- ಚಿತ್ರದ ಗಬ್ಬರ್ ಸಿಂಗ್ ಪಾತ್ರಕ್ಕೆ ಅಮ್ಜದ್ ಖಾನ್ ಮೊದಲ ಆಯ್ಕೆ ಆಗಿರಲಿಲ್ಲ. ಈ ಪಾತ್ರ ನಿರ್ವಹಿಸಲು ನಟ ಡ್ಯಾನಿ ಡೆನ್‌ಝೋಂಗ್‌ಪಾ ಅವರಿಗೆ ಕರೆ ಹೋಗಿತ್ತು. ಆಗ ಫಿರೋಜ್ ಖಾನ್ ಅವರ ‘ಧರ್ಮಾತ್ಮಾ’ ಚಿತ್ರೀಕರಣದಲ್ಲಿದ್ದರು ಡ್ಯಾನಿ. ಹಾಗಾಗಿ ಅಮ್ಜದ್ ಖಾನ್‌ರಿಗೆ ಅದೃಷ್ಟ ಒಲಿದುಬಂದಿತು.
- ಸೂಪರ್ ಹಿಟ್ ಸಿನಿಮಾದ ಕತೆ ಮೊದಲು ಹಲವರಿಂದ ತಿರಸ್ಕರಿಸಲ್ಪಟ್ಟಿತ್ತು. ಚಿತ್ರಕಥೆ ರಚಿಸಿದ ಸಲೀಂ-ಜಾವೇದ್, ಬಾಲಿವುಡ್‌ನ ಪ್ರಮುಖ ನಿರ್ದೇಶಕರು, ನಿರ್ಮಾಪಕರಿಗೆ ಕತೆ ಹೇಳಿದ್ದರು. ಇದು ಫ್ಲಾಪ್ ಶೋ ಆಗಲಿದೆ ಎಂದು ಮೂಗು ಮುರಿದವರೇ ಹೆಚ್ಚು. ಕೊನೆಗೆ ನಿರ್ಮಾಪಕ ಜಿ.ಪಿ.ಸಿಪ್ಪಿ ಮತ್ತು ನಿರ್ದೇಶಕ ರಮೇಶ್ ಸಿಪ್ಪಿ ಸಿನಿಮಾ ಮಾಡಲು ಮುಂದಾಗಿ ಇತಿಹಾಸ ಸೃಷ್ಟಿಸಿದರು.
- ಚಿತ್ರದಲ್ಲಿನ ಠಾಕೂರ್ ಬಲ್‌ದೇವ್ ಸಿಂಗ್ ಪಾತ್ರಕ್ಕೆ ಆರಂಭದಲ್ಲಿ ಎರಡು ಬೇರೆ ಆಯ್ಕೆಗಳಿದ್ದವು. ಚಿತ್ರಕಥೆಗಾರ ಸಲೀಂ ಅವರು ಈ ಪಾತ್ರದಲ್ಲಿ ನಟಿಸುವಂತೆ ದಿಲೀಪ್ ಕುಮಾರ್ ಅವರನ್ನು ಕೋರಿದ್ದರು. ಪಾತ್ರಕ್ಕೆ ಹೆಚ್ಚು ಸ್ಕೋಪ್ ಇಲ್ಲ ಎಂದು ದಿಲೀಪ್ ಸುಮ್ಮನಾದರು. ನಂತರ ಪ್ರಾಣ್ ಅವರಿಗೆ ಕರೆ ಹೋಗಿತ್ತು. ಕಾರಣಾಂತರಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ನಟ ಧರ್ಮೇಂದ್ರ ಕೂಡ ಠಾಕೂರ್ ಪಾತ್ರ ನಿರ್ವಹಿಸಲು ಇಚ್ಛಿಸಿದ್ದೂ ಇದೆ. ಕೊನೆಗೆ ಸಂಜೀವ್ ಕುಮಾರ್ ಈ ಪಾತ್ರದಲ್ಲಿ ಮಿಂಚಿದರು.
- ಅಮಿತಾಭ್ ಬಚ್ಚನ್ ವೃತ್ತಿ ಬದುಕಿನಲ್ಲಿ ‘ಶೋಲೆ’ ಬಹುದೊಡ್ಡ ತಿರುವು. ಈ ಚಿತ್ರಕ್ಕೂ ಮುನ್ನ ಅವರು ಸೋಲಿನ ಸುಳಿಯಲ್ಲಿ ಸಿಲುಕಿದ್ದರು. ನಿರ್ದೇಶಕ ಸಿಪ್ಪಿ ಚಿತ್ರದಲ್ಲಿನ ಜೈ ಪಾತ್ರಕ್ಕೆ ಶತ್ರುಜ್ಞ ಸಿನ್ಹಾ ಅವರನ್ನು ಕರೆತರಲು ತಯಾರಿ ನಡೆಸಿದ್ದರು. ಚಿತ್ರದ ತುಂಬಾ ದೊಡ್ಡ ಹೆಸರುಗಳೇ ಕಾಣಿಸುತ್ತವೆ ಎಂದು ಸುಮ್ಮನಾದ ಅವರು ಅಮಿತಾಭ್ ಬಚ್ಚನ್‌ರನ್ನು ಕರೆದು ಪಾತ್ರ ಕೊಟ್ಟರು. ಪಾತ್ರವೂ ಕ್ಲಿಕ್ಕಾಯ್ತು ಜೊತೆಗೆ ಬಚ್ಚನ್ ಸಿನಿಮಾ ಬದುಕಿಗೂ ಮಹತ್ವದ ತಿರುವು ಸಿಕ್ಕಿತು.
- 1975, ಆಗಸ್ಟ್ 15ರಂದು ಸಿನಿಮಾ ತೆರೆಕಂಡಿತು. ಮೊದಲೆರೆಡು ವಾರ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು. ಮತ್ತೆ ಚಿತ್ರೀಕರಣ ನಡೆಸಿ ಕ್ಲೈಮ್ಯಾಕ್ಸ್ ಬದಲಿಸಲು ಚಿತ್ರದ ತಂತ್ರಜ್ಞರು ಆಲೋಚಿಸಿದ್ದರು. ಅಮಿತಾಭ್ ಬಚ್ಚನ್ ನಿರ್ವಹಿಸಿದ್ದ ಜೈ ಪಾತ್ರವನ್ನು ಕೊನೆಗೊಳಿಸದೆ ಜೀವಂತವಾಗಿಟ್ಟರೆ ಜನರಿಗೆ ಇಷ್ಟವಾಗಬಹುದು ಎಂದೆಲ್ಲಾ ಯೋಚಿಸದ್ದರು. ಆದರೆ ಮೂರನೇ ವಾರದಿಂದ ಚಿತ್ರದ ಗಳಿಕೆಯಲ್ಲಿ ಗಣನೀಯ ಏರಿಕೆ ಕಂಡಿದ್ದರಿಂದ ಕ್ಲೈಮ್ಯಾಕ್ಸ್ ಬದಲಿಸುವ ಆಲೋಚನೆ ಕೈಬಿಡಲಾಯಿತು.