ಸಚಿವ ರಾಮಲಿಂಗಾರೆಡ್ಡಿ ಅವರು ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹೊನ್ನರಾಜ್ ಚಿತ್ರಕಥೆ ರಚಿಸಿ ನಿರ್ದೇಶಿಸಿ, ನಟಿಸಿರುವ ಸಿನಿಮಾ ತೆರೆಗೆ ಸಿದ್ಧವಾಗಿದೆ.
ಯಶ್ ಅಭಿನಯದ ‘ರಾಜಾಹುಲಿ’ ಚಿತ್ರಕ್ಕೆ ಕೆಲಸ ಮಾಡಿದ್ದ ಹೊನ್ನರಾಜ್ ಈಗ ನಾಯಕ ಮತ್ತು ನಿರ್ದೇಶಕನಾಗಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದು ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಕಲಾವಿದರ ಸಂಘದಲ್ಲಿ ನೆರವೇರಿತು. ಸಚಿವ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ನಟ ಪ್ರೇಮ್ ಸಾಂಗ್ ರಿಲೀಸ್ ಮಾಡಿದರು. ನಿರ್ಮಾಪಕರ ಸಂಘದ ಎಂ.ಜಿ.ರಾಮಮೂರ್ತಿ, ನಿರ್ಮಾಪಕ ಸಾರಾ.ಗೋವಿಂದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ‘ಹೊನ್ನರಾಜ್ ಈ ಚಿತ್ರದಲ್ಲಿ ನಟನೆ, ನಿರ್ದೇಶನದ ಜತೆ, ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಪ್ರದರ್ಶನಗೊಂಡು ಹಾಕಿದ ಹಣದ 4ರಷ್ಟು ವಾಪಸ್ ಬರಲಿ’ ಎಂದು ಶುಭ ಹಾರೈಸಿದರು. ನಟ ಪ್ರೇಮ್ ಮಾತನಾಡಿ, ‘ಹೊನ್ನರಾಜ್ ನನಗೆ ಜೂನಿಯರ್. ಆಗ ಚಾಮರಾಜ್ ಮಾಸ್ಟರ್ ನಮಗೆಲ್ಲ ಗುರುಗಳು. ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರಿಗೆ ಒಳ್ಳೆ ಫಲ ಸಿಗಲಿ’ ಎಂದು ಶುಭ ಹಾರೈಸಿದರು. ಸಾರಾ ಗೋವಿಂದು ಮಾತನಾಡಿ, ‘ಸಿರಿವಂತ ರಾಜಕಾರಣಿ ಕೈಲಿ ಸಾಂಗ್ ಲಾಂಚ್ ಮಾಡಿಸಿದ್ದೀರಿ, ಸಚಿವರ ಕೈಗುಣ ಚೆನ್ನಾಗಿದೆ. ನಾವೆಲ್ಲ ನಿಮ್ಮ ಬೆನ್ನೆಲುಬಾಗಿರುತ್ತೇವೆ, ರಿಲೀಸ್ ಸಮಯದಲ್ಲಿ ನಿಮ್ಮ ಜತೆ ಇರುತ್ತೇವೆ’ ಎಂದರು.
ಈ ಸಂದರ್ಭದಲ್ಲಿ ನಾಯಕ, ನಿರ್ದೇಶಕ ಹೊನ್ನರಾಜ್ ಮಾತನಾಡುತ್ತ, ‘ಇದೊಂದು ಹಳ್ಳಿ ಸೊಗಡಿನ ಚಿತ್ರ. ಯಶ್ ಅಭಿಮಾನಿಯಾದ ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು. ಸಮಾಜಸೇವೆ ಅಂತ ಹಳ್ಳಿಗೆ ಒಳ್ಳೆಯದನ್ನು ಮಾಡಲು ಹೋಗಿ ಆತ ಏನೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಫ್ಯಾಮಿಲಿ ಎಂಟರ್ ಟೈನರ್ ಕಥೆಯೊಂದಿಗೆ ಹೇಳಲು ಪ್ರಯತ್ನಿಸಿದ್ದೇನೆ. ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಂಗಿ ಪಾತ್ರವನ್ನು ರೂಪ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸಿಕ್ಕಿದ್ದು ಸೆಪ್ಟೆಂಬರ್ ನಲ್ಲಿ ರಿಲೀಸ್ ಮಾಡೋ ಯೋಜನೆಯಿದೆ. ಈ ಚಿತ್ರ ನಿರ್ಮಾಣದಲ್ಲಿ ನನ್ನ ತಮ್ಮ, ತಂಗಿ ಹಾಗೂ ಚಿಕ್ಕಮ್ಮ, ಸ್ನೇಹಿತರು ಸೇರಿದಂತೆ ಹಲವಾರು ಜನ ಕೈಜೋಡಿಸಿದ್ದಾರೆ’ ಎಂದು ಹೇಳಿ ಅವರಿಗೆ ವೇದಿಕೆಯಲ್ಲಿ ಗೌರವಿಸಿದರು.
ಈ ಚಿತ್ರವನ್ನು ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಮೂಲಕ ಹೊನ್ನುರಾಜ್ ಅವರೇ ನಿರ್ಮಾಣ ಸಹ ಮಾಡಿದ್ದಾರೆ. ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ ನೃತ್ಯ ನಿರ್ದೇಶನವಿದೆ. ಮೈಸೂರು ಮಂಜುಳ , ರೇಖಾದಾಸ್, ಮಂಜಣ್ಣ, ಗಿರೀಶ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.







