ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಿರ್ದೇಶಕ ಸಿದ್ದಲಿಂಗಯ್ಯನವರನ್ನು ಸ್ಮರಿಸಿದ ಚರಣ್‌ರಾಜ್‌

Share this post
ಚರಣ್‌ ರಾಜ್‌
ನಟ – ನಿರ್ಮಾಪಕ

ಬಹುಭಾಷಾ ನಟ ಚರಣ್‌ರಾಜ್‌ ಇಂದು 63ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು ಸಿದ್ದಲಿಂಗಯ್ಯನವರ ‘ಪರಾಜಿತ’ ಚಿತ್ರದೊಂದಿಗೆ. ಇದೀಗ ಅವರು ಒಂಬತ್ತು ಭಾಷೆಗಳ ನಾನೂರಕ್ಕೂ ಹೆಚ್ಚು ಸಿನಿಮಾಗಳ ನಟ. ಚಿತ್ರರಂಗಕ್ಕೆ ಪ್ರವೇಶ ಪಡೆದ ಆರಂಭದ ದಿನಗಳನ್ನು ಅವರಿಲ್ಲಿ ನೆನಪು ಮಾಡಿಕೊಂಡಿದ್ದಾರೆ.

ಬೆಂಗಳೂರಿಗೆ 1976ರ ಸುಮಾರಿಗೆ ಬಂದ ನಾನು 1981ರವರೆಗೂ ಸಿನಿಮಾ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಇದ್ದೆ. ಬೆಳಗಾವಿಯವ ನಾನು. ಹಳೇ ಮೈಸೂರು ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಆರೇಳು ವರ್ಷಗಳ ನಂತರವೂ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಊರಿಗೆ ವಾಪಸು ಹೋದರೆ ಮನೆಯಲ್ಲಿ ಮುಖ ತೋರಿಸೋದು ಹೇಗೆಂದು ಬೇಸರ ಮಾಡಿಕೊಳ್ಳುತ್ತಿದ್ದೆ. ಆಗೆಲ್ಲಾ ಆತ್ಮಹತ್ಯೆ ಬಗೆಗೂ ಯೋಚಿಸಿದ್ದಿದೆ.

ಹೊಟ್ಟೆಪಾಡಿಗೋಸ್ಕರ ನೈಟ್‍ಕ್ಲಬ್, ಆರ್ಕೇಸ್ಟ್ರಾಗಳಲ್ಲಿ ಹಾಡುತ್ತಾ ಇದ್ದೆ. ಕೆಲವು ಸ್ನೇಹಿತರು ಸಹಾಯಕ್ಕೆ ಬಂದಿದ್ದರು. ಗ್ಯಾಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿ.ಎಸ್.ರಾವ್ ತಮ್ಮ ಸಂಬಳದಲ್ಲಿ ಐವತ್ತೋ, ನೂರೋ ಕೊಡ್ತಾ ಇದ್ರು. ಆಗ ರತನ್ ಮಹಲ್‍ನ ರೂಂನಲ್ಲಿ ದಾವಣಗೆರೆಯ ದುಗ್ಗಪ್ಪ ನನ್ನ ರೂಂ ಮೇಟ್. ಸರ್ಕಾರಿ ನೌಕರರಾಗಿದ್ದ ಅವರಿಗೆ ಹಾಡು, ನಾಟಕದ ಗೀಳು ಇತ್ತು. ‘ತಾಳ್ಮೆ ತಗೋ ಚರಣರಾಜಪ್ಪ, ಎಲ್ಲಾ ಒಳ್ಳೇದಾಗುತ್ತೆ’ ಅಂತ ಅವ್ರು ಸಮಾಧಾನ ಹೇಳ್ತಾ ಇದ್ರು.

