ಆರ್ದೆಶಿರ್ ಇರಾನಿ ನಿರ್ದೇಶನದ `ಆಲಂ ಅರಾ’ ಭಾರತದ ಮೊದಲ ಟಾಕೀ ಸಿನಿಮಾ. 1931ರ ಮಾರ್ಚ್ 14ರಂದು ಚಿತ್ರ ತೆರೆಕಂಡಿತು. ‘All living. Breathing. 100 percent talking.’ ಎನ್ನುವ ಪಂಚ್‌ಲೈನ್‌ನೊಂದಿಗೆ ಚಿತ್ರವನ್ನು ಪ್ರಚಾರ ನೀಡಲಾಗಿತ್ತು. ಯುವರಾಜ ಆದಿಲ್ ಜಹಾಂಗೀರ್ ಖಾನ್ ಮತ್ತು ಜಿಪ್ಸಿ ಯುವತಿ ಆಲಂ ಅರಾ ಮಧ್ಯೆಯ ಪ್ರೇಮಕಥಾನಕವಿದು. ಜೋಸೆಫ್ ಡೇವಿಡ್ ರಚಿತ ಪಾರ್ಸಿ ನಾಟಕವನ್ನು ಆಧರಿಸಿದ ಪ್ರಯೋಗ. ವಿಠ್ಠಲ್ ಮತ್ತು ಝುಬೇದಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.

ಮುಂಬಯಿಯ ಮೆಜಸ್ಟಿಕ್ ಥಿಯೇಟರ್‌ನಲ್ಲಿ ಸಿನಿಮಾ ಎಂಟು ವಾರ ಹೌಸ್‌ಫುಲ್ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿನ ‘ದೇ ದೇ ಖುದಾ ಕೆ ನಾಮ್ ಪೆ’ ಭಾರತೀಯ ಸಿನಿಮಾದ ಮೊದಲ ಹಾಡು ಎಂದು ದಾಖಲಾಯ್ತು. ಫಿರೋಜ್‌ಷಾ ಮಿಸ್ತ್ರಿ ಸಂಗೀತ ಸಂಯೋಜನೆಯ ಈ ಗೀತೆಯನ್ನು ವಾಜಿರ್ ಮೊಹಮ್ಮದ್ ಖಾನ್ ಹಾಡಿದ್ದರು.

‘ಅಲಾಂ ಅರಾ’ ಚಿತ್ರಿಸಿದ್ದು ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದ ಸ್ಟೂಡಿಯೋದಲ್ಲಿ. ರೈಲುಗಳು ಹಾಗೂ ಜನದಟ್ಟಣೆಯ ಶಬ್ಧವನ್ನು ತಪ್ಪಿಸಲು ಬೆಳಗಿನ ಜಾವ 1 ಗಂಟೆಯಿಂದ 4 ಗಂಟೆವರೆಗೆ ಚಿತ್ರೀಕರಣ ನಡೆಸಲಾಯ್ತು. ನಲವತ್ತರ ದಶಕದಲ್ಲಿ ಹಿಂದಿ ರಂಗಭೂಮಿ ಮತ್ತು ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ ಪೃಥ್ವಿರಾಜ್ ಕಪೂರ್ ಅವರ ಚಿತ್ರದಲ್ಲಿ ಜನರಲ್ ಆದಿಲ್ ಖಾನ್ ಪಾತ್ರ ನಿರ್ವಹಿಸಿದ್ದರು.