡಿ, ‘ಈವರೆಗೂ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪಂಚಭಾಷಾ ನಟಿ ಊರ್ವಶಿ ಅವರ ಜೊತೆಗೆ ನಟಿಸುವುದು ನನ್ನ ಬಹು ದಿನಗಳ ಆಸೆ. ಅದನ್ನು ನಾನು ಹರ್ಷಿಕಾ ಅವರ ಹತ್ತಿರವೂ ಹೇಳಿದ್ದೆ. ಈಗ ಆ ಆಸೆ ಈಡೇರಿದೆ. ಊರ್ವಶಿ ಅವರಿಂದ ತುಂಬಾ ಕಲಿತಿದ್ದೇನೆ. ಇನ್ನೂ, ಈ ಚಿತ್ರದ ಕಥೆ ಅನೂಪ್ ಅವರು ಹೇಳಿದಾಗ ಬಹಳ ಇಷ್ಟವಾಯಿತು. ನಮ್ಮ ಕಷ್ಟದ ಸಮಯದಲ್ಲಿ ಸದಾ ನಮ್ಮ ಜೊತೆಗಿರುವ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ಮೂಲಕ ನಿರ್ಮಾಪಕ ನವೀನ್ ಅವರ ಪರಿಚಯವಾಯಿತು. ಅವರು ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದರು. ಆಕರ್ಶ್ ಹಾಗೂ ಹರ್ಷಿಕಾ ಪೂಣಚ್ಛ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದೊಂದು ಡಾರ್ಕ್ ಕಾಮಿಡಿ ಜಾನರ್ ನ ಚಿತ್ರ. ಇದರಲ್ಲಿ ಯಾವುದೇ ಸಂದೇಶ ನೀಡಲು ಹೊರಟಿಲ್ಲ. ಚಿತ್ರದಲ್ಲಿ ಮನೋರಂಜನೆಯ ಪ್ರಧಾನ. ಎಲ್ಲಿಯ ವರೆಗು ಯಾವುದೇ ಸಿನಿಮಾದಲ್ಲಿ ಬಾರದ ತಾಯಿ – ಮಗನ ಒಂದು ಅಪರೂಪದ ಬಾಂಧವ್ಯವನ್ನು ಸಾರುವ ಕಥೆಯೂ ಹೌದು. ನಾನು ಈ ಚಿತ್ರದಲ್ಲಿ ಮಧ್ಯಮ ಕುಟುಂಬದ ಜೆನ್ ಝೀ GEN Z ಹುಡುಗ. ಯಾವುದಕ್ಕೂ ತಲೆ ಕೆಡಸಿಕೊಳ್ಳದೆ, ಯಾವುದೇ ಗುರಿಯಿಲ್ಲದೆ ತನ್ನಷ್ಟಕ್ಕೆ ತಾನು ಜೀವನ ನಡೆಸುವ ಹುಡುಗ ಕೂಡ. ನನ್ನ ಪಾತ್ರದ ಹೆಸರು ಬಲರಾಮ. ಸ್ನೇಹಿತರೆಲ್ಲಾ “ಬುಲ್ಲಿ” ಎಂದು ಕರೆಯುತ್ತಿರುತ್ತಾರೆ. ಹಾಗಾಗಿ ಚಿತ್ರಕ್ಕೆ “ಬುಲ್ಲಿ” ಎಂದು ಹೆಸರಿಟ್ಟಿದ್ದೇವೆ. ಚಿತ್ರದ ಚಿತ್ರೀಕರಣ ಇನ್ನೂ ಮುಕ್ತಾಯವಾಗಿಲ್ಲ. ಒಂದು ಹಂತದ ಚಿತ್ರೀಕರಣ ಮಾತ್ರ ಮುಕ್ತಾಯವಾಗಿದೆ. ಮೊದಲ ಹಂತದ ಚಿತ್ರೀಕರಣದಲ್ಲಿ ಊರ್ವಶಿ ಅವರ ಅಭಿನಯದ ಭಾಗದ ಚಿತ್ರೀಕರಣ ಪೂರ್ಣವಾಗಿದೆ’ ಎಂದರು.