ಅದೊಂದು ದಿನ ರಾತ್ರಿ ರತನ್‍ಮಹಲ್‍ನ ಎದುರು ಕಲ್ಲಿನ ಕಟ್ಟೆಯೊಂದರ ಮೇಲೆ ಕುಳಿತಿದ್ದೆ. ಅಲ್ಲಿಗೆ ಬಂದ ದುಗ್ಗಪ್ಪ, ‘ಸಿದ್ದಲಿಂಗಯ್ಯನವರು ಪರಾಜಿತ ಅಂತ ಸಿನಿಮಾ ಮಾಡ್ತಿದಾರೆ. ಹೀರೋ ಬೇಕಂತೆ. ನೀನ್ಯಾಕೆ ಪ್ರಯತ್ನಿಸಬಾರದು?’ ಎಂದರು. ಅದು ನನಗೊಂಥರಾ ಅಶರೀರವಾಣಿಯಂತೆ ಕೇಳಿಸಿತು! ಇಡೀ ರಾತ್ರಿ ನಿದ್ದೆ ಮಾಡಲಿಲ್ಲ. ಬೆಳಗ್ಗೆ ಐದರ ಹೊತ್ತಿಗೆ ತಣ್ಣೀರು ಸ್ನಾನ ಮಾಡಿ ರಾಜಾಜಿನಗರದ ಸಿದ್ದಲಿಂಗಯ್ಯನವರ ಮನೆಗೆ ತೆರಳಿದೆ.

ಬೆಳಗ್ಗೆ ಆರೂವರೆ ಹೊತ್ತಿಗೆ ಸಿದ್ದಲಿಂಗಯ್ಯನವರ ಮನೆ ಎದುರಿದ್ದೆ. ಬೆಲ್ ಹೊಡೆದು ಹಿಂದೆ ಸರಿದು ನಿಂತೆ. ಮೇಲೆ ಪೋರ್ಟಿಕೋದಿಂದ ನನ್ನನ್ನು ನೋಡಿದ ಸಿದ್ದಲಿಂಗಯ್ಯನವರ ಚಿಕ್ಕ ಮಗ ಸುರೇಶ್, ‘ಅಪ್ಪಾಜಿ ಯಾರೋ ಬಂದವ್ರೆ ನೋಡಿ, ನೀವು ಹೇಳಿದ್ರಲ್ಲಾ… ಆ ಥರಾನೇ ಇದಾರೆ ಅಂದ್ರು!’ ಬಹುಶಃ ಮನೆಯಲ್ಲಿ ಪರಾಜಿತ ಚಿತ್ರದ ಕಥೆಯನ್ನು ಸಿದ್ದಲಿಂಗಯ್ಯನವರು ಡಿಸ್ಕಸ್ ಮಾಡಿದ್ರು ಅಂತ ಕಾಣತ್ತೆ. ಸುರೇಶ್ ಹಾಗೆ ಹೇಳುತ್ತಿದ್ದಂತೆ ಸಿದ್ದಲಿಂಗಯ್ಯನವರು ಒಳಗೆ ಕರೆದು ಕೂರಿಸಿದರು.

‘ನಾಟಕ, ನಟನೆ ಮಾಡಿದ್ದಿದೆಯೇ’ ಎಂದು ಕೇಳಿದರು ಸಿದ್ದಲಿಂಗಯ್ಯ. ನಾನಾಗ ಡೊಂಕು ಬಾಲದ ನಾಯಕರು ನಾಟಕ ಮಾಡುತ್ತಿದ್ದೆ. ನಾನು ಈ ನಾಟಕದ ಒಂದು ಸನ್ನಿವೇಶವನ್ನು ನಟಿಸಿ, ಡೈಲಾಗ್ ಹೇಳಿದವನೇ ಅವರ ಕಾಲು ಹಿಡಿದುಕೊಂಡು ಅಳೋದಕ್ಕೆ ಶುರು ಮಾಡಿದೆ! ‘ಬೆಳಗಾವಿಯಿಂದ ಬಂದು ಆರೇಳು ವರ್ಷವಾಯ್ತು. ಯಾರೂ ಅವಕಾಶ ಕೊಟ್ಟಿಲ್ಲ. ನಿಮ್ಮ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಕೊಡಿ. ನಟಿಸಿ ಊರಿಗೆ ಹೋಗಿ ಬಿಡ್ತೀನಿ’ ಎಂದದು ಅವಲತ್ತುಕೊಂಡೆ.

