ಭಾರತೀಯ ಸಿನಿಮಾದ ಪ್ರಮುಖ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಇಂದು 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಲ್ಕಾ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ವಿವಿಧ ಭಾಷೆಗಳ ಸುಮಾರು 15,000ಕ್ಕೂಹೆಚ್ಚು ಹಾಡುಗಳನ್ನು ಹಾಡಿದ್ದಾರೆ. 36 ಬಾರಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು 7 ಬಾರಿ ಪುರಸ್ಕಾರ ಪಡೆದಿದ್ದಾರೆ. ‘ಘೂಂಗಟ್ ಕಿ ಆದ್ ಸೆ’ (ಹಂ ಹೈ ರಹೀ ಪ್ಯಾರ್ ಕೆ, 1993) ಮತ್ತು ‘ಕುಚ್ ಕುಚ್ ಹೋತಾ ಹೈ’ (ಕುಚ್ ಕುಚ್ ಹೋತಾ ಹೈ, 1998) ಹಾಡುಗಳಿಗೆ ಎರಡು ಬಾರಿ ಅತ್ಯುತ್ತಮ ಗಾಯನಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿಗಳು ಸಂದಿವೆ.

ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು ಜೊತೆಗೆ ಅಲ್ಕಾ ಯಾಗ್ನಿಕ್ ಹಾಡಿರುವ ನೂರಾರು ಹಿಂದಿ ರೊಮ್ಯಾಂಟಿಕ್ ಹಾಡುಗಳು ಎವರ್‌ಗ್ರೀನ್ ಹಾಡುಗಳ ಪಟ್ಟಿಯಲ್ಲಿವೆ. ಬಿಬಿಸಿ ಪಟ್ಟಿ ಮಾಡಿರುವ ಸಾರ್ವಕಾಲಿಕ 40 ಬಾಲಿವುಡ್ ಹಾಡುಗಳಲ್ಲಿ ಅಲ್ಕಾ ದನಿಯಾಗಿರುವ 20 ಹಾಡುಗಳಿವೆ ಎನ್ನುವುದು ವಿಶೇಷ. ಅತಿ ಹೆಚ್ಚು ಫೀಮೇಲ್ ಸೋಲೋ ಸಾಂಗ್‌ಗಳನ್ನು ಹಾಡಿರುವ ಗಾಯಕಿ. 2021ರ ಜನವರಿಯಲ್ಲಿ ಬಿಡುಗಡೆಯಾದ ಯೂಟ್ಯೂಬ್ ಮ್ಯೂಸಿಕ್ ಚಾರ್ಟ್‌ನ ಪಟ್ಟಿಯಲ್ಲಿ ಅಲ್ಕಾ ಮೊದಲ ಸ್ಥಾನದಲ್ಲಿದ್ದಾರೆ. ಭಾರತೀಯ ಸಿನಿಮಾ ಸಂಗೀತಕ್ಕೆ ಅವರ ಕೊಡುಗೆ ಪರಿಗಣಿಸಿ 2013ರಲ್ಲಿ ಲತಾ ಮಂಗೇಶ್ಕರ್ ಪ್ರಶಸ್ತಿ ಕೊಡಲಾಗಿದ್ದು, ಹತ್ತಾರು ಅಂತಾರಾಷ್ಟ್ರೀಯ ಗೌರವಗಳಿಗೆ ಪಾತ್ರರಾಗಿದ್ದಾರೆ.