”ಕಥಾ ವಿಚಿತ್ರ’ ಚಿತ್ರದಿಂದ ನನ್ನ ನಿರ್ದೇಶನದ ಪಯಣ ಶುರುವಾಯಿತು. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಈ ಚಿತ್ರದಲ್ಲಿ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿದ್ದಾರೆ. ‘ರಾಮ ಶ್ಯಾಮ ಭಾಮ’ ಚಿತ್ರದ ನಂತರ ಹಿರಿಯ ನಟಿ ಊರ್ವಶಿ ಅವರು ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಅಚ್ಯುತ್ ಕುಮಾರ್, ಓಂಪ್ರಕಾಶ್ ರಾವ್, ಪ್ರಕಾಶ್ ತುಮಿನಾಡು, ಹುಲಿ ಕಾರ್ತಿಕ್, ಆರ್ಯ ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದೊಂದು ಡಾರ್ಕ್ ಕಾಮಿಡಿ ಜಾನರ್ ಚಿತ್ರ. ತಾಯಿ – ಮಗನ ವಿಶೇಷ ಬಾಂಧವ್ಯದ ಕಥೆಯ ಚಿತ್ರವೂ ಹೌದು’ ಎಂದು ನಿರ್ದೇಶಕ ಅನೂಪ್ ಆಂಟೋನಿ ತಿಳಿಸಿದರು.
‘ವೃತ್ತಿಯಿಂದ ನಾನು ನಿರ್ದೇಶಕ. ಆದರೆ ನಟನಾಗೂ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಭುವನ್ ಹಾಗು ಹರ್ಷಿಕಾ ಪೂಣಚ್ಛ ಅವರು ಈ ಚಿತ್ರದಲ್ಲಿ ನಾನೇ ನಟಿಸಬೇಕೆಂದರು. ನಾನು ಊರ್ವಶಿ ಅವರ ದೊಡ್ಡ ಅಭಿಮಾನಿ. ಅವರ ಜೊತೆಗೆ ನಟಿಸಿರುವುದು ಖುಷಿಯಾಗಿದೆ , ನನ್ನ ನಟನ ಜೀವದಲ್ಲಿ ನನಗೆ ನಟನಾಗಿ ತುಂಬಾ ತೃಪ್ತಿ ಕೊಟ್ಟ ಸಿನಿಮಾ edu. ತುಂಬಾ ಎಂಜಾಯ್ ಮಾಡಿಕೊಂಡು ನಟಿಸಿದ್ದೇನೆ, ವೀಕ್ಷಕರಿಗೆ ತುಂಬಾನೆ ಇಷ್ಟವಾಗುತ್ತೆ’ ಎಂದರು ನಟ ಓಂಪ್ರಕಾಶ್ ರಾವ್. ‘ಅರವಿಂದ್ ವೆಂಕಟೇಶ್ ರೆಡ್ಡಿ ಅವರು ಈ ಚಿತ್ರ ಪ್ರಾರಂಭವಾಗಲು ಪ್ರಮುಖ ಕಾರಣ. ಕಥೆ ಚೆನ್ನಾಗಿದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರಲಿದೆ’ ಎಂದು ನಿರ್ಮಾಪಕ ನವೀನ್ ತಿಳಿಸಿದರು .
ಚಿತ್ರತಂಡದವರನ್ನು ಪರಿಚಯಿಸಿ ಮಾತನಾಡಿದ ಕಾರ್ಯಕಾರಿ ನಿರ್ಮಾಪಕಿ ಹರ್ಷಿಕಾ ಪೂಣಚ್ಛ, ‘ನಟಿ ಊರ್ವಶಿ ಅವರು ಬಹಳ ವರ್ಷಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿಯಾದರೆ, ಅವರ ಪುತ್ರಿ ತೇಜ ಅವರಿಗೆ ಬೇರೆ ಬೇರೆ ಭಾಷೆಗಳಿಂದ ಅವಕಾಶ ಬಂದರೂ ಈ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲು ಒಪ್ಪಿಕೊಂಡದ್ದು ಬಹಳ ಖುಷಿಯಾಗಿದೆ’ ಎಂದರು. ‘ಪಳ್ಳಾರ್’ ಎಂಬ ಪಾತ್ರದಲ್ಲಿ ನಟಿಸಿರುವುದಾಗಿ ನಟ ಹುಲಿ ಕಾರ್ತಿಕ್ ಹೇಳಿದರು. ಕಾರ್ಯಕಾರಿ ನಿರ್ಮಾಪಕ ಆಕರ್ಷ್ ಹಾಗೂ ಬಾಲ ನಟ ಆರ್ಯ ಸಹ ಚಿತ್ರದ ಕುರಿತು ಮಾತನಾಡಿದರು.