ಥಟ್ಟನೆ ನನ್ನ ಭುಜ ಹಿಡಿದೆತ್ತಿ ತಬ್ಬಿಕೊಂಡು, ‘ಬಾರಪ್ಪ ಹಂಗೆಲ್ಲಾ ಅಳಬಾರದು. ನಾನೂ ನಿನ್ನ ಹಾಗೆಯೇ ಕಷ್ಟಪಟ್ಟು ಬಂದಿದೀನಿ. ಚೆನ್ನಾಗಿ ನಟಿಸಿದ್ದೀಯ. ಬ್ರಾಡ್‍ವೇ ಹೋಟೆಲ್‍ಗೆ ಬಾ’ ಅಂದವರೇ ಕಾರಿನಲ್ಲಿ ಹೊರಟುಹೋದರು. ನಾನು ಕೂಡಲೇ ನಡೆದೇ ಬ್ರಾಡ್‍ವೇ ಹೋಟೆಲ್‍ಗೆ ಹೋದೆ. ಅಲ್ಲಿ ನೋಡಿದರೆ, ಸಿನಿಮಾ ಅವಕಾಶಕ್ಕಾಗಿ ಗಾಂಧಿ ನಗರದಲ್ಲಿ ಅಲೆಯುತ್ತಿದ್ದ ಹತ್ತಾರು ಹುಡುಗರು ಬಂದಿದ್ದರು! ಇವರೆಲ್ಲರ ಮಧ್ಯೆ ನನಗೆ ಅವಕಾಶ ಸಿಗೋದು ಕಷ್ಟವೆಂದೇ ನಾನು ಭಾವಿಸಿದೆ.

ಬೆಳಗ್ಗೆ ಸುಮಾರು ಒಂಬತ್ತು ಗಂಟೆ ಸಮಯ. ಅವಕಾಶಕ್ಕಾಗಿ ಅಲೆದಾಡುತ್ತಿದ್ದ ನಾವು ಸಾಲಾಗಿ ನಿಂತಿದ್ದೆವು. ತಮ್ಮ ಮನೆಯಲ್ಲಿ ನನ್ನನ್ನು ನೋಡಿದ್ದ ಸಿದ್ದಲಿಂಗಯ್ಯನವರು ನನ್ನ ಹೆಸರನ್ನು ಮರೆತಿದ್ದರು. ‘ಕೊನೆಯಲ್ಲಿ ನಿಂತಿದ್ದಾನಲ್ಲ… ಆ ಎತ್ತರದ ಹುಡುಗ, ಅವನಲ್ಲೇನೋ ವಿಶೇಷವಿದೆ. ಅವನೇ ಈ ಸಿನಿಮಾದ ಹೀರೋ. ಉಳಿದವರಿಗೆ ಮುಂದಿನ ಚಿತ್ರಗಳಲ್ಲಿ ಅವಕಾಶ ಕೊಡೋಣವಂತೆ’ ಎಂದರು.

ಛಾಯಾಗ್ರಾಹಕ ಚಿಟ್ಟಿಬಾಬು, ಪೈಟರ್ ಶಿವಯ್ಯ ಸೇರಿದಂತೆ ಸಹನಿರ್ದೇಶಕರು ಅಲ್ಲಿದ್ದರು. ಎಲ್ಲರಿಗೂ ನನ್ನ ಆಯ್ಕೆ ಒಪ್ಪಿಗೆಯಾಯ್ತು. ‘ಡಿಸೆಂಬರ್ 23ಕ್ಕೆ ನೀನು ಚಿಕ್ಕಮಗಳೂರಿಗೆ ಬರಬೇಕು’ ಎಂದವರೇ 300 ರೂಪಾಯಿ ಅಡ್ವಾನ್ಸ್ ಕೊಡಿಸಿದರು. ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಶುರುವಾಯ್ತು. ಮೊದಲ ಚಿಕ್ಕ ಶಾಟ್ ಸಲೀಸಾಗಿ ಪೂರೈಸಿದೆ. ಎರಡನೇ ಶಾಟ್‍ನಲ್ಲಿ ಇನ್ನೂರೈವತ್ತು ಅಡಿ ರೀಲ್‍ನ ಒಂದೇ ಶಾಟ್ ಇತ್ತು. ಮೂರು ಪೇಜ್ ಡೈಲಾಗ್ ಇದ್ದ ಸನ್ನಿವೇಶವನ್ನು ಒಂದೇ ಟೇಕ್‍ಗೆ ಓಕೆ ಮಾಡಿದೆ. ಅಲ್ಲಿದ್ದ ಎಲ್ಲರೂ ಕ್ಲ್ಯಾಪ್ ಹೊಡೆದರು.

ಸೆಟ್‍ನಲ್ಲಿದ್ದ ಹಿರಿಯ ನಟ ಅಶ್ವಥ್ ಸರ್, ‘ಸಿದ್ಲಿಂಗಯ್ಯನೋರೇ… ನೀವು ಒಳ್ಳೇ ಹುಡುಗನಿಗೆ ಅವಕಾಶ ಕೊಟ್ಟಿದ್ದೀರಿ. ಇವನು ಚೆನ್ನಾಗಿ ಬೆಳೀತಾನೆ’ ಎಂದರು. ಹತ್ತಿರ ಬಂದ ಸಿದ್ದಲಿಂಗಯ್ಯನವರೂ ಬೆನ್ನು ತಟ್ಟಿದರು. ಮುಂದೆ ಚಿತ್ರ ತೆರೆಕಂಡು ನನಗೆ ಒಳ್ಳೆಯ ಹೆಸರು ಬಂದಿತು. ಮೊದಲ ಬಾರಿಗೆ ನನ್ನೂರು ಬೆಳಗಾವಿಗೆ  ಫ್ಲೈಟ್‍ನಲ್ಲಿ ಹೋದೆ. ಅಲ್ಲಿ ನನ್ನ ಸ್ನೇಹಿತರು, ಕುಟುಂಬದವರೂ ಸೇರಿದಂತೆ ಸಾವಿರಾರು ಜನರು ನನ್ನನ್ನು ಬರಮಾಡಿಕೊಂಡಿದ್ದರು! ಇಂಥದ್ದೊಂದು ವೆಲ್‍ಕಮ್‍ಗೆ ಕಾರಣರಾಗಿದ್ದು ಸಿದ್ದಲಿಂಗಯ್ಯನವರು. ಜನ್ಮಜನ್ಮಕ್ಕೂ ನಾನು ಅವರಿಗೆ ಋಣಿಯಾಗಿರುತ್ತೇನೆ. ಅಂದಿನ ಅವರ ಆಶೀರ್ವಾದವೇ ಇಂದಿಗೂ ನನ್ನನ್ನು ಕಾಯುತ್ತಿದೆ.

ಈಗ ನಾಲ್ಕು ಜನ ಬಂದು ನನ್ನೊಂದಿಗೆ –ಫೋಟೋ ತೆಗೆಸಿಕೊಂಡ್ರೆ, ನಾನು ಫಸ್ಟ್ ನೆನೆಯೋದೇ ಸಿದ್ದಲಿಂಗಯ್ಯನವರನ್ನು. ಅಪ್ಪ-ಅಮ್ಮ ನಂತರದ ದೇವರ ಸ್ಥಾನ ಸಿದ್ದಲಿಂಗಯ್ಯನವರಿಗೆ. ಅವರು ನನ್ನ ಮದುವೆಗೆ ನನಗೆ ಬಂಗಾರದ ಉಂಗುರ, ಪತ್ನಿಗೆ ಸೀರಿ ಕೊಟ್ಟಿದ್ದರು. ಆ ಉಂಗುರ ಅದೆಲ್ಲಿ ಕಳೆದು ಹೋಗುತ್ತದೋ ಎಂದು ಬೆರಳಿಗೆ ಹಾಕಿಕೊಳ್ಳದೆ ಭದ್ರವಾಗಿ ತೆಗೆದಿಟ್ಟಿದ್ದೇನೆ. ಮಗನನ್ನು ಸಿನಿಮಾಗೆ ಪರಿಚಯಿಸುತ್ತೇನೆ ಎಂದಾಗ, ಸಿದ್ದಲಿಂಗಯ್ಯನವರು ಖುಷಿ ಪಟ್ಟಿದ್ದರು. ಆ ಕುರಿತು ಸಿಕ್ಕಾಗಲೆಲ್ಲಾ ತುಂಬಾ ಆಸ್ಥೆ ವಹಿಸಿ ಮಾತನಾಡುತ್ತಿದ್ದರು.

ನಾನೀಗ ಹಿಂದಿ, ದಕ್ಷಿಣದ ಭಾಷೆಗಳೂ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಸುಮಾರು ನಾನೂರಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಇದಕ್ಕೆ ಭದ್ರ ಅಡಿಪಾಯ ಸಿಕ್ಕಿದ್ದೇ ಸಿದ್ದಲಿಂಗಯ್ಯನವರ ಗರಡಿಯಲ್ಲಿ. ಪರಾಜಿತ ಚಿತ್ರೀಕರಣದ ಸಂದರ್ಭದಲ್ಲಿ ನಾನು ಅನನುಭವಿ. ನಟನೆ, ಡೈಲಾಗ್, ಫೈಟ್, ಡಾನ್ಸ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ನನ್ನನ್ನು ತಿದ್ದಿ ತೀಡಿದರು. ಅವರಿಗೆ ಜನಾರ್ಧನ ಹೋಟೆಲ್‍ನ ಖಾಲಿ ದೋಸೆ, ಬೆಣ್ಣೆ ಮುರುಕು, ಮೈಸೂರು ಪಾಕ್ ತುಂಬಾ ಇಷ್ಟವಾಗೋದು. ನಾನು ಬೆಂಗಳೂರಿಗೆ ಬಂದಾಗ ಅಲ್ಲಿಂದ ಈ ತಿನಿಸುಗಳೊಂದಿಗೆ ಅವರನ್ನು ಭೇಟಿ ಮಾಡುತ್ತಿದ್ದೆ. ಈಗ್ಲೂ ಅದೇ ಟೇಸ್ಟ್ ಇದೆ! ಎನ್ನುತ್ತಾ ಚಿಕ್ಕಮಗುವಿನಂತೆ ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು. ಈಗಲೂ ಆ ಸಂಭ್ರಮದ ಚಿತ್ರ ನನ್ನ ಕಣ್ಮುಂದೆಯೇ ಇದೆ. ಹೀಗೆ, ಅವರೊಂದಿಗಿನ ಕ್ಷಣಗಳನ್ನು ನೆನಪು ಮಾಡಿಕೊಂಡರೆ ಖುಷಿಯಾಗುತ್ತದೆ. ದೇವರು ಸಿದ್ದಲಿಂಗಯ್ಯನವರಂತಹ ಒಳ್ಳೆಯ ಗುರುಗಳ ಬಳಿ ನನ್ನನ್ನು ಸೇರಿಸಿದ. ಅದಕ್ಕಾಗಿ ನಾನು ದೇವರಿಗೂ, ದೇವರ ರೂಪದಲ್ಲಿ ಬಂದ ಸಿದ್ದಲಿಂಗಯ್ಯನವರಿಗೂ ಸದಾಕಾಲ ಋಣಿಯಾಗಿರುತ್ತೇನೆ.

ಸಿದ್ದಲಿಂಗಯ್ಯನವರೊಂದಿಗೆ ಚರಣ್‌ರಾಜ್‌ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